ವೈಜ್ಞಾನಿಕ ವಿಧಾನದಿಂದ ತೆಂಗು ಇಳುವರಿ ಹೆಚ್ಚಿಸಿಕೊಳ್ಳಿ: ಜೈನಾಥ್

| Published : Sep 29 2024, 01:46 AM IST

ವೈಜ್ಞಾನಿಕ ವಿಧಾನದಿಂದ ತೆಂಗು ಇಳುವರಿ ಹೆಚ್ಚಿಸಿಕೊಳ್ಳಿ: ಜೈನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕುಮಟಾ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಪ್ರಾಂಗಣದಲ್ಲಿ ತಾಲೂಕಿನ ಮೂರೂರು ಜಿಪಂ ಹಾಗೂ ಚಂದಾವರ ಗ್ರಾಪಂ ವ್ಯಾಪ್ತಿಯ ತೆಂಗು ಬೆಳೆಗಾರರ ಫಲಾನುಭವಿಗಳ ಆಯ್ಕೆ ಸಭೆ ನಡೆಯಿತು.

ಕುಮಟಾ: ಜಿಲ್ಲೆಯ ಕರಾವಳಿ ಪ್ರದೇಶ ತೆಂಗು ಬೆಳೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದ್ದರೂ ಇತ್ತೀಚೆಗೆ ತೆಂಗು ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಸಕಾರಣ ಹುಡುಕಿ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ಎವಿಪಿ ಉತ್ಪಾದಕ ಸಂಸ್ಥೆಯ ಸಹಕಾರದಲ್ಲಿ ಪ್ರಾತ್ಯಕ್ಷಿಕೆ ವಿಧಾನ ಅನುಸರಿಸಿ ಇಳುವರಿಯನ್ನು ವೈಜ್ಞಾನಿಕ ವಿಧಾನದಲ್ಲಿ ಹೆಚ್ಚಿಸಿಕೊಳ್ಳುವತ್ತ ರೈತರು ಮುಂದೆ ಬರಬೇಕು ಎಂದು ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಜೈನಾಥ್ ಹೇಳಿದರು.

ಇಲ್ಲಿನ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಪ್ರಾಂಗಣದಲ್ಲಿ ತಾಲೂಕಿನ ಮೂರೂರು ಜಿಪಂ ಹಾಗೂ ಚಂದಾವರ ಗ್ರಾಪಂ ವ್ಯಾಪ್ತಿಯ ತೆಂಗು ಬೆಳೆಗಾರರ ಫಲಾನುಭವಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚೇತನ ನಾಯ್ಕ ಮಾತನಾಡಿ, ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ಹುಟ್ಟಿಕೊಂಡಿರುವ ಎವಿಪಿ ಉತ್ಪಾದಕ ಸಂಸ್ಥೆಯವರು ಅತಿ ಚಿಕ್ಕ ತೆಂಗು ಬೆಳೆಗಾರರಿಗೂ ಯೋಜನೆಯ ಲಾಭ ತಲುಪುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಮಂಜು ಎಂ.ಜೆ. ಮಾತನಾಡಿ, ತೆಂಗು ಬೆಳೆಯ ಇಳುವರಿ ಹಾಗೂ ವಿವಿಧ ರೋಗಗಳ ನಿವಾರಣೆಗಾಗಿ ಈ ಯೋಜನೆಗೆ ಆಯ್ಕೆ ಮಾಡಿದ ಕ್ಷೇತ್ರ ಮಹತ್ವದ್ದಾಗಿದೆ ಎಂದರು.

ಎವಿಪಿ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ನಮ್ಮ ಸಂಸ್ಥೆಯಿಂದ ನಿಯೋಜನೆಗೊಂಡ ಎಲ್ಲ ಮರ ಕೊಯ್ಲು ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ತೆಂಗು ಅಭಿವೃದ್ಧಿ ಮಂಡಳಿಯು ಭವಿಷ್ಯ ನಿಧಿಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಈ ಯೋಜನೆಯ ಅನುಷ್ಠಾನಕ್ಕೆ ತಗಲುವ ಖರ್ಚು ವೆಚ್ಚವನ್ನು ರೈತರು ಹಾಗೂ ಸಂಸ್ಥೆಯ ಪರಸ್ಪರ ಹೊಂದಾಣಿಕೆಯಿಂದ ನಡೆಸಲಾಗುತ್ತಿದೆ ಎಂದರು.

ಎವಿಪಿ ಸಂಸ್ಥೆಯ ಮೂಲಕ ಪ್ರಾತ್ಯಕ್ಷಿಕ ವಿಧಾನ ಅನುಷ್ಠಾನಕ್ಕಾಗಿ ಅರ್ಹರನ್ನು ಗುರುತಿಸಲಾಯಿತು. ಸಂಸ್ಥೆಯ ನಿರ್ದೇಶಕ ಕೃಷ್ಣ ನಾಯ್ಕ, ಈಶ್ವರ ಕೊಡಿಯಾ, ರೈತ ಆಸಕ್ತ ಗುಂಪಿನ ಸದಸ್ಯರು, ರೈತರು ಹಾಜರಿದ್ದರು. ಎವಿಪಿ ಸಂಸ್ಥೆಯ ನಿರ್ದೇಶಕ ತಿಮ್ಮಣ್ಣ ಭಟ್ಟ ಸ್ವಾಗತಿಸಿದರು. ಪೃಥ್ವಿ ಜಿ. ನಾಯ್ಕ ವಂದಿಸಿದರು.