ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಇಷ್ಟು ದಿನ ಮಳೆಯ ಕೊರತೆ, ಬರಗಾಲ, ಬೇಸಿಗೆಯಲ್ಲಿ ಕರೆಂಟ್ ಬೇಡಿಕೆ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಿದ ಜಿಲ್ಲೆಯ ಶಾಖೋತ್ಪನ್ನ ಸ್ಥಾವರಗಳ ಮೇಲಿದ್ದ ಒತ್ತಡ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದೆ. ಮುಂಗಾರು ಪೂರ್ವ ಹಾಗೂ ಮುಂಗಾರು ಹಂಗಾಮಿನಲ್ಲಿ ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಬೇಡಿಕೆಯೂ ಕಡಿಮೆಯಾಗಿದೆ. ಅಲ್ಲದೆ ಜಲ ಉತ್ಪಾದನೆ ಹೆಚ್ಚಳ ಮತ್ತು ಪವನ ಮತ್ತು ಸೋಲಾರ್ ವಿದ್ಯುತ್‌ನಿಂದ ನಿರ್ವಹಣೆ ಸಾಧ್ಯವಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.
ಕಳೆದ ಎರಡ್ಮೂರು ತಿಂಗಳಿನಿಂದ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ವರುಣ ದೇವ ಕರುಣೆ ತೋರಿದ್ದರಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಇದರಿಂದಾಗಿ ಬತ್ತಿ ಬರಡಾಗಿದ್ದ ಜಲಾಶಯಗಳು, ನದಿಗಳಿಗೆ ಮತ್ತೆ ಜೀವಕಳೆ ಬಂದಿದೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯಾನುಸಾರ ಗರಿಷ್ಠ ಮಟ್ಟದಲ್ಲಿ ದುಡಿದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಈಗ ಸಾಧಾರಣ ಮಟ್ಟದಲ್ಲಿ ಕರೆಂಟ್ ಉತ್ಪಾದಿಸಲಾಗುತ್ತಿದೆ.ಉತ್ಪಾದನೆ ಎಷ್ಟು: ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್)ದ ಒಟ್ಟು ಎಂಟು ಘಟಕಗಳ ಪೈಕಿ 6 ರಿಂದ ಕರೆಂಟ್ ಉತ್ಪಾದಿಸಲಾಗುತ್ತಿದೆ. ಸ್ಥಾವರದ 210 ಮೆಗಾ ವ್ಯಾಟ್ ಸಾಮರ್ಥ್ಯದ 1ನೇ ಮತ್ತು 7ನೇ ಘಟಕ ಬಿಟ್ಟು ಉಳಿದ 6 ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ. ಒಂದನೇ ಘಟಕವು ಮೂರು ದಶಕ ಪೂರೈಸಿದ್ದರಿಂದ ಅದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಏಳನೇ ಘಟಕದಲ್ಲಿ ಕಾಣಿಸಿಕೊಂಡ ತಾಂತ್ರಿಕದೋಷದಿಂದಾಗಿ ಕರೆಂಟ್ ಉತ್ಪಾದನೆ ನಿಲ್ಲಿಸಿದ್ದು, ಉಳಿದಂತೆ 2ನೇ ಘಟಕದಿಂದ 160 ಮೆಗಾ ವ್ಯಾಟ್, 3ನೇ ಘಟಕದಿಂದ 180, 4 ರಿಂದ 151, 5ರಿಂದ 153, 6 ರಿಂದ 154 ಮತ್ತು 250 ಮೆಗಾ ವ್ಯಾಟ್ ಸಾಮರ್ಥ್ಯದ 8ನೇ ಘಟಕದಿಂದ 133 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ. ಒಟ್ಟಾರೆ 1720 ಮೆಗಾ ವ್ಯಾಟ್ ಸಾಮರ್ಥ್ಯದ ಆರ್‌ಟಿಪಿಎಸ್ ಸ್ಥಾವರದಿಂದ ಬರೀ 920 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸುತ್ತಿದ್ದು,ಇದರ ಜೊತೆಗೆ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್)ದ ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯದ ಎರಡೂ ಘಟಕಗಳಿಂದ ಕ್ರಮವಾಗಿ 404 ಮತ್ತು 370 ಸೇರಿ ಒಟ್ಟು 774 ಮೆಗಾ ವ್ಯಾಟ್ ಕರೆಂಟ್ ಉತ್ಪಾದನೆಯಲ್ಲಿ ತೊಡಗಿವೆ. ಇನ್ನು ಪಕ್ಕದ ಬಳ್ಳಾರಿ ಬಿಟಿಪಿಎಸ್‌ನ ಮೂರು ಘಟಕಗಳಿಂದ 1057 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ. ಹೀಗೆ ಈ ಭಾಗಕ್ಕೆ ಸೇರಿರುವ ಮೂರು ಶಾಖೊತ್ಪನ್ನ ವಿದ್ಯುತ್ ಸ್ಥಾವರಗಳಿಂದ ಸುಮಾರು 2,751 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ.
ಮಳೆಯ ತೀವ್ರ ಅಭಾವ, ಬರದ ಜೊತೆಗೆ ಬೇಸಿಗೆಯಲ್ಲಿ ರಾಜ್ಯಕ್ಕೆ ಬೇಡಿಕೆಗೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿದ್ದ ಶಾಖೋತ್ಪನ್ನ ಸ್ಥಾವರಗಳಿಂದ ಪ್ರಸ್ತುತ ಅಗತ್ಯಕ್ಕನುಸಾರವಾಗಿ ಕರೆಂಟ್ ಉತ್ಪಾದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಶಾಖೋತ್ಪನ್ನಕ್ಕೆ ಬೇಡಿಕೆ ಕುಸಿಯುವ ವಾತಾವರಣವು ನಿರ್ಮಾಣಗೊಂಡಿದೆ.