ಮಲೆನಾಡಿನ ಬೈನೇ ಸೇಂದಿಗೆ ಹೆಚ್ಚಿದ ಬೇಡಿಕೆ..!

| Published : Jan 08 2024, 01:45 AM IST / Updated: Jan 08 2024, 01:07 PM IST

ಸಾರಾಂಶ

ಸರ್ಕಾರ ಬೈನೆ ಸೇಂದಿ ನಿಷೇಧಿಸಿದ್ದರೂ ತಾಲೂಕಿನ ಅಲ್ಲಲ್ಲಿ ಸಾಕಷ್ಟು ಬೈನೆ ಸೇಂದಿ ಕೊಯ್ಲು ನಡೆಸಲಾಗುತ್ತಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಸೇಂದಿಗಾಗಿ ಹಲವು ದಿನಗಳ ಮುನ್ನ ಕಾಯ್ದಿರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪ್ರವಾಸಿಗರಿಂದ ಬೈನೆ ಸೇಂದಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ದೂರದಿಂದ ಸೇಂದಿ ಅರಸಿ ಬರುವವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಹೌದು! ಸರ್ಕಾರ ಬೈನೆ ಸೇಂದಿ ನಿಷೇಧಿಸಿದ್ದರೂ ತಾಲೂಕಿನ ಅಲ್ಲಲ್ಲಿ ಸಾಕಷ್ಟು ಬೈನೆ ಸೇಂದಿ ಕೊಯ್ಲು ನಡೆಸಲಾಗುತ್ತಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಕಾರಣ ಸೇಂದಿಗಾಗಿ ಹಲವು ದಿನಗಳ ಮುನ್ನ ಕಾಯ್ದಿರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಮುಂಜಾನೆ ಹಾಗೂ ಸಂಜೆ ಕೂಯ್ಲು ನಡೆಸುವ ತಾಜಾ ಸೇಂದಿಗಾಗಿ ಮರದ ತಳದಲ್ಲಿಯೇ ಗಂಟೆಗಳ ಕಾಲ ಕಾಯುವ ಜನರ ಸರತಿ ಗಮನಿಸಿದರೆ ಬೇಡಿಕೆ ಎಷ್ಟಿದೆ ಎಂಬುದು ಅರಿವಾಗಲಿದೆ.

ಅದ್ಬುತ ರುಚಿ:

ಮುಂಜಾನೆ ಸೂರ್ಯ ಹುಟ್ಟುವ ಮುನ್ನ ಸೇವಿಸುವ ಸೇಂದಿ ಅತ್ಯಂತ ರುಚಿಕರ. ಅದರಲ್ಲೂ ತೊಳೆದ ಮಡಿಕೆಯ ಸೇಂದಿ ಇನ್ನೂ ಅತ್ಯುತ್ತಮ. ಆದರೆ, ತೊಳೆದ ಮಡಿಕೆ ಸೇಂದಿಗೆ ಅತಿಹೆಚ್ಚಿನ ಬೇಡಿಕೆ ಇದೆಯಾದರೂ ಸೇಂದಿ ಇಳಿಸುವವರ ಮನಸ್ಥಿತಿಯನ್ನು ಇದು ಆಧರಿಸಿರುತ್ತದೆ ಎಂಬುದು ಸೇಂದಿ ಪ್ರಿಯರ ಅಂಬೋಣ. ಅಲ್ಲದೆ ಮರದಿಂದ ಇಳಿಸಿದ ಎರಡು ಗಂಟೆಯೊಳಗೆ ಸೇವಿಸಿದ ಸೇಂದಿ ಉತ್ತಮವಾಗಿರಲಿದೆ ಎಂಬುದು ಸೇಂದಿ ಕೊಯ್ಲು ನಡೆಸುವ ವ್ಯಕ್ತಿಗಳ ಹೇಳಿಕೆ.

 ಸೂರ್ಯ ಮೂಡಿದ ನಂತರದ ಸೇಂದಿಯಲ್ಲಿ ಆಲ್ಕೋಹಾಲ್ ಅಂಶ ಸೇರ್ಪಡೆಯಾಗುವುದರಿಂದ ಹುಳಿಯಾಗಲಿದೆ. ನಂತರ ಸೇವಿಸುವುದು ಉತ್ತಮವಲ್ಲ ಎಂಬ ವಿವರಣೆ ಸಹ ದೊರೆಯುತ್ತಿದೆ.

ಆರೋಗ್ಯಕ್ಕೆ ಅತಿ ಉತ್ತಮ: ಮುಂಜಾನೆಯ ಸೇಂದಿಯನ್ನು ನಿರಂತರವಾಗಿ ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚಲಿದೆ. ಹುಳಿಸೇಂದಿ ಸೇವಿಸುವುದರಿಂದ ಹೊಟ್ಟೆಶುದ್ದಿಯಾಗಲಿದೆ ಎಂಬ ನಂಬಿಕೆ ಸ್ಥಳೀಯರದ್ದು.

ಬೇಡಿಕೆ ಹೆಚ್ಚು ಪೊರೈಕೆ ಕಡಿಮೆ: ಎರಡು ದಶಕದ ಹಿಂದೆ ಪ್ರತಿಯೊಂದು ಕಾಫಿ ತೋಟಗಳ ಬೈನೆಮರಗಳಲ್ಲಿ ಸೇಂದಿ ಮಡಿಕೆ ನೇತಾಡುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದವು. ಆದರೆ, ಸರ್ಕಾರ ಸೇಂದಿ ಇಳಿಸುವಿಕೆಗೆ ತಡೆಒಡ್ಡಿದ ನಂತರ ಅಬಕಾರಿ ಇಲಾಖೆ ಕಠಿಣ ಕಾರ್ಯಾಚರಣೆ ನಡೆಸುವ ಮೂಲಕ ಸಾಕಷ್ಟು ಬೈನೆಮರಗಳ ಕೈ(ಸೇಂದಿಸೋರುವಜಾಗ) ಕಡಿದು ದ್ವಂಸ ಮಾಡಿದರೆ ಸೇಂದಿ ಇಳಿಸುವವರ ಮೇಲೆ ದೂರು ದಾಖಲಿಸಲಾರಂಭಿಸಿತ್ತು. 

ಇದರಿಂದ ಬೆದರಿದ ಸಾಕಷ್ಟು ಕಾಫಿ ಬೆಳೆಗಾರರು ಸೇಂದಿ ಕೂಯ್ಲಿಗೆ ಅವಕಾಶ ನೀಡಲು ಹಿಂಜರಿದರೆ, ಆಧುನಿಕ ಕೃಷಿ ಬೆನ್ನುಹತ್ತಿರುವ ಸಾಕಷ್ಟು ಕಾಫಿ ಬೆಳೆಗಾರರು ಅನಗತ್ಯ ಎಂಬ ಕಾರಣಕ್ಕೆ ಕಾಫಿತೋಟದಿಂದ ಬೈನೆಮರಗಳನ್ನು ನಾಶ ಮಾಡಿದ್ದಾರೆ. ಪರಿಣಾಮ ಸಾಕಷ್ಟು ತೋಟಗಳಲ್ಲಿ ಬೈನೆಮರಗಳು ಕಣ್ಮರೆಯಾಗಿವೆ. 

ಇದಲ್ಲದೆ ಸೇಂದಿ ಕೊಯ್ಲು ನಡೆಸುವುದು ಸಾಹಸದ ಕೆಲಸವಾಗಿರುವುದರಿಂದ ಯುವ ಜನಾಂಗ ಸೇಂದಿ ಇಳಿಸುವಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಪರಿಣಾಮ ಬೈನೆ ಮರಗಳಿದ್ದರೂ ಸೇಂದಿ ಇಳಿಸುವವರ ಸಂಖ್ಯೆ ಅತ್ಯಂತ ವಿರಳವಾಗಿರುವುದು ಸಹ ಸೇಂದಿ ಉತ್ಪಾದನೆ ಅತ್ಯಂತ ಕಡಿಮೆಯಾಗಲು ಕಾರಣವಾಗಿದೆ.

ಸ್ಥಳೀಯರಿಗಿಲ್ಲದ ಸೇಂದಿ: ತಾಲೂಕಿನಲ್ಲಿ ಸಾಕಷ್ಟು ಹೋಂಸ್ಟೆ ಹಾಗೂ ರೆಸಾರ್ಟ್‌ಗಳಿದ್ದು, ಇಲ್ಲಿಗೆ ಬರುವ ಸಾಕಷ್ಟು ಪ್ರವಾಸಿಗರು ಸೇಂದಿಗಾಗಿ ರೂಂ ಬುಕ್ ಮಾಡಿದ ದಿನಾಂಕದಂದೇ ಸೇಂದಿಗೂ ಬುಕ್ ಮಾಡುತ್ತಾರೆ. ಇವರಿಗೆ ಮುಂಜಾನೆಯೇ ತಾಜಾಸೇಂದಿ ಒದಗಿಸುವ ವ್ಯವಸ್ಥೆ ಕೆಲವು ರೆಸಾರ್ಟ್‌ ಹಾಗೂ ಹೋಂಸ್ಟೆಗಳ ಮಾಲೀಕರು ಮಾಡುತ್ತಾರೆ. ಇದರಿಂದಾಗಿ ಸ್ಥಳೀಯರಿಗೆ ದೊರಕದ ಸೇಂದಿ ಪ್ರವಾಸಿಗರಿಗೆ ಸುಲಭವಾಗಿ ದೊರೆಯುತ್ತಿದೆ.

ನಕಲಿ ಸೇಂದಿಯ ಮಾರಾಟ: ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಸೇಂದಿಯನ್ನು ನಕಲಿ ಮಾಡಲು ಆರಂಭಿಸಿದ್ದು, ಸೇಕ್ರೆನ್ ಪುಡಿಯನ್ನು ನೀರಿನಲ್ಲಿ ಬೇರಸಿ ನಿಜ ಸೇಂದಿ ಎಂದು ನಂಬಿಸಿ ಮಾರಾಟ ಮಾಡುವ ದಂದೆ ತಾಲೂಕಿನ ಹಲವೆಡೆ ಆರಂಭವಾಗಿದೆ. ಈ ಸೇಂದಿಯನ್ನು ಹಲವು ದಿನಗಳ ಕಾಲ ಶೇಖರಿಸಿಟ್ಟರೂ ಹಾಳಾಗದು. ಆದರೆ, ನೈಜ ಸೇಂದಿ ಇಳಿಸಿದ ಎರಡು ಗಂಟೆಯಲ್ಲಿ ಸೇವಿಸದಿದ್ದರೆ ಹುಳಿಯಾಗಲಿದೆ ಎಂಬುದು ವಿಚಾರವಂತರ ಮಂಥನ.

ನಾಲ್ಕುಪಟ್ಟು ದರ:ಕಳೆದೊಂದು ದಶಕದ ಹಿಂದೆ ೭೫೦ ಎಂ.ಎಲ್ ಒಂದು ಬಾಟಲ್ ಸೇಂದಿಗೆ ೧೦ ರಿಂದ ೧೫ ರೂಗಳಿದ್ದರೆ ಸದ್ಯ ೫೦ ರಿಂದ ೧೦೦ ರು.ಗಳವರಗೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ರಜೆ ದಿನಗಳಲ್ಲಿ ಈ ದರ ಮತ್ತಷ್ಟು ಏರಿಕೆಯಾಗಲಿದೆ. ಅಪಾಯಕಾರಿ ಕೆಲಸ: ಸೇಂದಿ ಕೂಯ್ಲು ಶ್ರಮದಾಯಕ ಹಾಗೂ ಅಪಾಯಕಾರಿ ಕೆಲಸವಾಗಿದ್ದು, ಹಲವು ವರ್ಷಗಳಿಂದ ಸೇಂದಿ ಕೂಯ್ಲು ನಡೆಸುವ ವ್ಯಕ್ತಿಗಳು ಯಾವುದೆ ಸುರಕ್ಷತೆ ಪರಿಕರಗಳನ್ನು ಆಳವಡಿಸಿಕೊಳ್ಳದೆ ೫೦ ರಿಂದ ೬೦ ಅಡಿ ಎತ್ತರದ ಮರಗಳನ್ನು ಕೇವಲ ಕಾಲುಗಳ ಸಹಾಯದಿಂದ ಮೇಲೆರುತ್ತಿದ್ದು ಮರ ಏರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟವರ ಸಂಖ್ಯೆಯು ಸಾಕಷ್ಟಿದೆ.

ನಿಷೇಧ ತೆರವುಗೊಳಿಸಿ: ಬೈನೆ ಸೇಂದಿ ವರ್ಷದ ಅಲ್ಪಕಾಲದಲ್ಲಿ ದೊರಕುವುದಲ್ಲದೆ ಆರೋಗ್ಯಕ್ಕೂ ಅತ್ಯುತ್ತಮ ಎಂಬುದು ಸಾಭೀತಾಗಿದೆ. ಆದ್ದರಿಂದ, ಸೇಂದಿ ಇಳಿಸುವಿಕೆಗೆ ಇರುವ ನಿಷೇದವನ್ನು ತೆರವುಗೊಳಿಸ ಬೇಕು ಎಂಬ ಆಗ್ರಹ ಸಹ ಕೇಳಿಬರುತ್ತಿದೆ.

 

-ರಾಜೇಶ್. ಕೋಣನಕುಂಟೆ, ಬೆಂಗಳೂರು.