ಸಾರಾಂಶ
ತರಗತಿಗಳಲ್ಲಿ ಶಿಕ್ಷಕರು ಯಾವುದೇ ರೀತಿಯ ತಾರತಮ್ಯ ಮಾಡದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಉತ್ತಮ ಸಂಬಂಧ ರೂಪುಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ, ಜಾತಿ ವ್ಯವಸ್ಥೆ ಇರದೇ ಮಕ್ಕಳಲ್ಲಿ ಐಕ್ಯತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಂತಾಗಬೇಕು ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.ನಗರದ ಮಾನಸಗಂಗೋತ್ರಿಯಲ್ಲಿರುವ ಮೈಸೂರು ವಿವಿ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರವು ಪದವಿ ಕಾಲೇಜು ಮತ್ತು ವಿವಿ ಸಹಾಯಕ ಪ್ರಾಧ್ಯಾಪಕರಿಗಳಿಗೆ ಆಯೋಜಿಸಿರುವ 9ನೇ ಬೋಧಕ ವರ್ಗ ಸ್ಥಾಪನಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖವಾದದ್ದು. ಹಾಗೆಯೆ ತರಗತಿಗಳಲ್ಲಿ ಶಿಕ್ಷಕರು ಯಾವುದೇ ರೀತಿಯ ತಾರತಮ್ಯ ಮಾಡದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಉತ್ತಮ ಸಂಬಂಧ ರೂಪುಗೊಳ್ಳಬೇಕು. ಶಿಕ್ಷಕರು ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವದೊಂದಿಗೆ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕು ಎಂದು ಅವರು ಹೇಳಿದರು.ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಪ್ರಭಾವ ಬೀರುತ್ತಾರೆ. ಹೀಗಾಗಿ, ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಸರಣೆ ಮಾಡುತ್ತಾರೆ. ಇವತ್ತಿನ ದಿನಗಳಲ್ಲಿ ಶಿಕ್ಷಕರು ಅಪ್ಡೇಟ್ ಆಗಬೇಕು ಎಂದರು.
ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ. ಜ್ಯೋತಿ ಮಾತನಾಡಿ, ತಂದೆ ತಾಯಿಗಳ ನಂತರ ವಿದ್ಯಾರ್ಥಿಗಳಿಗೆ ಗುರುಗಳ ಪಾತ್ರ ಬಹಳ ಮುಖ್ಯ. ಮಕ್ಕಳನ್ನು ಶಿಕ್ಷಕರು ಪ್ರಶ್ನೆ ಕೇಳುವ ಮಟ್ಟಕ್ಕೆ ಬೆಳೆಸಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು. ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎಲ್. ನಂಜುಂಡಸ್ವಾಮಿ ಇದ್ದರು.