ಸಾರಾಂಶ
ಸಾಗರದಲ್ಲಿ ಮುಂದಿನ ಆರು ತಿಂಗಳಿನೊಳಗೆ ಸುಸಜ್ಜಿತ ಮೀನು ಮಾರುಕಟ್ಟೆ ಉದ್ಘಾಟನೆ ಆಗಲಿದೆ. ಮೀನು ಮಾರುಕಟ್ಟೆಗೆ ಶೀಥಲೀಕರಣ ಘಟಕ ನೀಡಲು ನಮ್ಮ ಇಲಾಖೆ ಸಿದ್ಧವಿದೆ. ಆದರೆ, ಸ್ಥಳೀಯವಾಗಿ ಆಸಕ್ತಿ ಇರುವವರಿಗೆ ಇದನ್ನು ವಹಿಸಿಕೊಡಲಾಗುತ್ತದೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಶನಿವಾರ ಹೇಳಿದ್ದಾರೆ.
ಸಾಗರ: ಮುಂದಿನ ಆರು ತಿಂಗಳಿನೊಳಗೆ ಸುಸಜ್ಜಿತ ಮೀನು ಮಾರುಕಟ್ಟೆ ಲೋಕಾರ್ಪಣೆ ಆಗಲಿದೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ಮೀನು ಮಾರುಕಟ್ಟೆ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಕಾಮಗಾರಿ ಪೂರ್ಣಗೊಳಿಸಲು ಆರ್ಥಿಕ ಸಹಕಾರ ಕೇಳಿದ್ದು, ಅದನ್ನು ಪೂರೈಸಲಾಗುತ್ತದೆ ಎಂದು ಹೇಳಿದರು.ಸಾಗರ ಮೀನು ಮಾರುಕಟ್ಟೆಗೆ ಶೀಥಲೀಕರಣ ಘಟಕ ನೀಡಲು ನಮ್ಮ ಇಲಾಖೆ ಸಿದ್ಧವಿದೆ. ಇಲಾಖೆಯಿಂದ ಘಟಕ ನಿರ್ವಹಣೆ ಕಷ್ಟಸಾಧ್ಯ ಆಗಿರುವುದರಿಂದ ಸ್ಥಳೀಯವಾಗಿ ಆಸಕ್ತಿ ಇರುವವರಿಗೆ ಇದನ್ನು ವಹಿಸಿಕೊಡಲಾಗುತ್ತದೆ. ಅವರಿಗೆ ಇಲಾಖೆ ವತಿಯಿಂದ ಎಲ್ಲ ರೀತಿ ಸೌಲಭ್ಯ ಕೊಡಲಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇದೇ ನಿಯಮ ಪಾಲನೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ಊಟದ ಹೋಟೆಲ್ ನಿರ್ಮಾಣ ಮಾಡಬೇಕು ಎನ್ನುವ ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ ₹10 ಲಕ್ಷವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮತ್ಸ್ಯವಾಹಿನಿ ಯೋಜನೆ ಜಾರಿಗೆ ತರಲಾಗಿದೆ. ಮೀನುಗಾರರಿಗೆ ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವುದು ಇಲಾಖೆಯ ಹೊಣೆಗಾರಿಕೆಯಾಗಿದ್ದು, ಅದನ್ನು ಚಾಚೂ ತಪ್ಪದೇ ಪಾಲನೆ ಮಾಡಲಾಗುತ್ತಿದೆ. ಸಣ್ಣಕೆರೆ ಮಾಡಿಕೊಂಡು ಮೀನು ಸಾಕಾಣಿಕೆ ಮಾಡುವವರಿಗೆ ₹4 ಲಕ್ಷವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ತಾರಾಮೂರ್ತಿ, ಮಹಾಬಲ ಕೌತಿ, ಅನ್ವರ್ ಭಾಷಾ, ಹಮೀದ್, ತಬ್ರೇಜ್ ಇನ್ನಿತರರು ಹಾಜರಿದ್ದರು.
- - --13ಕೆ.ಎಸ್.ಎ.ಜಿ.1: