ಮಲಪ್ರಭಾ ಜಲಾಶಯದ ಒಳಹರಿವು ಹೆಚ್ಚಳ: ರೈತರ ಹರ್ಷ

| Published : Jul 28 2024, 02:05 AM IST

ಮಲಪ್ರಭಾ ಜಲಾಶಯದ ಒಳಹರಿವು ಹೆಚ್ಚಳ: ರೈತರ ಹರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ 2023ರ ಜುಲೈ 26ಕ್ಕೆ 2059.00 ಅಡಿ, ಒಳಹರಿವು 16872 ಕ್ಯುಸೆಕ್ ಇತ್ತು. ಜುಲೈ 26, 2024ರಂದು 2069.60 ಅಡಿ, ಒಳಹರಿವು 21606 ಕ್ಯುಸೆಕ್ ಇದೆ

ಎಸ್.ಜಿ. ತೆಗ್ಗಿನಮನಿ‌ ನರಗುಂದ

15 ದಿನಗಳಿಂದ ಮಲಪ್ರಭಾ ನದಿ ಮೇಲ್ಭಾಗದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮಾಧಾನ ತಂದಿದೆ.

ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದರು.

ಈ ಹಿಂದೆ ಅಲ್ಪಸ್ವಲ್ಪ ಮಳೆ ಸುರಿದ ಕಾರಣ ಮುಂಗಾರು ಹಂಗಾಮಿನಲ್ಲಿ ರೈತರು ಹೆಸರು, ಗೋವಿನಜೋಳ, ಬಿಟಿಹತ್ತಿ, ಈರುಳ್ಳಿ, ಮೆಣಸಿನಕಾಯಿ ಇತರ ಬೆಳೆ ಬಿತ್ತನೆ ಮಾಡಿದ್ದಾರೆ. ಸದ್ಯ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಾದರೆ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂಬುದು ರೈತರ ಲೆಕ್ಕಾಚಾರ: ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಾದ ನರಗುಂದ, ನವಲಗುಂದ ರೋಣ, ಬಾದಾಮಿ, ಸವದತ್ತಿ, ಮುನವಳ್ಳಿ, ಅಣ್ಣಿಗೇರಿ ತಾಲೂಕಿನ ರೈತರು ಈ ಜಲಾಶಯದ ಕಾಲುವೆ ನೀರನ್ನು ನಂಬಿಕೊಂಡು ಕೃಷಿ ಮಾಡುದ್ದಾರೆ. ಈ ವರ್ಷ ಜಲಾಶಯಕ್ಕೆ ನೀರಿನ ಸಂಗ್ರಹ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರೈತರಲ್ಲಿ ಹೊಸ ಹುಮ್ಮಸ್ಸು ತಂದಿದೆ.

ನೀರಿನ ಹರಿವು ಹೆಚ್ಚಳ: ಜುಲೈ ತಿಂಗಳ ಕೊನೆ ವಾರದಲ್ಲಿ ಮಳೆ ಆರಂಭವಾಗಿದ್ದರಿಂದ ಕಳೆದ 15 ದಿನಗಳಲ್ಲಿ ಜಲಾಶಯದಲ್ಲಿ ಒಟ್ಟು 25 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ 37 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇನ್ನೂ 12 ಟಿಎಂಸಿ ನೀರು ಬಂದರೆ ಜಲಾಶಯ ಭರ್ತಿಯಾಗುತ್ತದೆ. ಕಳೆದ ವರ್ಷ 2023ರ ಜುಲೈ 26ಕ್ಕೆ 2059.00 ಅಡಿ, ಒಳಹರಿವು 16872 ಕ್ಯುಸೆಕ್ ಇತ್ತು. ಜುಲೈ 26, 2024ರಂದು 2069.60 ಅಡಿ, ಒಳಹರಿವು 21606 ಕ್ಯುಸೆಕ್ ಇದೆ.

ಜುಲೈ ಕೊನೆ ವಾರದಲ್ಲಿ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಮಲಪ್ರಭಾ ಜಲಾಶಯದ ಒಳಹರಿವು ಹೆಚ್ಚಿದೆ ಎಂದು ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಜಗದೀಶ ಕುರಿ ಹೇಳಿದ್ದಾರೆ.

ಕಳೆದೊಂದು ವಾರದಿಂದ ರೈತರ ಜೀವನಾಡಿ ಮಲಪ್ರಭಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತೋಷವಾಗಿದೆ ಎಂದು ಕರ್ನಾಟಕ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಸೊಪ್ಪಿನ ತಿಳಿಸಿದ್ದಾರೆ.