ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಹೆಚ್ಚಾಗಲಿ

| Published : Apr 04 2024, 01:08 AM IST

ಸಾರಾಂಶ

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ಬಾಲ ನ್ಯಾಯ ಕಾಯಿದೆ ಸೇರಿದಂತೆ ಜನರಿಗಾಗಿ ರೂಪಿಸಲಾದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಇಲಾಖೆಗಳು ಹೆಚ್ಚು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷೆ ರಾಜೇಶ್ವರಿ ಎನ್. ಹೆಗಡೆ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ಬಾಲ ನ್ಯಾಯ ಕಾಯಿದೆ ಸೇರಿದಂತೆ ಜನರಿಗಾಗಿ ರೂಪಿಸಲಾದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಇಲಾಖೆಗಳು ಹೆಚ್ಚು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷೆ ರಾಜೇಶ್ವರಿ ಎನ್. ಹೆಗಡೆ ಸೂಚಿಸಿದರು.

ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಯುಟಿಆರ್‌ಸಿ, ಬಾಲನ್ಯಾಯ ಕಾಯಿದೆ, ಮಾನವ ಕಳ್ಳಸಾಗಣೆ ತಡೆ, ಪೋಕ್ಸೋ ಕಾಯಿದೆ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯವಿವಾಹ:

ಬಾಲ್ಯವಿವಾಹ ತಡೆಗಟ್ಟಲು ಇರುವ ಕಾನೂನು ಮತ್ತು ಇದರಿಂದ ಮಕ್ಕಳ ಮೇಲಾಗುವ ದೈಹಿಕ, ಸಾಮಾಜಿಕ, ಶೈಕ್ಷಣಿಕವಾಗಿ ಆಗುವ ತೊಂದರೆಗಳ ಬಗ್ಗೆ ತಿಳಿಸಬೇಕು. ಅಪ್ರಾಪ್ತ ವಯಸಿನಲ್ಲಿ ವಿವಾಹವಾದರೆ ಮುಂದಾಗುವ ತೊಂದರೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.

ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, 2024ರ ಜನವರಿಯಿಂದ ಇಲ್ಲಿಯವರೆಗೆ ಬಾಲ್ಯವಿವಾಹ ತಡೆ ಬಗ್ಗೆ 25 ದೂರುಗಳು ಸ್ವೀಕೃತವಾಗಿವೆ. 22 ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಗಟ್ಟಲಾಗಿದೆ. ಉಳಿದ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆಗ ತಡೆಯಲಾದ ಪ್ರಕರಣಗಳಲ್ಲಿ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಪುನರ್ವಸತಿ ಕಲ್ಪಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಪೌಷ್ಟಿಕ ಆಹಾರ ನೀಡಲು ಕ್ರಮ ವಹಿಸಬೇಕು ಎಂದು ಸಲಹೆ ನೀಡಲಾಯಿತು.

ಪೋಕ್ಸೋ ಕಾಯಿದೆ:

ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತರಾಗುವವರಿಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಪುನರ್ವಸತಿ ಕಲ್ಪಿಸುವ ಕೆಲಸ ಮಾಡಬೇಕು. ಕಾಯಿದೆಯಡಿ ಪ್ರಕರಣ ದಾಖಲಿಸುವಾಗ ಸಂತ್ರಸ್ತರು ಇದ್ದ ಕಡೆಯೇ ಹೋಗಿ ಮಾಹಿತಿ, ಹೇಳಿಕೆ ಪಡೆದುಕೊಂಡು ಬರಬೇಕು. ಆದರೆ, ಅವರನ್ನು ನೀವಿರುವಲ್ಲಿಗೆ ಕರೆದುಕೊಂಡು ಬರಬಾರದು. ಆದರೆ, ಅವರನ್ನು ಬಾಲಮಂದಿರದಲ್ಲಿ ಇಟ್ಟುಕೊಳ್ಳಬಾರದು ಎಂದರು.

ತಂಬಾಕುಮುಕ್ತ ವಲಯ ಫಲಕ:

ಶಾಲಾ, ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಯಂತ್ರಣ ಕುರಿತಂತೆ ಹೆಚ್ಚಿನದಾಗಿ ಜಾಗೃತಿ ಮೂಡಿಸಬೇಕು. ಹಾಗೂ ಎಲ್ಲ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ತಂಬಾಕು ಮುಕ್ತ ವಲಯ ನಾಮಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

ಬಾಲ ಮಂದಿರಕ್ಕೆ ದಾಖಲಿಸಿ:

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಖಾಸಗಿ ಅನುದಾನಿತ ಕುಟೀರಕ್ಕೆ ಸೇರಿಸುವ ಬದಲಾಗಿ, ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ದಾಖಲು ಮಾಡುವ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಹಾಗೂ ಅವರು ಶೈಕ್ಷಣಿಕವಾಗಿ ಮುಂದುವರೆಯಲು ಶಾಲೆಗೆ ಪ್ರವೇಶ ಕಲ್ಪಿಸಬೇಕು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಊಟದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲು ಸಮಾಜ ಕಲ್ಯಾಣಾಧಿಕಾರಿಗೆ ತಿಳಿಸಿದರು.

ವೇಶ್ಯಾವಾಟಿಕೆಗೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಜನವರಿ-24 ರಿಂದ ಮಾರ್ಚ್‌ವರೆಗೆ 3 ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ತಿಳಿಸಿದರು.

ಹೆಗಡೆ ನಗರದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಟ್ಟಡವನ್ನು ನಿರ್ಮಿಸುವಂತೆ ತಿಳಿಸಿದಾಗ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಪ್ರತಿಕ್ರಿಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣನವರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮರಣ ಪ್ರಮಾಣ ಪತ್ರ ಇಲ್ಲವೆಂಬ ಕಾರಣಕ್ಕಾಗಿ ಪೌತಿ ಖಾತೆ ಬದಲಾವಣೆ ಮಾಡುತ್ತಿಲ್ಲ. ಅದನ್ನು ಪರಿಶೀಲಿಸಿ ಮಾಹಿತಿ ನೀಡಲು ತಿಳಿಸಿ, ಎಲ್ಲ ಇಲಾಖೆಗಳು ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಬೇಕು. ಈ ಮಾಹಿತಿ ಸಂಗ್ರಹಿಸಿ ಕಿರುಹೊತ್ತಿಗೆ ತರುವ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್, ಡಿಎಚ್‌ಒ ಡಾ.ಷಣ್ಮುಖಪ್ಪ, ಆರ್‌ಸಿಎಚ್ ಅಧಿಕಾರಿ ರೇಣುಕಾರಾಧ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಇತರರು ಇದ್ದರು.

- - - -3ಕೆಡಿವಿಜಿ38ಃ:

ದಾವಣಗೆರೆಯಲ್ಲಿ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅಧ್ಯಕ್ಷತೆಯಲ್ಲಿ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.