ಮೆಕ್ಕೆಜೋಳ ಖರೀದಿ ಮಿತಿಯನ್ನು 20ರಿಂದ 50 ಕ್ವಿಂಟಲ್‌ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರೈತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಜತೆಗೆ, ಸೋಮವಾರ ಮೋಟೆಬೆನ್ನೂರು ಬಳಿ ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆಯನ್ನು ರೈತ ಸಂಘ ಹಿಂಪಡೆಯಿತು.
ಹಾವೇರಿ:ಮೆಕ್ಕೆಜೋಳ ಖರೀದಿ ಮಿತಿಯನ್ನು 20ರಿಂದ 50 ಕ್ವಿಂಟಲ್‌ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರೈತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಜತೆಗೆ, ಸೋಮವಾರ ಮೋಟೆಬೆನ್ನೂರು ಬಳಿ ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆಯನ್ನು ರೈತ ಸಂಘ ಹಿಂಪಡೆಯಿತು.
ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳವನ್ನು ಪ್ರತಿ ರೈತರಿಂದ 50 ಕ್ವಿಂಟಲ್‌ವರೆಗೆ ಖರೀದಿಸುವ ಕುರಿತಂತೆ ರಾಜ್ಯ ಸರ್ಕಾರ ಹೊರಡಿಸಿದ ಪರಿಷ್ಕೃತ ಆದೇಶವನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸ್ವಾಗತಿಸಿದರು. ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಭಾನುವಾರ ಸಂಜೆ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ಎಂಟು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದ ರೈತ ಸಂಘ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಡಿ. 8ರಿಂದ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಕರೆ ನೀಡಿತ್ತು. ಅದರಂತೆ ರೈತ ಸಂಘದ ಮುಖಂಡರು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ, ಬೆಳಗಾವಿ ಅಧಿವೇಶನ ಆರಂಭದ ದಿನವೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿತ್ತು.
ಈ ಮಧ್ಯೆ ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಅಧಿಕಾರಿಗಳು ರೈತರೊಂದಿಗೆ ವಿವಿಧ ರೀತಿಯಲ್ಲಿ ಸಂಧಾನಕ್ಕೆ ಪ್ರಯತ್ನಿಸಿದರೂ ವಿಫಲವಾಗಿತ್ತು. ಹೆದ್ದಾರಿ ಬಂದ್ ಮಾಡಿದರೆ ಬಂಧಿಸುವ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆಯನ್ನೂ ನೀಡಿತ್ತು. ಇದಕ್ಕೂ ಬಗ್ಗದ ರೈತರು ಸೋಮವಾರ ಹೋರಾಟಕ್ಕೆ ಅಣಿಯಾಗಿದ್ದರು.ರಾಜ್ಯ ಸರ್ಕಾರ ಪ್ರತಿ ರೈತರಿಂದ 20 ಕ್ವಿಂಟಲ್ ಬದಲಾಗಿ 50 ಕ್ವಿಂಟಲ್ ವರೆಗೆ ಖರೀದಿ ಮಾಡುವ ಬಗ್ಗೆ ಭಾನುವಾರ ಆದೇಶವನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಹೋರಾಟ ಕೈಬಿಟ್ಟ ರೈತರು, ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಸರ್ಕಾರ ಹಾವೇರಿ ಜಿಲ್ಲಾ ರೈತರ ಹೋರಾಟಕ್ಕೆ ಮಣಿದು ಪ್ರತಿ ರೈತರಿಂದ 50 ಕ್ವಿಂಟಲ್ ತೆಗೆದುಕೊಳ್ಳುವ ಪರಿಷ್ಕೃತ ಆದೇಶವನ್ನು ಹೊರಡಿಸಿರುವುದು ಸ್ವಾಗತಾರ್ಹ. ಇದರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟವನ್ನು ಸದ್ಯ ಹಿಂಪಡೆದುಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದು, ಸರ್ಕಾರ ಶೇ. 25ರಷ್ಟು ಅಂದರೆ 4 ಲಕ್ಷ ಮೆಟ್ರಿಕ್ ಟನ್ ಆದರೂ ಖರೀದಿಸಬೇಕು. ಕೇವಲ 20 ಸಾವಿರ ಮೆಟ್ರಿಕ್ ಖರೀದಿಯಿಂದಾಗಿ ಯಾವುದೇ ಪ್ರಯೋಜನವಾಗುವುದಿಲ್ಲ. ಒಂದೇ ದಿನಕ್ಕೆ 20 ಸಾವಿರ ಮೆಟ್ರಿಕ್ ಟನ್‌ನ ನೋಂದಣಿ ಕಾರ್ಯ ಮುಗಿಯಲಿದೆ. ಮುಂದೇನು ಎಂಬ ಪ್ರಶ್ನೆ ಉದ್ಭವಿಸುವುದರ ಒಳಗಾಗಿ ಸರ್ಕಾರ ಎಚ್ಚೆತ್ತು, ಕನಿಷ್ಠ 4 ಲಕ್ಷ ಮೆಟ್ರಿಕ್ ಟನ್ ಆದರೂ ಖರೀದಿ ಮಾಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ರೈತ ಮುಖಂಡರಾದ ಮಾಲತೇಶ ಪೂಜಾರ, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ, ಮರಿಗೌಡ ಪಾಟೀಲ, ಶಿವಯೋಗಿ ಹೊಸಗೌಡ್ರ, ಮುತ್ತಪ್ಪ ಗುಡಗೇರಿ, ಎಚ್.ಎಚ್. ಮುಲ್ಲಾ, ರಾಜು ತರ್ಲಗಟ್ಟ, ಪ್ರಭುಗೌಡ ಪ್ಯಾಟಿ, ಸುರೇಶ ಮೈದೂರ, ಚನ್ನಪ್ಪ ಮರಡೂರ, ರುದ್ರಪ್ಪ ಅಣ್ಣಿ ಉಪಸ್ಥಿತರಿದ್ದರು.