ಸಾರಾಂಶ
ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದಿಂದ ಪ್ರಾರಂಭಿಸಲಾದ ರಿಯಾಯಿತಿ ದರದ ಮಳಿಗೆಯಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಬಂದಿದೆ.
ಹುಲಿಗೆಮ್ಮ ದೇವಸ್ಥಾನದ ರಿಯಾಯಿತಿ ದರದ ಮಳಿಗೆಯಿಂದ ಭರ್ಜರಿ ಆದಾಯ
ಎಸ್. ನಾರಾಯಣ್ಕನ್ನಡಪ್ರಭ ವಾರ್ತೆ ಮುನಿರಾಬಾದ
ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದಿಂದ ಪ್ರಾರಂಭಿಸಲಾದ ರಿಯಾಯಿತಿ ದರದ ಮಳಿಗೆಯಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಬಂದಿದೆ. ಕೇವಲ 1 ವರ್ಷದಲ್ಲಿ ₹ 2 ಕೋಟಿಗಿಂತ ಅಧಿಕ ಆದಾಯ ಬಂದಿದೆ. ಈ ಮಳಿಗೆಯಲ್ಲಿ ತೆಂಗಿನ ಕಾಯಿ, ಉಡಿ ಸಾಮಗ್ರಿ, ಸೀರೆ ಸೇರಿದಂತೆ ಪೂಜೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.ರಿಯಾಯಿತಿ ಮಳಿಗೆ ಪ್ರಾರಂಭಿಸಲು ಕಾರಣವೇನು?:
ಹುಲಿಗೆಮ್ಮ ದೇವಿ ದರ್ಶನ ಮಾಡಲು ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಅಮ್ಮನ ವಾರದ ದಿನಗಳಾದ ಮಂಗಳವಾರ ಹಾಗೂ ಶುಕ್ರವಾರದಂದು ಭಕ್ತರ ಸಂಖ್ಯೆಯು 30ರಿಂದ 50 ಸಾವಿರ ತಲುಪುತ್ತದೆ. ಹುಣ್ಣಿಮೆ ದಿನಗಳಲ್ಲಿ ಅಮ್ಮನವರ ದರ್ಶನ ಮಾಡಲು ಬರುವ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಅಮ್ಮನ ದರ್ಶನ ಮಾಡಲು ಬರುವ ಭಕ್ತಾಧಿಗಳು ಅಮ್ಮನವರಿಗೆ ಜೋಡು ಟೆಂಗಿನ ಕಾಯಿ ಒಡೆಯುವ ಪದ್ಧತಿ ಇದೆ.ಇಲ್ಲಿನ ವರ್ತಕರು ಮಂಗಳವಾರ ಹಾಗೂ ಶುಕ್ತವಾರ ಮತ್ತು ಹುಣ್ಣಿಮೆ ದಿನದಂದು ಜೋಡು ತೆಂಗಿನಕಾಯಿಯನ್ನು ₹70ರಿಂದ 200ರವರೆಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಹಣ ಸುಲಿಗೆ ನಡೆಯುತ್ತಿರುವ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಹಿಂದಿನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ದೇವಸ್ಥಾನದ ವತಿಯಿಂದ ಭಕ್ತರಿಗೆ ರಿಯಾಯಿತಿ ದರದಲ್ಲಿ ತೆಂಗಿನ ಕಾಯಿ, ಉಡಿ ಸಾಮಗ್ರಿ ಹಾಗೂ ಸೀರೆಯನ್ನು ಮಾರಾಟ ಮಾಡಲು ನ. 10, 2023ರಂದು ರಿಯಾಯಿತಿ ದರದ ಮಳಿಗೆ ಪ್ರಾರಂಭಿಸಿದರು.ಈ ಮಳಿಗೆಯಲ್ಲಿ ವರ್ಷದ 365 ದಿನವೂ ಜೋಡು ತೆಂಗಿನ ಬೆಲೆ ₹50 ನಿಗದಿಪಡಿಸಲಾಗಿದೆ. ಇದು ಏಕರೂಪವಾಗಿರುತ್ತದೆ. ಈ ಕಾಯಿಯೊಂದಿಗೆ ಅರಿಷಿನ ಕುಂಕುಮ, ಹೂವು ಸಹ ನೀಡಲಾಗುತ್ತಿದೆ. ಮಂಗಳವಾರ, ಶುಕ್ರವಾರ ಇರಲಿ, ಹುಣ್ಣಿಮೆ ಇರಲಿ ಜೋಡು ಟೆಂಗಿನ ಬೆಲೆ ₹50 ಇರುತ್ತದೆ. ಇದಲ್ಲದೆ ಅಮ್ಮನವರಿಗೆ ಸಣ್ಣ ಉಡಿ ಸಾಮಗ್ರಿ ಬೆಲೆ ₹20, ದೊಡ್ಡ ಉಡಿ ಸಾಮಗ್ರಿ ಬೆಲೆ ₹50 ನಿಗದಿಪಡಿಸಲಾಗಿದೆ. ಮತ್ತು ಅಮ್ಮನವರಿಗೆ ಕಾಣಿಕೆಯಾಗಿ ಬಂದ ಸೀರೆಗಳ ಗುಣಮಟ್ಟದ ಮೇಲೆ ₹200 ರಿಂದ 700 ವರೆಗೆ ನಿಗದಿಪಡಿಸಲಾಯಿತು.