ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಮೂರನೇ ದಿನವೂ ಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಗೆ ಜಿಲ್ಲೆಯ ರೈತರು ಹೈರಾಣಾಗಿದ್ದು, ಅತಿಯಾದ ಮಳೆಯಿಂದ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ನಗರ ಹೊರವಲಯದ ಕೆ.ವಿ.ಕ್ಯಾಂಪಸ್ ಬಳಿಯ ಹೂವಿನ ಮಾರುಕಟ್ಟೆಯಲ್ಲಿ ಮಳೆಯ ನಡುವೆಯೂ ಹೂವಿನ ವ್ಯಾಪಾರ ನಡೆಯುತ್ತಿದೆ. ಮಾರುಕಟ್ಟೆಗೆ ತಾವು ಬೆಳೆದ ಹೂಗಳೊಂದಿಗೆ ಆಗಮಿಸುತ್ತಿರುವ ರೈತರು, ಹೂಗಳ ಮಾರಾಟದಿಂದ ತಾವು ಅಂದುಕೊಂಡಷ್ಟು ಹಣ ಗಳಿಕೆಯಾಗದೇ ವಾಪಸ್ಸಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಹೂ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಹೂವುಗಳ ಬೆಲೆ ದಿಢೀರ್ ಕುಸಿತವಾಗಿ ಕಳೆದ ಮೂರು ದಿನಗಳ ಹಿಂದೆ ಕೆಜಿಗೆ 200 ರು.ರಿಂದ 300 ರು. ಇದ್ದ ಗುಲಾಬಿ ಬೆಲೆಯು ಈಗ ದಿಢೀರ್ ಕುಸಿದು ಕೆಜಿಗೆ 40 ರು. ನಿಂದ 60 ರು.ಗೆ ಇಳಿದಿದ್ದು, ಕೆಜಿಗೆ 100 ರು. ನಿಂದ 150 ರು.ಇದ್ದ ಸೇವಂತಿ ಹೂವಿನ ಬೆಲೆ ಈಗ ಕೆಜಿಗೆ 25 ರು.ನಿಂದ 30ರು.ಗೆ ಇಳಿಕೆಯಾಗಿದೆ. ಈ ಸಮಯದಲ್ಲಿ ಮಳೆಯ ತೇವಾಂಶದಿಂದ ಹೂ ಬೆಳೆ ಹೆಚ್ಚು ಇಳುವರಿ ಬಂದಿದ್ದು, ಬೇರೆ ರಾಜ್ಯಗಳಿಗೆ ರಪ್ತು ಆಗುತ್ತಿದ್ದ ಪ್ರಮಾಣ ದಿಢೀರ್ ಇಳಿಕೆಯಿಂದ ಕೇಳುವವರೇ ಇಲ್ಲದಂತಾಗಿದೆ.ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ನಲ್ಲಿ ರೈತರು ಗುಲಾಬಿ ಮತ್ತು ಸೇವಂತಿ ಹೂ ಬೆಳೆದಿದ್ದರು. ಗುಲಾಬಿ ತಳಿಗಳಾದ ಸೆಂಟ್, ವ್ಯಾನಿಷ್, ಮೆರಾಬುಲ್, ಪಿಂಕ್‌ರೆಡ್, ಮ್ಯಾಂಗೋ ಯೆಲ್ಲೊ, ರೆಡ್, ರೆಡ್ ವ್ಯಾನೀಶ್ ಸೇರಿದಂತೆ ಹಲವಾರು ತಳಿಯ ಗುಲಾಬಿ ಹೂವುಗಳನ್ನು, ಸೇವಂತಿಗೆ ತಳಿಗಳಾದ ಸೆಂಟ್ ಎಲ್ಲೂ, ವೈಟ್, ಐಶ್ವರ್ಯ, ಮಾರಿ ಗೋಲ್ಡ್, ಚಾಕಲೇಟ್ ಸೇರಿದಂತೆ ಮತ್ತಿತರ ತಳಿಗಳನ್ನು ನಿರಂತರವಾಗಿ ಬೆಳೆದು ರಾಜ್ಯ ಮತ್ತು ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಾಂಗಣ, ಕೇರಳ, ಮಹಾರಾಷ್ಟ್ರ, ವಿದರ್ಭ, ತಮಿಳುನಾಡು ಸೇರಿದಂತೆ ದೇಶಾದ್ಯಂತ ರಪ್ತು ಮಾಡಿ ನಿರಂತರ ಆದಾಯ ಗಳಿಸುತ್ತಿದ್ದರು. ಈಗ ವರುಣನ ಅವಕೃಪೆಗೆ ಒಳಗಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.