ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ ಹರಿಹರಪುರ ಹೋಬಳಿ ಘಟಕದಿಂದ ಕಸಾಪ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪತಾಯಿಯೇ ಪ್ರತ್ಯಕ್ಷ ದೇವರು ಜೀವನದಲ್ಲಿ ನಮ್ಮೆಲ್ಲಾ ಸಾಧನೆಗಳಿಗೆ ತಾಯಿಯೇ ಮುಖ್ಯ ಆಧಾರಸ್ತಂಭ ಎಂದು ದಯಂಬಳ್ಳಿ ಶಾಲೆ ಮುಖ್ಯ ಶಿಕ್ಷಕಿ ಪ್ರೇಮಾ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಹರಿಹರಪುರ ಹೋಬಳಿ ಘಟಕದಿಂದ ಜೀವನ ಚೇತನ ವೇದಿಕೆ ಸಹಕಾರದೊಂದಿಗೆ ದಯಂಬಳ್ಳಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಸಾಪ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಮಾತೃತ್ವದ ಕುರಿತು ಉಪನ್ಯಾಸ ನೀಡಿದ ಅವರು ಕಥೆಗಳ ಮೂಲಕ ಮನಮುಟ್ಟುವಂತೆ ಮಾಹಿತಿ ನೀಡಿದರು. ಇತಿಹಾಸ ಸಂಶೋಧಕ ನಾ. ಸುರೇಶ್ ಕಲ್ಕೆರೆ ಸ್ಥಳೀಯ ಇತಿಹಾಸ ಕುರಿತು ಉಪನ್ಯಾಸ ನೀಡುತ್ತಾ ಪ್ರಕೃತಿ ಆರಾಧಕರಾದ ನಾವು ಪ್ರಕೃತಿಯಲ್ಲಿಯೇ ತಾಯಿಯನ್ನು ಕಂಡವರು. ಮಾತೃ ಸಮಾಜದ ರಾಣಿಯಾಗಿ ಕಾಳಲದೇವಿ ಈ ಭಾಗದ ಬಗ್ಗುಂಜಿ ಯನ್ನು ಆಳಿದ ಸಮರ್ಥವಾಗಿ ತನ್ನ ಅಧಿಕಾರ ನಡೆಸಿರುವುದು ಇತಿಹಾಸದಿಂದ ತಿಳಿಯುತ್ತದೆ. ಸುತ್ತಮುತ್ತ ಊರುಗಳಾದ ದಯಂಬಳ್ಳಿ, ಎತ್ತಿನಟ್ಟಿ, ಕುದುರೆಗುಂಡಿ, ಚಿಟ್ಟೇಮಕ್ಕಿ, ಹುರುಳಿಹಕ್ಲು, ಪಂಚಮಿಕಲ್ಲು, ಮುಂತಾದ ಊರುಗಳ ಇತಿಹಾಸ ತಿಳಿಸಿದ ಅವರು ಪರಿಸರಕ್ಕೆ ಪೂರಕವಾದ ಮಲೆನಾಡಿನ ಕೃಷಿ ಕಾರ್ಮಿಕರ ಬಗ್ಗೆಯೂ ವಿವರಣೆ ನೀಡಿದರು. ಕಸಾಪ ಹರಿಹರಪುರ ಹೋಬಳಿ ಘಟಕ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಮಾತನಾಡಿ ಕೆಲವು ಪ್ರತಿಭಾವಂತರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಸಾಪ ಹರಿಹರಪುರ ಘಟಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸುತ್ತಿದೆ. ಕಸಾಪ ಕಾರ್ಯಕ್ರಮಗಳು ಜನರೆಡೆಗೆ ತಲುಪುತ್ತಿರುವುದು ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರೋತ್ಸಾಹ ದಾಯಕವಾಗಿದೆ. ಜನರಲ್ಲಿ ಬರವಣಿಗೆ ಹಾಗೂ ಓದುವ ಹವ್ಯಾಸ ಹೆಚ್ಚಿದಾಗ ಸಾಹಿತ್ಯ ಅಭಿರುಚಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಪುಸ್ತಕಗಳನ್ನು ಓದುವುದು, ಪ್ರಬಂಧ, ಕವನಗಳ ಮೂಲಕ ನಮ್ಮ ಸಾಹಿತ್ಯದ ಪ್ರಾಕಾರಗಳನ್ನು ಹೆಚ್ಚಿಸಿಕೊಳ್ಳೋಣ ಎಂದರು. ಚೇತನಾ ಶಿವಶಂಕರ್, ಧರ್ಮಸೇನಾ, ಶ್ರೀಕಂಠ ತಂಡದಿಂದ ಗೀತಾಗಾಯನ ಹಾಗೂ ಭಜನಾ ಕಾರ್ಯಕ್ರಮ ನಡೆದವು. ಮಾತೃತ್ವ ದಿನಾಚರಣೆ ಮತ್ತು ಮಲೆನಾಡ ಕಾರ್ಮಿಕರು ಹಾಗೂ ನಗುವಿನ ಮಹತ್ವ ಕುರಿತು ಕಸಾಪದಿಂದ ನಡೆದ ಕವನ ವಾಚನ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ಕೃಷಿಕ ರಾಮಪ್ಪ ಗೌಡ, ಕಸಾಪ ಜಿಲ್ಲಾ ಘಟಕದ ಸಂಚಾಲಕಿ ಎಸ್.ಎನ್.ಚಂದ್ರಕಲಾ, ಗ್ರಾಪಂ ಸದಸ್ಯೆ ಶಕೀಲಾ, ಶಿಕ್ಷಕ ಮಾರುತಿಪ್ರಸಾದ್, ಭುವನಕೋಟೆ ಗ್ರಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಶಶಿಶೇಖರ್ ಹೊರಕೊಡಿಗೆ, ಶುಕುರ್ ಅಹಮ್ಮದ್ ಮುಂತಾದವರು ಮಾತನಾಡಿದರು. ಶಿವಾನಂದ, ಕಾವ್ಯ, ಪ್ರತಿಮ, ಗಣೇಶ್, ವಿನೋದ, ಅಶ್ವಿನಿ, ರಾಮಣ್ಣ, ನೀಲಾ, ಮನ್ವಿತ್, ಹಿರಣ್ಯ, ಮುಂತಾದವರು ಕಾರ್ಯಕ್ರಮದಲ್ಲಿದ್ದರು.