ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಳವಾಗಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಳವಾಗಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.

1ನೇ ತರಗತಿಯಿಂದ 10ನೇ ತರಗತಿ ವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಬಿಸಿಯೂಟದ ಜತೆಗೆ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕು ಎಂಬ ಸರ್ಕಾರದ ಆದೇಶ ಇದೆ. ಸದ್ಯ ಶಾಲೆಗಳಿಗೆ ಸರ್ಕಾರದಿಂದ ನೀಡುತ್ತಿರುವ ಅನುದಾನ ಸಾಕಾಗದೇ ಮುಖ್ಯಶಿಕ್ಷಕರು ತಮ್ಮ ಸ್ವಂತ ಹಣ ನೀಡುವ ಪರಿಸ್ಥಿತಿ ಎದುರಾಗಿದೆ.

ಸರ್ಕಾರ ಮೊಟ್ಟೆಗೆ ₹6 ನೀಡುತ್ತಿದ್ದು, ಇದರಲ್ಲಿ ಮೊಟ್ಟೆ ಸುಲಿಯುವುದಕ್ಕೆ 30 ಪೈಸೆ, ಸರಬರಾಜು ಮಾಡುವುದಕ್ಕೆ 20 ಪೈಸೆ ಹಾಗೂ ಬೇಯಿಸಲು 30 ಪೈಸೆ ಬಳಸಬೇಕಾಗಿದೆ. ಇನ್ನುಳಿದ ₹5.20ಗಳಲ್ಲಿಯೆ ಮೊಟ್ಟೆ ಖರೀದಿಸುವ ಪರಿಸ್ಥಿತಿ ಇವರದ್ದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹7.50ಗಿಂತಲೂ ಅಧಿಕ ದರವಿದೆ. ದಿನದಿಂದ ದಿನಕ್ಕೆ ಮೊಟ್ಟೆ ದರ ಏರಿಳಿತವಾಗುತ್ತದೆ. ಹೀಗಾಗಿ ಸರ್ಕಾರದಿಂದ ನೀಡುತ್ತಿರುವ ಅನುದಾನದಲ್ಲಿ ಮೊಟ್ಟೆ ಖರೀದಿ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕರು.

ಅನುದಾನ ಹೆಚ್ಚಿಸಿ: ಕಳೆದ ವರ್ಷ ಸರ್ಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಈಗ ಅಜೀಂ ಪ್ರೇಮಜೀ ಫೌಂಡೇಷನ್ ನೆರವಿನಿಂದ ವಾರದಲ್ಲಿ 6 ದಿನವೂ ಮೊಟ್ಟೆ ವಿತರಿಸಲಾಗುತ್ತಿದ್ದು, ಸರ್ಕಾರ ಹೊಸ ದರ ನಿಗದಿ ಮಾಡುವ ಮೂಲಕ ಅನುದಾನ ಹೆಚ್ಚಿಗೆ ಮಾಡಿದರೆ ಅನುಕೂಲವಾಗಲಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಕೊಡಬೇಕು. ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ಬೆಲೆಯೂ ಕೆಲವೊಮ್ಮೆ ಹೆಚ್ಚಾಗುತ್ತಿದೆ. ಹೀಗಾಗಿ ಮೊಟ್ಟೆ ಮತ್ತು ಬಾಳೆಹಣ್ಣಿನ ವಿತರಣೆಗೆ ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚಳ ಮಾಡಬೇಕು ಎಂಬುದು ಒತ್ತಾಯವಾಗಿದೆ.

ಉತ್ಪಾದನೆ ಕುಂಠಿತ: ಇತ್ತೀಚೆಗೆ ಮೊಟ್ಟೆ ಬೆಲೆ ಹೆಚ್ಚಾಗಲು ಚಳಿಗಾಲ ಮತ್ತು ಹವಾಮಾನ ವೈಪರೀತ್ಯ ಕಾರಣವಾಗಿದ್ದು, ಇದರಿಂದ ಮೊಟ್ಟೆ ಉತ್ಪಾದನೆ ಕುಂಠಿತವಾಗಿ ಕಡಿಮೆ ಪೂರೈಕೆ ಮತ್ತು ಹೆಚ್ಚಿದ ಬೇಡಿಕೆಯ ವ್ಯತ್ಯಾಸದಿಂದ ಬೆಲೆ ಏರಿಕೆಯಾಗಿದೆ ಎಂದು ಮೊಟ್ಟೆ ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ವಿದ್ಯಾರ್ಥಿಗಳ ವಿವರ: ಕುಷ್ಟಗಿ ತಾಲೂಕಿನಲ್ಲಿರುವ ಸರ್ಕಾರಿ ಮತ್ತು ಅನುದಾನಿತ 262 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ ಒಟ್ಟು 48,879 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 38,712 ವಿದ್ಯಾರ್ಥಿಗಳು ಮೊಟ್ಟೆ ಸೇವಿಸುತ್ತಾರೆ. 5279 ವಿದ್ಯಾರ್ಥಿಗಳು ಬಾಳೆಹಣ್ಣನ್ನು ಸೇವಿಸುತ್ತಿದ್ದಾರೆ ಎಂದು ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಗಳ ಮಾಹಿತಿಯಿಂದ ತಿಳಿದು ಬಂದಿದೆ.

ಮೇಲಧಿಕಾರಿಗಳ ಗಮನಕ್ಕೆ: ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಹೆಚ್ಚಾಗಿರುವುದರಿಂದ ಶಾಲಾ ಮುಖ್ಯ ಶಿಕ್ಷಕರಿಗೆ ಹೊರೆ ಆಗುತ್ತಿರುವುದು ಗಮನಕ್ಕಿದೆ, ಈಗಾಗಲೇ ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಇದು ಸರ್ಕಾರ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ಕುಷ್ಟಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹಾಂತಯ್ಯ ಸೊಪ್ಪಿಮಠ ಹೇಳಿದರು.

ಮೊಟ್ಟೆ ದರ ಏರಿಕೆಯಿಂದಾಗಿ ಶಾಲಾ ಮುಖ್ಯಶಿಕ್ಷಕರಿಗೆ ಹೊರೆ ಆಗುತ್ತಿರುವ ಕುರಿತು ಈಗಾಗಲೆ ನಮ್ಮ ಗಮನಕ್ಕೆ ಬಂದಿದೆ. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅನುದಾನ ಹೆಚ್ಚಿಸಲು ಸರ್ಕಾರ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ನೀಡಬಹುದು ಎಂಬ ಭರವಸೆಯಲ್ಲಿದ್ದೇವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಷ್ಟಗಿ ತಾಲೂಕಾಧ್ಯಕ್ಷ ನಿಂಗಪ್ಪ ಗುನ್ನಾಳ ಹೇಳಿದರು.