ಸಾರಾಂಶ
ಶಿರಸಿ: ಹುಚ್ಚು ನಾಯಿ ಹಾಗೂ ಹಾವು ಕಚ್ಚಿದ ಪ್ರಕರಣ 2023ರಲ್ಲಿ ಜಾಸ್ತಿಯಾಗಿದೆ. 2022ಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ ಕಣ್ಣಿ ತಿಳಿಸಿದರು.
ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಜನವರಿ ಇಂದ ಈ ವರೆಗೆ ೧೮೨೭ ಹುಚ್ಚು ನಾಯಿ ಕಚ್ಚಿದ ಪ್ರಕರಣಗಳು ದಾಖಲಾದರೆ ಈ ಬಾರಿ ೨೫೬೩ ಪ್ರಕರಣ ದಾಖಲಾಗಿದೆ. ಒಟ್ಟೂ ೭೩ ನಾಯಿ ಕಚ್ಚಿದ ಪ್ರಕರಣ ಹೆಚ್ಚಾದಂತಾಗಿದೆ. ಇದೇ ರೀತಿಯಾಗಿ ಕಳೆದ ಬಾರಿ ೮೮ ಹಾವು ಕಚ್ಚಿದ ಪ್ರಕರಣ ದಾಖಲಾದರೆ ಈ ಬಾರಿ ೧೩೪ ಪ್ರಕರಣಗಳು ದಾಖಲಾಗಿದೆ.
ಒಟ್ಟೂ ೪೬ ಹಾವು ಕಚ್ಚಿದ ಪ್ರಕರಣ ಹೆಚ್ಚಾದಂತಾಗಿದೆ. ಹಾವು ಮತ್ತು ನಾಯಿ ಕಚ್ಚಿದ ಪ್ರಕರಣಕ್ಕೆ ಸಮರ್ಪಕವಾಗಿ ಔಷಧ ಮತ್ತು ಚುಚ್ಚುಮದ್ದು ನೀಡಲಾಗಿದೆ. ಆದರೆ ನಾಯಿ ಕಚ್ಚಿದ ಸಂಖ್ಯೆ ಹೆಚ್ಚಾದ ಬಗ್ಗೆ ಅಧಿಕಾರಿಗಳೇ ವಿಷಾದ ವ್ಯಕ್ತಪಡಿಸಿ, ನಿಯಂತ್ರಣಕ್ಕೆ ಸೂಕ್ತವಾದ ಕ್ರಮಕೈಗೊಳ್ಳುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ಪಿ. ಸತೀಶ ತಿಳಿಸಿದರು.
ತಾಲೂಕಿನಲ್ಲಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೇ ಗ್ರಾಮಸ್ಥರು ಪರಿತಪಿಸುತ್ತಿದ್ದು ಗ್ರಾಮಸ್ಥರು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗಳಿಗೆ ಬರುವಂತಾಗಿದೆ. ಸುಗಾವಿ, ಗಿಡಮಾವಿನಕಟ್ಟಾ, ಸಾಲ್ಕಣಿ ಹಾಗೂ ಮೆಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಡಾ. ವಿನಾಯಕ ಭಟ್ ತಿಳಿಸಿದರು.
೨೦೪ ಆಶಾ ಕಾರ್ಯಕರ್ತರ ಮಂಜೂರಿ ಹುದ್ದೆಯಲ್ಲಿ ೧೮೯ ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು ೧೫ ಹುದ್ದೆ ಖಾಲಿಯಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ತಾಲೂಕಿನಲ್ಲಿ ನಾಲ್ಕು ಕೊರೋನಾ ಪ್ರಕರಣ ದಾಖಲಾಗಿದ್ದು ಈರ್ವರು ಮನೆಯಲ್ಲಿ ಗುಣಮುಖರಾಗಿದ್ದಾರೆ. ಕೊರೋನ ಬಗ್ಗೆ ನಗರ ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಗಾವಹಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಕಳೆದ ಬಾರಿ ಕೆಡಿಪಿ ಸಭೆಯಲ್ಲಿ ಹಾಜರಾಗದ ಇಲಾಖಾ ಅಧಿಕಾರಿಗಳಿಗೆ ನೋಟಿಸ್ ನೀಡಿ ಉತ್ತರ ಕೇಳಲಾಗಿತ್ತು. ಆದರೆ ಅವರಿಂದ ಯಾವುದೇ ಸಮರ್ಪಕವಾದ ಉತ್ತರ ಬಂದಿಲ್ಲ. ಆದ್ದರಿಂದ ಅವರ ಮೇಲೆ ಕ್ರಮಕೈಗೊಳ್ಳಲು ಸಿಇಒ ಅವರಿಗೆ ಬರೆಯುವುದಾಗಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಸತೀಶ ಹೆಗಡೆ ಸಭೆಯಲ್ಲಿ ತಿಳಿಸಿದರು.ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ಹವಾಮಾನಧಾರಿತ ಬೆಳೆವಿಮೆ ಯೋಜನೆಯಡಿ ₹ ೨೯.೫೯ ಕೋಟಿ ಜಮಾವಾಗಿದೆ.
ಇದರಲ್ಲಿ ಅಡಕೆಗೆ ₹ ೨೮.೭೨ ಕೋಟಿ ಹಾಗೂ ಕಾಳು ಮೆಣಸಿಗೆ ₹ ೮೪.೭೫ ಲಕ್ಷ ಜಮಾವಾಗಿದೆ ಎಂದರು.ಪಶು ಇಲಾಖೆಯ ನಿರ್ದೇಶಕ ಡಾ. ಗಜಾನನ ಹೊಸ್ಮನಿ ಮಾಹಿತಿ ನೀಡಿ ಜಾನುವಾರುಗಳಿಗೆ ಜೀವವಿಮೆ ಜಾರಿಗೊಳಿಸಿದ್ದು ಮೂರು ವರ್ಷದ ಅವಧಿಗೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ಸರ್ಕಾರ ಶೇ. ೭೦ ಹಾಗೂ ಶೇ. ೩೦ರಷ್ಟು ರೈತರು ತುಂಬ ಬೇಕೆಂದರು.ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಳ ಇದ್ದರು.