ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ಮಟ್ಟ ವೃದ್ಧಿ

| Published : May 22 2024, 12:50 AM IST

ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ಮಟ್ಟ ವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಕೆರೆಗಳನ್ನು ಅಭಿವೃದ್ಧಿಪಡಿಸುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಹೇಳಿದರು.

ಅವರು, ತಾಲೂಕಿನ ಮಣ್ಣೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಹತ್ತಿರ ನಮ್ಮ ಊರು ನಮ್ಮ ಕೆರೆ ಹೊಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ನಾಶ ಮಾಡದೆ ಗಿಡಗಳನ್ನು ನೆಟ್ಟರೆ ಉತ್ತಮ ಮಳೆಯಾಗಿ ಗ್ರಾಮಗಳು ಸಮೃದ್ಧಿಯಾಗಲಿವೆ. ಜೊತೆಗೆ ಇದರಿಂದ ಜಲಮೂಲ ಸಂರಕ್ಷಣೆಯಾಗಲಿದೆ. ಜಲವಿಲ್ಲದಿದ್ದರೆ ಸಕಲ ಜೀವ ರಾಶಿಗಳು ಬದುಕಲು ಅಸಾಧ್ಯ. ಜಲಮೂಲ ರಕ್ಷಣೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಪ್ರಸ್ತುತ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ರಾಜ್ಯದಲ್ಲಿ 800 ಕೆರೆಗಳು, ಜಿಲ್ಲೆಯಲ್ಲಿ 32 ಹಾಗೂ ತಾಲೂಕಿನಲ್ಲಿ 9 ಕೆರೆಗಳ ಹೂಳೆತ್ತಿ ಕೆರೆಗಳನ್ನು ಪುನಶ್ಚೇತನ ಮಾಡಲಾಗುತ್ತಿದೆ ಇದರಿಂದ ರೈತಾಪಿ ವರ್ಗದವರಿಗೆ ಕೃಷಿಗೆ ಪೂರವಾದ ವಾತಾವರಣ ಕಲ್ಪಿಸಿಕೊಟ್ಟಂತಾಗಿದೆ. ಕೆರೆ, ಕುಂಟೆ, ಕಾಲುವೆಗಳು ಸರಿಯಾಗಿದ್ದರೆ ನೀರು ಸರಾಗವಾಗಿ ಹರಿಯುತ್ತದೆ ಎಂದರು.

ಜಲಮೂಲದ ಸಂರಕ್ಷಣೆ ನಮೆಲ್ಲರ ಕರ್ತವ್ಯವಾಗಬೇಕು. ನಮ್ಮ ಪೂರ್ವಜರು ನಮಗೆ ಕೆರೆ-ಕಟ್ಟೆಗಳನ್ನು ನೀಡಿದ್ದು ಅವುಗಳನ್ನು ಹಾಳು ಮಾಡದೆ ಹೂಳು ತುಂಬದ ರೀತಿ ನೋಡಿಕೊಳ್ಳಬೇಕು. ಕಸ ಕಡ್ಡಿ, ಗಿಡಗಂಟೆಗಳು ಬೆಳೆಯದಂತೆ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು ರೈತರು ಯುವಕರು ತಮ್ಮೂರಿನ ಕೆರೆ-ಕಟ್ಟೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.

ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ಮಾತನಾಡಿ, ಕೆರೆ-ಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಪ್ರತಿ ಗ್ರಾಮದಲ್ಲಿಯೂ ಸಣ್ಣ ಪುಟ್ಟ ಕೆರೆ-ಕಟ್ಟೆಗಳಿದ್ದು, ಅವುಗಳು ಅಭಿವೃದ್ಧಿಯಾಗದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದನ್ನು ಮನಗಂಡ ಧರ್ಮಸ್ಥಳ ಪೂಜ್ಯರು ಕೆರೆಹೂಳೆತ್ತುವ ಕಾರ್ಯವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಹಲವು ಕೆರೆಗಳನ್ನು ಹೂಳೆತ್ತುವ ಮೂಲಕ ರೈತರಿಗೆ ಹಸ್ತಾಂತರ ಮಾಡಲಾಗಿದ್ದು, ಇದಕ್ಕೆ ಸ್ಥಳೀಯರ ಸಹಕಾರ ಮತ್ತು ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು

ಹಿರೇಜೇವರ್ಗಿಯ ಷ.ಬ್ರ. ಜಯಗುರುಶಾಂತಲಿಂಗಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವೇದಮೂರ್ತಿ ಹಾಲಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ರೇಣುಕಾ ದೈತನ, ಉಪಾಧ್ಯಕ್ಷೆ ಅನಿತಾ ಜಾನಕಿ, ಸದಸ್ಯರಾದ ಬಸವರಾಜ ವಾಯಿ, ದೇವಪ್ಪ ಲಾಳಸಂಗಿ, ಮಣ್ಣೂರ ಕೆರೆ ಸಮೀತಿ ಅಧ್ಯಕ್ಷ ಮಾಳಪ್ಪ ಪೂಜಾರಿ, ಉಪಾಧ್ಯಕ್ಷ ಮಹಾಂತೇಶ ಕರೂಟಿ, ವಲಯ ಮೇಲ್ವಿಚಾರಕಿ ರೂಪಾ ಹೆಬ್ಬಾಳಟ್ಟಿ, ಸುಮಂಗಲಾ ಶಿವೂರ, ಜಯಶ್ರೀ ವಾಯಿ, ಮಹಾದೇವಿ ರಾಂಪೂರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ರೈತರು ಗ್ರಾಮಸ್ಥರಿದ್ದರು.