ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಮತದಾರನಾದ ನನ್ನನ್ನು ಸಾಲಗಾರ ಕ್ಷೇತ್ರದ ಮತಪಟ್ಟಿಗೆ ಸೇರಿಸಿದ್ದಾರೆ ಎಂದು ಷೇರುದಾರ ಹಾರೋಹಳ್ಳಿ ಸತೀಶ್ ಆರೋಪಿಸಿ ವಿಚಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಬಿ.ಚಲುವೇಗೌಡ(ಬಕೋಡಿ) ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮತಪಟ್ಟಿ ಬದಲಾವಣೆ ವಿಚಾರವಾಗಿ ಎರಡು ಗಂಟೆಗೂ ಅಧಿಕ ಕಾಲ ಷೇರುದಾರರು ಹಾಗೂ ಆಡಳಿತ ಮಂಡಳಿ ಸದಸ್ಯರ ನಡುವೆ ವಿಷಯ ಪ್ರಸ್ತಾಪವಾಯಿತು.
ಷೇರುದಾರ ಹಾರೋಹಳ್ಳಿ ಸತೀಶ್ ಮಾತನಾಡಿ, ಪಿಎಲ್‌ಡಿ ಬ್ಯಾಂಕ್‌ನಲ್ಲಿ ನಾನು ಯಾವುದೇ ಸಾಲ ಪಡೆದಿಲ್ಲ. ನನ್ನ ಮತ ಇರುವುದು ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಇರಬೇಕು. ಆದರೆ, ಬ್ಯಾಂಕ್ ಅಧಿಕಾರಿಗಳು ನನ್ನ ಮತವನ್ನು ನಾನು ಸಾಲಗಾರ ಕ್ಷೇತ್ರಕ್ಕೆ ಸೇರಿಸಿದ್ದಾರೆ. ನನ್ನ ಜತೆಗೆ ಸುಮಾರು 90 ಮತಗಳನ್ನು ಈ ರೀತಿ ಸಾಲಗಾರ ಕ್ಷೇತ್ರಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿದರು. ಸತೀಶ್ ಆರೋಪಿಸುತ್ತಿದ್ದಂತೆಯೇ ಷೇರುದಾರರು ಬ್ಯಾಂಕ್ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ಜತೆಗೆ ಚರ್ಚೆ ಆರಂಭಿಸಿದರು.ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೂ ಕಾರಣ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿಲು ಸಭೆಯಲ್ಲಿ ಅನುಮೋದನೆ ಮಾಡಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಮಲ್ಲಿಗೆರೆ ಎಂ.ಸಿ.ಯಶವಂತ್‌ಕುಮಾರ್, ಕರಡು ಮತಪಟ್ಟಿ ತಯಾರಿಸಿದ ಬಳಿಕ ನೋಟಿಸ್ ಬೋರ್ಡ್‌ನಲ್ಲಿ ಹಾಕಿ ಯಾವುದಾದರು ಲೋಪದೋಷಗಳು ಇದ್ದರೆ, ದೂರು ಸಲ್ಲಿಸಲು 20 ದಿನಗಳ ಕಾಲವಕಾಶ ನೀಡಲಾಗುತ್ತದೆ. ನಿಮ್ಮ ಮತಪಟ್ಟಿ ಬದಲಾವಣೆಯಾಗಿದ್ದರೆ ನೀವು ಅವಾಗಲೇ ಆಕ್ಷೇಪ ಸಲ್ಲಿಸಬೇಕಲ್ಲವೆ ಎಂದು ಪ್ರಶ್ನಿಸಿದರು.ಆ ಬಳಿಕ ಷೇರುದಾರರು ಹಾಗೂ ಆಡಳಿತ ಮಂಡಳಿ ಸದಸ್ಯರ ನಡುವೆ ಸಾಕಷ್ಟು ಚರ್ಚೆ ನಡೆಯಿತು. ಷೇರುದಾರರು ಮತಪಟ್ಟಿ ಬದಲಾವಣೆ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಸಿದರು.
ಷೇರುದಾರ ಸದಸ್ಯ ಸತೀಶ್ ಅವರು ಪಟ್ಟಣದ ನಿವಾಸಿ ಆಗಿದ್ದು, ಪಟ್ಟಣದ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಬದಲಾವಣೆ ವಿಚಾರವಾಗಿ ಸೂಕ್ತ ತನಿಖೆ ನಡೆಸಲು ಸಭೆಯಲ್ಲಿ ತೀರ್ಮಾನಿಸಿ ಅಧ್ಯಕ್ಷ ಚಲುವೇಗೌಡ ಭರವಸೆ ನೀಡಿದರು.ಬ್ಯಾಂಕ್‌ನಲ್ಲಿ ಷೇರುದಾರರು ಹೆಚ್ಚುವರಿ ಷೇರು ಹಣ ಪಾವತಿಸಲು ಹೆಚ್ಚಿನ ಅವಕಾಶ ಕಲ್ಪಿಸಬೇಕು, ಷೇರು ಹಣ ಪಾವತಿಸದವರನ್ನು ಅಮಾನತ್ತಿನಲ್ಲಿಟ್ಟು ನೋಟಿಸ್ ನೀಡಬೇಕು ಎಂದು ಒತ್ತಾಯಿಸಿದರು. ಷೇರುದಾರರಿಗೆ ಹೆಚ್ಚಿನ ಸಾಲಸೌಲಭ್ಯ ನೀಡುವ ಜೊತೆಗೆ ಬ್ಯಾಂಕ್ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ವಿಚಾರವಾಗಿ ಷೇರುದಾರರು ಅಗತ್ಯ ಸಲಹೆ ನೀಡಿದರು.
ಬ್ಯಾಂಕ್ ಅಧ್ಯಕ್ಷ ಎಚ್.ಬಿ.ಚಲುವೇಗೌಡ(ಬಕೋಡಿ) ಮಾತನಾಡಿದರು. ಸಭೆ ಆರಂಭದಲ್ಲಿ ಅಕಾಲಿಕ ಮರಣ ಹೊಂದಿದ ಬ್ಯಾಂಕ್ ಷೇರುದಾರರಿಗೆ ಮೌನಾಚರಣೆ ಸಲ್ಲಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸುನಂದ, ನಿರ್ದೇಶಕರಾದ ಎಂ.ಸಿ.ಯಶವಂತ್‌ಕುಮಾರ್, ಎನ್.ಮುರಳಿ, ನಾಗಶೆಟ್ಟಿ, ಶಿವಣ್ಣ, ಎಚ್.ಎನ್.ದಯಾನಂದ್, ಕೆ.ಆರ್.ಸುರೇಶ್, ಜಿ.ಡಿ.ನಂಜೇಗೌಡ (ವಾಸು), ಎಸ್.ಯೋಗಲಕ್ಷ್ಮಿ, ಎಚ್.ಎಂ.ಆಶಾಲತಾ, ಕೆ.ಕುಮಾರ್, ಸಿ.ಎಂ.ಚಂದ್ರಶೇಖರ್, ನಾಮಿನಿ ನಿರ್ದೇಶಕ ನಾಗೇಗೌಡ, ಕಾರ್‍ಯದರ್ಶಿ ಕೆ.ಸಂಪತ್‌ಕುಮಾರ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.