ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಗೆ ಬಿಡುವು ಕೊಡದ ಮಳೆ

| Published : Jun 14 2024, 01:10 AM IST

ಸಾರಾಂಶ

ಡಂಬಳ ಕಳೆದೊಂದು ವಾರದಿಂದ ಬಿಡುವು ನೀಡದೆ ಮಳೆ ಸುರಿಯುತ್ತಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ. ಹೊಲದಲ್ಲಿ ನೀರು ನಿಂತಿರುವುದರಿಂದ ಬಿತ್ತನೆ ಕಾರ್ಯ ಸ್ಥಗಿತವಾಗಿದೆ. ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಕಳೆದೊಂದು ವಾರದಿಂದ ಬಿಡುವು ನೀಡದೆ ಮಳೆ ಸುರಿಯುತ್ತಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ.

ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಆರು ದಿನಗಳಿಂದ ಮಳೆಯಾಗುತ್ತಿದೆ. ಕೆಲವು ಬಾರಿ ರಭಸದ ಮಳೆಯಾದರೆ ಉಳಿದ ಅವಧಿಯಲ್ಲಿ ತುಂತುರು ಹನಿಸುತ್ತಿದೆ.

ಸಕಾಲಕ್ಕೆ ಮಳೆ ಬಂದಿದ್ದರಿಂದ ರೈತರು ಖುಷಿಯಾಗಿದ್ದರು. ರೋಹಿಣಿ ಮಳೆ ಕೊನೆಯಲ್ಲಿ ಭರ್ಜರಿಯಾಗಿಯೇ ಸುರಿಯಿತು. ಆದರೆ, ಅದಾದ ಆನಂತರ ಬಂದಿರುವ ಕೃತಿಕಾ ಮಳೆಯೂ ಎಡೆಬಿಡದೆ ಸುರಿಯುತ್ತಲೇ ಇದೆ. ಇದರಿಂದ ಬಿತ್ತನೆ ಮಾಡಲು ಆಗುತ್ತಿಲ್ಲ. ಸಾಮಾನ್ಯವಾಗಿ ಜೂನ್ ಮೊದಲ ವಾರ ಅಥವಾ 2ನೇ ವಾರದಲ್ಲಿಯೇ ಮುಂಗಾರು ಹಂಗಾಮಿನ ಬಹುತೇಕ ಬಿತ್ತನೆಯಾಗುತ್ತದೆ. ಆದರೆ ಈಗ ಬಿತ್ತನೆ ಕಾರ್ಯ ಸ್ಥಗಿತವಾಗಿದೆ. ಒಂದೊಮ್ಮೆ ಮಳೆ ಈಗ ಬಿಡುವು ನೀಡಿದರೂ ಬಿತ್ತನೆಗೆ ಇನ್ನೊಂದು ವಾರ ಕಾಯಲೇಬೇಕು. ಕೆಂಪು ಮಣ್ಣುಳ್ಳ ಜಮೀನುಗಳಿಗೆ 10 ದಿನಗಳು, ಯರಿ (ಕಪ್ಪು) ಜಮೀನುಗಳಲ್ಲಿ ಇನ್ನು 15 ದಿನ ಆರದಷ್ಟು ಹಸಿಯಾಗಿದೆ.

ಈಗಾಗಲೇ ವಾಡಿಕೆ ಮಳೆಗಿಂತ ಶೇ. 50ರಷ್ಟು ಹೆಚ್ಚಾಗಿದೆ. ಭೂಮಿ ಬಿತ್ತನೆಗೆ ಅವಶ್ಯವಿರುವುದಕ್ಕಿಂತಲೂ ಹೆಚ್ಚು ಹಸಿಯಾಗಿದೆ. ಹೊಲದಲ್ಲಿ ಮಳೆ ನೀರು ನಿಂತಿದ್ದು, ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ. ಹರಗುವುದು, ಬಿತ್ತುವುದು ಸೇರಿದಂತೆ ಯಾವುದಕ್ಕೂ ಅನುಕೂಲಕರವಾಗಿಲ್ಲ. ಹೀಗಾಗಿ ರೈತರು ಮಳೆ ನಿಂತರೆ ಸಾಕು ಎನ್ನುತ್ತಿದ್ದಾರೆ.

ಮುಂಗಾರು ಬಿತ್ತನೆಗೆ ಜುಲೈ ಅಂತ್ಯದ ವರೆಗೂ ಕಾಲವಕಾಶ ಇದೆ. ಜೂನ್ ತಿಂಗಳಲ್ಲಿಯೇ ಬಿತ್ತನೆ ಮಾಡಿದರೆ ಉತ್ತಮ ಎನ್ನುತ್ತಾರೆ ರೈತರು. ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದರೆ ಅತ್ಯುತ್ತಮ ಇಳುವರಿ ಬರುತ್ತದೆ. ಮುಂದೆ ಹಿಂಗಾರಿ ಬಿತ್ತನೆಗೂ ಸಾಕಷ್ಟು ಕಾಲವಕಾಶ ಸಿಗುತ್ತದೆ. ಮುಂಗಾರಿನ ಬಿತ್ತನೆ ವಿಳಂಬವಾದರೆ ಈ ಬೆಳೆ ಕಟಾವು ಮಾಡಿಕೊಂಡು, ಆನಂತರ ಹಿಂಗಾರಿ ಬಿತ್ತನೆ ಮಾಡಬೇಕಾಗಿರುವುದರಿಂದ ಮಳೆ ಬಿಡುವು ನೀಡಿದರೆ ಬಹಳ ಅನುಕೂಲಕರ ಎನ್ನುತ್ತಾರೆ ರೈತರು.

ಹಳ್ಳಗಳಲ್ಲಿ ಹರಿದ ನೀರು: ಪ್ರಸಕ್ತ ವರ್ಷ ಮುಂಗಾರು ಪ್ರಾರಂಭದಲ್ಲಿಯೇ ಮುಂಡರಗಿ ತಾಲೂಕಿನಾದ್ಯಂತ ಹಳ್ಳ-ಕೊಳ್ಳ ತುಂಬಿ ಹರಿದಿದೆ. ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದ ಪಂಪ್‌ಸೆಟ್ ಆಧಾರಿತ ರೈತರಿಗೂ ಖುಷಿಯಾಗಿದೆ. ಈ ಬಾರಿ ಅತಿ ಹೆಚ್ಚು ಬಿಸಿಲಿನ ತಾಪದಿಂದ ಅಂತರ್ಜಲ ಕುಸಿದಿತ್ತು, ಇದರ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಅನುಕೂಲವಾಗಿದೆ.

ನಿರಂತರ ಮಳೆಗೆ ಕೆಲವು ಮಣ್ಣಿನ ಮನೆಗಳು ತಂಪು ಹಿಡಿದರೆ ಕೆಲವು ಮಣ್ಣಿನ ಮನೆಗಳು ಸೋರುತ್ತಿವೆ. ಇನ್ನು ಕೆಲವು ಬಡ ಕಾರ್ಮಿಕ ಕುಟುಂಬಗಳು ದುಡಿಮೆ ಇಲ್ಲದೆ ತೀವ್ರ ತೊಂದರೆಗೆ ಒಳಗಾಗುವಂತಾಗಿದೆ.

ಈಗಾಗಲೆ ಡಂಬಳ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ ಮುಂಗಾರು ಬಿತ್ತನೆಗೆ ಮಳೆ ಅವಕಾಶ ಕೊಡುತ್ತಿಲ್ಲ. ಕೆಲವು ದಿನಗಳ ವರೆಗೆ ಮಳೆ ನಿಂತರೆ ಬಿತ್ತಲು ಅನುಕೂಲಕರವಾಗಲಿದೆ ಎಂದು ರೈತ ಅರ್ಜುನ ಹೇಳಿದರು.