ರಾಜಕೀಯ ಏಳುಬೀಳು ಕಂಡ ವರ್ಷ

| Published : Dec 29 2023, 01:30 AM IST

ಸಾರಾಂಶ

ಬಿಜೆಪಿಯಿಂದ ಸಾಕಷ್ಟು ಆಫರ್‌ ಕೊಟ್ಟರೂ ಒಪ್ಪದೇ ಟಿಕೆಟ್‌ಗೆ ಪಟ್ಟು ಹಿಡಿದು ಕೊನೆಗೆ ತಾವೇ ಬೆಳೆಸಿದ ಬಿಜೆಪಿಯನ್ನೇ ತೊರೆದಿದ್ದು ಇತಿಹಾಸ. ಜತೆಗೆ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಸಂಚಲನ ಮಾಡಿತು. ಇಡೀ ದೇಶದ ಕುತೂಹಲ ಕೆರಳಿಸಿತು. ಕಾಂಗ್ರೆಸ್‌ ಸೇರಿ ಟಿಕೆಟ್‌ ಪಡೆದರಾದರೂ ಸೆಂಟ್ರಲ್‌ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಸೋಲನ್ನಭವಿಸಿದರು. ಕಾಂಗ್ರೆಸ್‌ ಶೆಟ್ಟರನ್ನು ಮೇಲ್ಮನೆಗೆ ಆಯ್ಕೆ ಮಾಡಿತು.

ಶಿವಾನಂದ ಗೊಂಬಿ ಹುಬ್ಬಳ್ಳಿ

ಬಿಜೆಪಿ ತೊರೆದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌. ಕಾಂಗ್ರೆಸ್‌ ಬಲ ಹೆಚ್ಚಳ, ಈ ವರ್ಷವೂ ನಡೆಯದ ತಾಪಂ, ಜಿಪಂ ಚುನಾವಣೆ.. ಪಾಲಿಕೆ ಶಕ್ತಿ ಗಟ್ಟಿಗೊಳಿಸಿಕೊಂಡ ಬಿಜೆಪಿ...!

ಇವು ಧಾರವಾಡ ಜಿಲ್ಲೆಯಲ್ಲಿ 2023 ರಲ್ಲಿ ರಾಜಕೀಯ ರಂಗದಲ್ಲಿ ನಡೆದ ಪ್ರಮುಖ ಘಟನಾವಳಿಗಳು. ವಿಧಾನಸಭೆ ಚುನಾವಣೆ ನಡೆದ ವರ್ಷವಿದು. ಈ ವೇಳೆಯೇ ಸಾಕಷ್ಟು ರಾಜಕೀಯ ಸ್ಥಿತ್ಯಂತರ ನಡೆದು ರಾಜ್ಯ ರಾಜಕೀಯದಲ್ಲೂ ಸಂಚಲನವನ್ನುಂಟು ಮಾಡಿದವು. ಜತೆಗೆ ಫಲಿತಾಂಶದಲ್ಲೂ ಏರುಪೇರಿಗೆ ಕಾರಣವಾಗಿದ್ದು ಅಷ್ಟೇ ಸತ್ಯ.

ಶೆಟ್ಟರ್‌ ಮುನಿಸು: ವಿಧಾನಸಭೆ ಚುನಾವಣೆ ವೇಳೆ ಜಿಲ್ಲೆ ಹಾಗೂ ರಾಜ್ಯ ರಾಜಕೀಯದಲ್ಲಿ ದೊಡ್ಡ ಸ್ಥಿತ್ಯಂತರ ಎಂದರೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದಿದ್ದು. ಜನಸಂಘದ ಅವಧಿಯಿಂದಲೂ ಸಂಘ ಪರಿವಾರದೊಂದಿಗೆ ಇದ್ದಂತಹ ಕುಟುಂಬ ಶೆಟ್ಟರ್‌ ಅವರದು. ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ಸಿಗಲಿಲ್ಲ ಎಂದು ಮುನಿಸಿಕೊಂಡ ಶೆಟ್ಟರ್‌, ಪಕ್ಷದ ವರಿಷ್ಠರು ಸಾಕಷ್ಟು ಸಂಧಾನ ನಡೆಸಿದರೂ ಜಗ್ಗಲಿಲ್ಲ. ಬಿಜೆಪಿಯಿಂದ ಸಾಕಷ್ಟು ಆಫರ್‌ ಕೊಟ್ಟರೂ ಒಪ್ಪದೇ ಟಿಕೆಟ್‌ಗೆ ಪಟ್ಟು ಹಿಡಿದು ಕೊನೆಗೆ ತಾವೇ ಬೆಳೆಸಿದ ಬಿಜೆಪಿಯನ್ನೇ ತೊರೆದಿದ್ದು ಇತಿಹಾಸ. ಜತೆಗೆ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಸಂಚಲನ ಮಾಡಿತು. ಇಡೀ ದೇಶದ ಕುತೂಹಲ ಕೆರಳಿಸಿತು. ಕಾಂಗ್ರೆಸ್‌ ಸೇರಿ ಟಿಕೆಟ್‌ ಪಡೆದರಾದರೂ ಸೆಂಟ್ರಲ್‌ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಸೋಲನ್ನಭವಿಸಿದರು. ಕಾಂಗ್ರೆಸ್‌ ಶೆಟ್ಟರನ್ನು ಮೇಲ್ಮನೆಗೆ ಆಯ್ಕೆ ಮಾಡಿತು.

ಹೊಸ ಶಾಸಕರು: ಇನ್ನು ಸೆಂಟ್ರಲ್‌ ಕ್ಷೇತ್ರದಲ್ಲಿ ತಮ್ಮ ಗುರುವಿನ ವಿರುದ್ಧವೇ ಸ್ಪರ್ಧಿಸಿ ಗೆಲುವು ಸಾಧಿಸಿ ನೂತನ ಶಾಸಕರಾದವರು ಮಹೇಶ ಟೆಂಗಿನಕಾಯಿ. ಹಿಂದಿನ ಆರು ಚುನಾವಣೆಯಲ್ಲಿ ಶೆಟ್ಟರ್‌ ಅವರೊಂದಿಗೆ ಓಡಾಡಿ ಅವರ ಎಲೆಕ್ಷನ್‌ ಮಾಡಿದ್ದ ಟೆಂಗಿನಕಾಯಿ, ಶೆಟ್ಟರ್‌ ಪಟ್ಟುಗಳನ್ನೇ ಅವರ ವಿರುದ್ಧವೇ ಬಳಸಿ ಸೋಲಿಸುವಲ್ಲಿ ಯಶಸ್ವಿಯಾದರು.

ಇನ್ನು ಕುಂದಗೋಳ ಕ್ಷೇತ್ರದ ಎಂ.ಆರ್‌. ಪಾಟೀಲ ಕೂಡ ಪ್ರಥಮ ಬಾರಿಗೆ ಶಾಸಕರಾದವರು. ಬಿಜೆಪಿಯಿಂದ ಟಿಕೆಟ್‌ ಪಡೆಯುವಲ್ಲಿ ಪಾಟೀಲ ಯಶಸ್ವಿಯಾಗಿದ್ದರೆ, ಬಿಜೆಪಿ ಟಿಕೆಟ್‌ ವಂಚಿತ ಎಸ್‌.ಐ. ಚಿಕ್ಕನಗೌಡರ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಅತ್ತ ಕಾಂಗ್ರೆಸ್‌ ಶಾಸಕಿಯಾಗಿದ್ದ ಕುಸುಮಾವತಿ ಶಿವಳ್ಳಿ ಹೀಗೆ ತ್ರಿಕೋನ ಸ್ಪರ್ಧೆಯಲ್ಲಿ ಪಾಟೀಲ, ಇಬ್ಬರನ್ನು ಮಣಿಸಿ ಪ್ರಥಮ ಬಾರಿಗೆ ಶಾಸಕರಾದರು.

ಇನ್ನೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ಅಭ್ಯರ್ಥಿಯೊಬ್ಬರು ಕ್ಷೇತ್ರದ ಹೊರಗಿದ್ದುಕೊಂಡೇ ಗೆಲುವನ್ನು ಕಂಡಿದ್ದು. ಧಾರವಾಡ ಗ್ರಾಮಾಂತರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನಯ ಕುಲಕರ್ಣಿಗೆ ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಪ್ರವೇಶಕ್ಕೆ ಕೋರ್ಟ್‌ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಣಕ್ಕಿಳಿದರೂ ಕ್ಷೇತ್ರಕ್ಕೆ ಕಾಲಿಡಲೇ ಇಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಜನರ ಮನ ಮುಟ್ಟಿದರು. ಜತೆಗೆ ಪತ್ನಿ ಶಿವಲೀಲಾ ಮತ್ತು ಮಕ್ಕಳೇ ಇಡೀ ಕ್ಷೇತ್ರದಲ್ಲಿ ಓಡಾಡಿ ವಿನಯ್‌ ಗೆಲುವಿಗೆ ಶ್ರಮಿಸಿದರು. ಕ್ಷೇತ್ರದಿಂದ ಹೊರಗಿದ್ದುಕೊಂಡೇ ಪಕ್ಷದ ಗೆಲುವಿನ ನಗೆ ಬೀರಿದರು. ಈಗಲೂ ಕ್ಷೇತ್ರಕ್ಕೆ ಬರುತ್ತಿಲ್ಲವಾದರೂ ಕ್ಷೇತ್ರದ ಹೊರಗಿದ್ದುಕೊಂಡು ಶಾಸಕತ್ವದ ಜವಾಬ್ದಾರಿ ನಿರ್ವಹಿಸುತ್ತಿರುವುದು ವಿಶೇಷ.

ಕಾಂಗ್ರೆಸ್‌ ಬಲ ಹೆಚ್ಚಳ: ಆಡಳಿತ ವಿರೋಧಿ ಅಲೆಯಿಂದಾಗಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಬರೀ 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವನ್ನು ಕಂಡರೆ, 4ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತು. ಮೊದಲು ಬರೀ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಇತ್ತು. ಈಗ ಅದರ ಸ್ಥಾನ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಕಾಂಗ್ರೆಸ್‌ ಸರ್ಕಾರದಲ್ಲಿ ಕಲಘಟಗಿ ಶಾಸಕ ಸಂತೋಷ ಲಾಡ್‌ ಸಚಿವರಾದರೆ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿಗೆ ನಿರಾಸೆಯಾಯಿತು. ಇದೀಗ ಹೊಸ ವರ್ಷದಲ್ಲಿ ನಿಗಮ ಮಂಡಳಿಗಳಲ್ಲಿ ಆದರೂ ಇವರಿಗೆ ಅವಕಾಶ ದೊರೆಯುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ.

ನಡೆಯದ ಚುನಾವಣೆ: ಜಿಪಂ, ತಾಪಂ ಅವಧಿ ಮುಗಿದು ಆಗಲೇ ಮೂರುವರೆ ವರ್ಷವಾಗಿದೆ. ಆದರೂ ಈವರೆಗೂ ಚುನಾವಣೆ ನಡೆಯುತ್ತಲೇ ಇಲ್ಲ. ಇದೀಗ ಕಾಂಗ್ರೆಸ್‌ ಸರ್ಕಾರದ ಮೇಲೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದು, ಹೊಸ ವರ್ಷದ ಆರಂಭದಲ್ಲೇ ನಡೆಯುವ ಸಾಧ್ಯತೆಯುಂಟು. ಇನ್ನು ನಿಗಮ ಮಂಡಳಿಗಳ ನೇಮಕವೂ ಈವರೆಗೂ ಆಗಿಲ್ಲ. ಹೀಗಾಗಿ ಹುಡಾ, ವಾಯವ್ಯ ಸಾರಿಗೆ, ಬಾಲವಿಕಾಸ ಅಕಾಡೆಮಿ ಸೇರಿದಂತೆ ನಿಗಮ ಮಂಡಳಿಗಳ ನೇಮಕಕ್ಕೆ ಕಾಯುತ್ತಾ ಕುಳಿತ್ತಿದ್ದಾರೆ ಕಾಂಗ್ರೆಸ್‌ ಮುಖಂಡರು.

ಲೋಕಸಭೆ ಚುನಾವಣೆ ತಯಾರಿ: ಇನ್ನು ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಬಿಜೆಪಿ ಇದೀಗ ಮತ್ತೆ ಸಂಘಟನೆಯತ್ತ ಪ್ರಾಮುಖ್ಯತೆ ಕೊಟ್ಟಿದೆ. ಹೊಸ ವರ್ಷದ ಆರಂಭದಲ್ಲೇ ಜಿಲ್ಲಾಧ್ಯಕ್ಷರ ನೇಮಕ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಯಲ್ಲಿ ಚಟುವಟಿಕೆಗಳು ಜೋರಾಗಿದೆ. ಲೋಕಸಭೆ ಚುನಾವಣೆ ತಯಾರಿ ನಡೆಸುತ್ತಿದೆ.

ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜತೆಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದು ಜೆಡಿಎಸ್‌ನಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲಿನ ಮೈತ್ರಿಯಂತೆ ಸ್ಥಳೀಯ ಮಟ್ಟದಲ್ಲೂ ಆದರೆ ಜಿಪಂ ತಾಪಂನಲ್ಲಿ ಕೊಂಚ ಅಧಿಕಾರ ಸಿಗಬಹುದು. ಈ ಮೂಲಕ ಸಂಘಟನೆ ಇಲ್ಲದ ಜೆಡಿಎಸ್‌ ಮತ್ತೆ ಸಂಘಟನೆ ಮಾಡಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ನದ್ದು. ಆದರೆ ಇದು ಎಷ್ಟರ ಮಟ್ಟಿಗೆ ಆಗುತ್ತದೆ ಎಂಬುದನ್ನು ನೋಡಬೇಕು.

ಇನ್ನು ವಿಧಾನಸಭೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ ಲೋಕಸಭೆಯಲ್ಲೂ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕು ಎಂಬ ಇರಾದೆಯಿಂದ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಸಂಘಟನೆಯತ್ತ ಗಮನ ಹರಿಸಿದೆ.

ಇನ್ನು ಶೆಟ್ಟರ್‌ ಬಿಜೆಪಿ ತೊರೆದಾದ ಮೇಲೆ ಮಹಾನಗರ ಪಾಲಿಕೆಯಲ್ಲಿ ಅವರ ಶಿಷ್ಯರು ಕೂಡ ಕಾಂಗ್ರೆಸ್‌ಗೆ ಹೋಗುತ್ತಾರೆ. ಪಾಲಿಕೆ ಕೈವಶವಾಗುತ್ತದೆ ಎಂಬ ಸುದ್ದಿಗಳೆಲ್ಲ ಹಬ್ಬಿದ್ದವು. ಆದರೆ ಕಾಂಗ್ರೆಸ್‌ಗೆ ಯಾರು ಹೋಗದಂತೆ ತಡೆ ಹಿಡಿದ ಬಿಜೆಪಿ ಪಾಲಿಕೆಗೂ ರೆಸಾರ್ಟ್‌ ರಾಜಕಾರಣ ಪರಿಚಯಿಸಿತು. ಈ ಮೂಲಕ ಪಾಲಿಕೆಯ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಕೂಡ ಆಯಿತು.

ಆದರೆ 2023ರಲ್ಲಿ ಜಿಲ್ಲೆಯಲ್ಲಿ ನಡೆದ ಸ್ಥಿತ್ಯಂತರ ರಾಜ್ಯ ರಾಜಕಾರಣದ ಮೇಲೂ ಆಗಿದ್ದಂತೂ ಸುಳ್ಳಲ್ಲ.