ಸಾರಾಂಶ
ದೇಶದಲ್ಲಿ ಹಿಂದುಳಿದ ಎಲ್ಲರಿಗೂ ಸೌಲಭ್ಯಗಳು ಸಿಗಬೇಕು. ಅದಕ್ಕಾಗಿ ಶೇ. 50ರಷ್ಟು ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು - ಖರ್ಗೆ
ಹುಬ್ಬಳ್ಳಿ: ದೇಶದಲ್ಲಿ ಹಿಂದುಳಿದ ಎಲ್ಲರಿಗೂ ಸೌಲಭ್ಯಗಳು ಸಿಗಬೇಕು. ಅದಕ್ಕಾಗಿ ಶೇ. 50ರಷ್ಟು ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಇದೇ ವೇಳೆ ಜಾತಿ ಗಣತಿಯನ್ನು 3 ತಿಂಗಳಲ್ಲೇ ಮಾಡಬೇಕು ಎಂದು ಒತ್ತಾಯಿಸಿದರು.
ನಗರದ ಗಿರಣಿಚಾಳ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ನ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜಾತಿ ಗಣತಿ ಮಾಡಬೇಕು ಎಂದು 2023ರಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ರಾಹುಲ್ ಗಾಂಧಿ ಮತ್ತು ನಾನು ಆಗ್ರಹಿಸಿದ್ದೇವು. ಆದರೆ, ಆಗ ನಮ್ಮನ್ನು ಟೀಕಿಸಿದ್ದರು. ರಾಹುಲ್ ಗಾಂಧಿ ನಿಲುವು ಸರಿಯಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಜಾತಿ ಗಣತಿ ಮಾಡಿದರೆ ಜಾತಿ ಜಾತಿಗೆ ಜಗಳ ಹಚ್ಚಿದಂತಾಗುತ್ತದೆ, ದೇಶ ತುಂಡಾಗುತ್ತದೆ ಅಂತೆಲ್ಲ ಹೇಳಿದ್ದರು. ಆದರೆ, ಅವರದೇ ಸರ್ಕಾರ ಜಾತಿ ಜನಗಣತಿ ಮಾಡುವುದಾಗಿ ಹೇಳಿದೆ. ಈಗ ಜನರ ಒತ್ತಡಕ್ಕೆ ಮಣಿದಿದೆ. ಟೀಕೆ ಮಾಡಿದರೆ ನೀವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ಮಾಡಬೇಕು. 3 ತಿಂಗಳಲ್ಲಿ ಕೇಂದ್ರ ಸರ್ಕಾರ ಜಾತಿ, ಜನಗಣತಿ ಮಾಡಲೇಬೇಕು. ಇಲ್ಲದಿದ್ದಲ್ಲಿ ನಿಮಗೆ ನಿರಾಸಕ್ತಿ ಎಂದರ್ಥವಾಗುತ್ತದೆ ಎಂದ ಅವರು, ಶೇ. 50ರಷ್ಟಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನಮ್ಮ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಇದಕ್ಕೆ ತಯಾರಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಜಾತಿ ಗಣತಿ ಮಾಡುವಂತೆ ಆಗ್ರಹಿಸಿದ್ದೆವು. ಆಗ ಕೇಂದ್ರ ಸಚಿವರೊಬ್ಬರು ಟೀಕಿಸಿದ್ದರು. ಅವರ ಹೆಸರು ಹೇಳುವುದಿಲ್ಲ ಎಂದ ಖರ್ಗೆ ಅವರು, ಅವರ ಹೆಸರು ಹೇಳುವುದಿಲ್ಲ ಎಂದಿದ್ದಕ್ಕೆ ಅವರಿಗೆ ಹೆದರಿಕೊಂಡಿದ್ದೇನೆ ಎಂದು ಭಾವಿಸಬೇಡಿ. ನಾನು ಮೋದಿ, ಶಾ ಅವರಿಗೇ ಹೆದರುವುದಿಲ್ಲ. ಇನ್ನು ಇವರಿಗೆ ಹೆದರುತ್ತೇನೆಯೇ? ನಾನು ಯಾರಿಗೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಆ ಸಚಿವರ ಹೆಸರು ಹೇಳಲಿಲ್ಲ.
ಸಂವಿಧಾನ ರಕ್ಷಣೆ: ಈ ರ್‍ಯಾಲಿ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಬಿಜೆಪಿಗೆ ಎಚ್ಚರಿಕೆ ಕೊಡುವ ಕೆಲಸ ಇಲ್ಲಿಂದ ಶುರುವಾಗಿದೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಸ್ವತಂತ್ರವಾಗಿ ಮಾತನಾಡುವ ಶಕ್ತಿ ಇದೆ. ಆದರೆ, ಬಿಜೆಪಿ ಅದರ ವಿರುದ್ಧ ಮಾತನಾಡುವವರನ್ನು, ಕಾಂಗ್ರೆಸ್‌ನ್ನು ಬೆಂಬಲಿಸುವವರ ವಿರುದ್ಧ ಇಡಿ, ಸಿಬಿಐ ತೋರಿಸಿ ಧಮ್ಕಿ ಹಾಕುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಈ ಮೂಲಕ ಸಂವಿಧಾನದ ಆಶಯಗಳನ್ನು ಬಲಪಡಿಸುವ ಕೆಲಸ ಮಾಡಬೇಕಿದೆ. ಆದರೆ, ಬಿಜೆಪಿಗರು ಎಲ್ಲದ್ದಕ್ಕೂ ಟೀಕಿಸುತ್ತಾರೆ. ದೇಶಕ್ಕಾಗಿ ಎಲ್ಲರೂ ಒಂದಾಗಿ ಹೋರಾಟ ನಡೆಸೋಣ. ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಆದರೆ, ಅವುಗಳನ್ನು ಬದಿಗಿಟ್ಟು ದೇಶಕ್ಕಾಗಿ, ಪಕ್ಷಕ್ಕಾಗಿ ಶ್ರಮಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಶೇ. 10ರಷ್ಟು ಜನರ ಬಳಿ ಶೇ. 72ರಷ್ಟು ಆಸ್ತಿ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಾಗಿ ಬೆಲೆ ಏರಿಕೆಯಾಗುತ್ತಿದೆ. ಬಿಜೆಪಿಗರ ಜನಾಕ್ರೋಶ ಕೇಂದ್ರ ಸರ್ಕಾರದ ವಿರುದ್ಧ ಆಗಬೇಕು ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಜಿಲ್ಲಾ ಉಸ್ತುವಾರಿ ಮಯೂರ್ ಜಯಕುಮಾರ, ಸಚಿವರಾದ ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ, ಶಾಸಕರಾದ ಬಸವರಾಜ ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಪ್ರಸಾದ್ ಅಬ್ಬಯ್ಯ, ಬಸವರಾಜ ಶಿವಣ್ಣವರ, ಮಾಜಿ ಸಚಿವ ವಿನಯಕುಮಾರ ಸೊರಕೆ, ಸೋಮಣ್ಣ ಬೇವಿನಮರದ, ಅನಿಲ್ ಕುಮಾರ್ ಪಾಟೀಲ, ಅಲ್ತಾಫ್ ಹಳ್ಳೂರ, ಪ್ರಕಾಶಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.