ಸಾರಾಂಶ
ನಕ್ಸಲ್ ಸಿದ್ಧಾಂತ, ಎಡಪಂಥಿಯ ಭಯೋತ್ಪಾದನೆಯೆಡೆಗೆ ಆಕರ್ಷಿತರಾಗಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಮಹಿಳೆಯರು ಸೇರಿ 14 ಜನ ಶರಣಾಗತಿ ಬಯಸಿ ಬಂದಿದ್ದರಿಂದ ಅವರಿಗೆ ಪುನರ್ವಸತಿಗಾಗಿ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿದೆ
ಶಿವಮೊಗ್ಗ : ರಾಜ್ಯದ ಹಲವು ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿರುವುದು ಕಂಡು ಬಂದಿದ್ದು, ಶರಣಾಗತರಾದವರಿಗೆ ಪ್ರೋತ್ಸಾಹಧನ ಹಾಗೂ ಪುನರ್ವಸತಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿ ಪ್ರಮುಖ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಕ್ಸಲ್ ಸಿದ್ಧಾಂತ, ಎಡಪಂಥಿಯ ಭಯೋತ್ಪಾದನೆಯೆಡೆಗೆ ಆಕರ್ಷಿತರಾಗಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಮಹಿಳೆಯರು ಸೇರಿ 14 ಜನ ಶರಣಾಗತಿ ಬಯಸಿ ಬಂದಿದ್ದರಿಂದ ಅವರಿಗೆ ಪುನರ್ವಸತಿಗಾಗಿ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿದೆ. ಅವರ ವಾಪಸಾತಿ ಸುಗಮಗೊಳಿಸುವ ಉದ್ದೇಶದಿಂದ 14ಜನರ ಒಂದು ಸಮಿತಿ ಸರ್ಕಾರ ನೇಮಕ ಮಾಡಿದ್ದು, ಇದರಲ್ಲಿ ಎಡಿಜಿಪಿ, ಡಿಜಿ ಹಾಗೂ ಐಜಿಪಿ ಸಹ ಇರುತ್ತಾರೆ. ಪ್ರಸ್ತುತ ಕರ್ನಾಟಕದಲ್ಲಿ 7 ರಿಂದ 8 ಜನರ ತಂಡ ಸಕ್ರಿಯವಾಗಿದ್ದು, ಅವರಲ್ಲಿ ಅನೇಕರು ವಯಸ್ಸಿನ, ಅನಾರೋಗ್ಯದ ಕಾರಣದಿಂದ ಶರಣಾಗಲು ಬಯಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
3 ಶ್ರೇಣಿಗಳಲ್ಲಿ ಅವರನ್ನು ಗುರುತಿಸಲಾಗಿದ್ದು, ಶರಣಾಗಲು ಬಯಸಿದರೆ ಪ್ರವರ್ಗ "ಎ "ಯಲ್ಲಿ 10 ಲಕ್ಷ, ಪ್ರವರ್ಗ "ಬಿ "ಯಲ್ಲಿ 5 ಲಕ್ಷ ಮತ್ತು ಪ್ರವರ್ಗ "ಸಿ "ಯಲ್ಲಿ 2 ಲಕ್ಷ ರು.ಗಳ ಪ್ರೋತ್ಸಾಹ ಧನ ಸರ್ಕಾರ ನೀಡುತ್ತದೆ. ತಮ್ಮಲ್ಲಿರುವ ಆಯುಧಗಳನ್ನು ಕೂಡ ಹಸ್ತಾಂತರಿಸಿದರೆ ಅದಕ್ಕೂ ಕೂಡ ವಿಶೇಷವಾದ ಪ್ರೋತ್ಸಾಹ ಧನವನ್ನು ನೀಡುತ್ತದೆ. ಅತ್ಯಂತ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಇವರು ನಡೆಸುತ್ತಿರುವ ಹೋರಾಟವನ್ನು ಗಮನಿಸಿ ಅಲ್ಲಿ ಕೂಡ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಶರಣಾಗತರಾದ ನಕ್ಸಲರ ಮೇಲಿನ ಯಾವುದೇ ಕಾನೂನಾತ್ಮಕ ಕೇಸು ಹಿಂಪಡೆಯುವುದಿಲ್ಲ. ಕಾನೂನು ಹೋರಾಟ ಮುಂದುವರಿಯಲಿದೆ. ಆದರೆ, ಅವರಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬರಲು ಸಹಕಾರ ನೀಡಲಾಗುವುದು. ಈ ರೀತಿ ಸರ್ಕಾರ ಮುಕ್ತ ಅವಕಾಶ ನೀಡಿರುವುದು ಸ್ವಾಗತರ್ಹ. ಆದ್ದರಿಂದ ನಾವೆಲ್ಲ ಈ ಸಮಿತಿಗೆ ಸೇರಿದ್ದೇವೆ. ಕರ್ನಾಟಕದಲ್ಲಿ ನಕ್ಸಲ್ ಹೋರಾಟ ಇಳಿಮುಖವಾಗುತ್ತಿದೆ. ನಕ್ಸಲರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಅವರಿಂದ ಸಕರಾತ್ಮಕ ಪ್ರಕ್ರಿಯೆ ಬಂದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕೆಲವು ನಕ್ಸಲರು ಕೇರಳದಲ್ಲಿ ಬಂಧಿತರಾಗಿದ್ದಾರೆ. ಅನಾರೋಗ್ಯಕ್ಕೂ ಈಡಾಗಿದ್ದಾರೆ. ಅನೇಕ ಕಡೆ ಅವರ ಮೇಲೆ ಅನೇಕ ಕೇಸುಗಳಿವೆ. ಒಂದೇ ಕಡೆ ವಿಚಾರಣೆ ಮಾಡುವಂತಹ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ. ಎನ್‍ಕೌಂಟರ್ ಆಗದಂತಹ ಭರವಸೆಯನ್ನು ಕೂಡ ಸರ್ಕಾರ ನೀಡಿದೆ. ಆದರೆ, ಮುಖಾಮುಖಿಯಾದಾಗ ಅವರು ಶಸ್ತ್ರಸಹಿತವಾಗಿದ್ದರೆ ಕಷ್ಟವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಕೂಡ ಹೇಳಿದ್ದಾರೆ. ಶರಣಾಗಲು ಇದು ಒಂದು ಒಳ್ಳೆಯ ಅವಕಾಶ ಎಂದರು.
ವಕೀಲ ಶ್ರೀಪಾಲ ಮಾತನಾಡಿ, ಶರಣಾದರೆ ನ್ಯಾಯಾಲಯ ಕಲಾಪ ವಿಳಂಬವಾಗಲಿದೆ ಎನ್ನುವ ಅಭಿಪ್ರಾಯವಿದೆ. 14 ನಕ್ಸಲರ ಪೈಕಿ ಮೂವರ ಪ್ರಕರಣಗಳು ಮಾತ್ರ ವಿಚಾರಣೆಯಲ್ಲಿವೆ. ಇದಕ್ಕಾಗಿಯೇ ವಿಶೇಷ ನ್ಯಾಯಾಲಯದ ಸ್ಥಾಪನೆಗೆ ಮನವಿ ಮಾಡಿದ್ದೇವೆ. ಅವರಿಗೆ ವಕೀಲರು ಕೂಡ ಲಭ್ಯವಾಗಲಿದ್ದಾರೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಪಾರ್ವತಿಶ್ ಬಿಳಿದಾಳೆ ಮಾತನಾಡಿ, ಸರ್ಕಾರ ಮುಕ್ತ ಅವಕಾಶ ನೀಡಿದೆ. ಈ ಹಿಂದೆಯು 2 ಬಾರಿ ಸಮಿತಿ ರಚನೆಯಾಗಿತ್ತು. ರಾಜ್ಯದ ನಕ್ಸಲರು ಮತ್ತು ಹೊರ ರಾಜ್ಯದವರಿಗೆ ಪ್ರತ್ಯೇಕ ಪ್ಯಾಕೇಜ್ ಇದೆ. ರಾಜ್ಯ ಸರ್ಕಾರವು ಭೂಗತ ಮಾವೋವಾದಿ ನಕ್ಸಲರಿಗೆ ಪುನರ್ವಸತಿಗಾಗಿ ಒಂದು ಸಮಿತಿ ಮತ್ತು ಯೋಜನೆ ರಚಿಸಿದ್ದು, ಅದರಲ್ಲಿ ಡಾ.ಬಂಜಗೆರೆ ಜಯಪ್ರಕಾಶ್ (9448233825) ಪಾರ್ವತಿಶ ಬಿಳಿದಾಳೆ (9448380637) ಕೆ.ಪಿ.ಶ್ರೀಪಾಲ್ (9448329757) ಅವರನ್ನು ಶಸಸ್ತ್ರಕ್ರಾಂತಿ ಮಾರ್ಗವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಇಚ್ಚಿಸುವ ನಕ್ಸಲರು ಸಂಪರ್ಕಿಸಬಹುದಾಗಿದೆ ಎಂದರು.