ಸಾರಾಂಶ
ನರಗುಂದ: ಶಿಕ್ಷಕರಿಂದ ಮಾತ್ರ ದೇಶದ ಉಜ್ವಲ್ ಭವಿಷ್ಯ ನಿರ್ಮಾಣ ಸಾಧ್ಯ. ಆದರಿಂದ ಶಿಕ್ಷಕರು ವ್ಯಕ್ತಿ ಗೌರವದ ಜತೆಗೆ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.
ಅವರು ಗುರುವಾರ ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ವೃತ್ತಿ ಇರಲಿ, ಅದಕ್ಕೆ ಗೌರವ ತರುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಶಿಕ್ಷಕ ಹುದ್ದೆ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ಹುದ್ದೆಯಾಗಿದೆ. ಜ್ಞಾನವಿಲ್ಲದೇ ಯಾವುದನ್ನು ಪಡೆಯಲು ಸಾಧ್ಯವಿಲ್ಲ. ಅದನ್ನು ನೀಡುವ ಏಕೈಕ ವ್ಯಕ್ತಿ ಶಿಕ್ಷಕನಾಗಿದ್ದಾನೆ. ಜ್ಞಾನಿಗಳಿಂದ ಈ ದೇಶ ಉನ್ನತ ಮಟ್ಟಕ್ಕೆ ತಲುಪಿದೆ ಎಂದರು.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ದೇಶಾದ್ಯಂತ ಆಚರಿಸುತ್ತಿರುವುದು ಅವರ ಆವರ ಆದರ್ಶ ತತ್ವಗಳಿಗೆ ಮಾದರಿಯಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ. ಬದುಕಿಗೆ ಹೊಸ ಮಾರ್ಗ ಕಂಡುಕೊಂಡು ವಿದ್ಯಾರ್ಥಿಗಳ ಏಳ್ಗೆಗೆ ನಿರಂತರವಾಗಿ ಶ್ರಮಿಸಬೇಕು ಎಂದರು. ನಿವೃತ್ತ ಪ್ರಾಚಾರ್ಯ ಹಾಗೂ ನಿರ್ದೇಶಕ ಸಿ.ಎಸ್. ಸಾಲೂಟಗಿಮಠ ಮಾತನಾಡಿ, ಜೀವನದಲ್ಲಿ ಎಲ್ಲ ಕಷ್ಟಗಳನ್ನು ದಾಟಿ ಮುಂದೆ ಬಂದವರು ಸರ್ವಪಲ್ಲಿ ರಾಧಾಕೃಷ್ಣನ್ರವರು. ಅವರಂತೆ ಎಲ್ಲ ಶಿಕ್ಷಕರು ಆದರ್ಶ ಶಿಕ್ಷಕರಾಗಬೇಕು. ಉತ್ತಮ ಮೌಲ್ಯ ಹೆಚ್ಚಿಸಿಕೊಂಡು ಶಿಕ್ಷಕ ವೃತ್ತಿಯ ಮಹತ್ವ ಸಾರಬೇಕು ಎಂದರು.
ವಿದ್ಯಾರ್ಥಿಗಳಾದ ಅಸ್ಜಾದ, ಸೃಷ್ಟಿ ತೀರ್ಥಗೌಡರ, ಶ್ರದ್ಧಾ ಸಿ.ಟಿ. ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ನಿರ್ದೇಶಕ ಜಿ.ಬಿ.ಕುಲಕರ್ಣಿ, ರಾಘವೇಂದ್ರ ಆನೇಗುಂದಿ, ಮುಖ್ಯೋಪಾಧ್ಯಾಯ ಡಾ. ವೈ.ಪಿ. ಕಲ್ಲನಗೌಡರ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿ ಇದ್ದರು.
ಗುರುದೇವ ಇಂಗಳಳ್ಳಿ ಸ್ವಾಗತಿಸಿದರು, ಸಂಜನಾ ಬೆಲ್ಲದ ನಿರೂಪಿಸಿದರು. ಶ್ರದ್ಧಾ ಪಟ್ಟಣಶೆಟ್ಟಿ ವಂದಿಸಿದರು.