ಸಾರಾಂಶ
ಗಣೇಶ್ ತಮ್ಮಡಿಹಳ್ಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಮಳೆ ಮತ್ತು ಚಳಿಗಾಲದಲ್ಲಿ ಸದಾ ತಂಪಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಬಿಸಿಲಿನ ಆರ್ಭಟ. ಬಯಲು ಸೀಮೆ ಬಿಸಿಲನ್ನೂ ನಾಚಿಸುವಂತೆ ಮಲೆನಾಡಿನಲ್ಲಿ ಬಿಸಿಲಿನ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ಕಳೆದ ಒಂದು ತಿಂಗಳಿಂದ ಬಿಸಿಲಿನ ಝಳಕ್ಕೆ ಜನ ನಲುಗಿ ಹೋಗಿದ್ದಾರೆ.
ಹಸಿರ ಸೊಬಗಿನ ಮಲೆನಾಡಿನಲ್ಲಿ ಬೆಳಗ್ಗೆ 9 ಗಂಟೆ ಹೊತ್ತಿಗೆ ಆರಂಭವಾಗುವ ಬಿಸಿಲ ಝಳ ಸಂಜೆ 5 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ರಾತ್ರಿ ಕೂಡ ಬಿಸಿ ಗಾಳಿಗೆ ಜನ ಹೈರಾಣಿಗಿದ್ದಾರೆ. ಮಾರ್ಚ್ ತಿಂಗಳಿನಲ್ಲೇ ಜಿಲ್ಲೆಯ ಸರಾಸರಿ ಉಷ್ಣಾಂಶ 36 ಡಿಗ್ರಿಯಿಂದ 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇನ್ನೂ ಏಪ್ರಿಲ್, ಮೇನಲ್ಲಿ ಇನ್ಯಾವ ಪಾಟಿ ಬಿಸಿಲ ಧಗೆ ಹೆಚ್ಚಬಹುದು ಎಂದು ಜನ ಈಗಲೇ ಎದುಸಿರು ಬಿಡುತ್ತಿದ್ದಾರೆ.ಒಂದು ಕಾಲದಲ್ಲಿ ಮಲೆನಾಡು ಸದಾ ತಂಪಾಗಿರುತ್ತಿತ್ತು. ವರ್ಷದಲ್ಲಿ 7 ತಿಂಗಳ ಕಾಲ ಮಳೆ ಸುರಿಯುತ್ತಿತ್ತು, ಸಮೃದ್ಧ ಹಸಿರು ಹೊದ್ದು ಮಲಗಿರುತ್ತಿದ್ದ ದಟ್ಟ ಅರಣ್ಯದಿಂದ ಎಂತಹ ಬೇಸಿಗೆಯಾದರೂ ವಾತಾವರಣ ತಂಪು-ತಂಪಾಗಿರುತ್ತಿದ್ದು, ಈಗ ಪರಿಸ್ಥಿತಿ ತಿರುವು ಮರುವಾಗಿದೆ. ಮಲೆನಾಡು ಬಿಸಿಲ ನಾಡಾಗಿದೆ. ಬೀಸುವ ಗಾಳಿ ಕೂಡ ಬೆಚ್ಚಗಿದ್ದು, ಮಧ್ಯಾಹ್ನದ ವೇಳೆಗೆ ಜನರು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗತೊಡಗಿದೆ. ಕಳೆದ 15 ದಿನಗಳಿಂದಲೂ 36, 37 ಡಿಗ್ರಿ ಸೆಲ್ಸಿಯಸ್‌ಗ ತಾಪಮಾನವಿದೆ. ಬೆಳಗ್ಗೆ ಕೂಡ 23ರಿಂದ 24 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ತಂಪುಪಾನೀಯಗಳ ಮೊರೆ ಹೋದ ಜನತೆ:
ಬಿರು ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಜನ ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. ರಾತ್ರಿಯಂತೂ ಸೆಕೆಗೆ ಮತ್ತು ಸೊಳ್ಳೆಗಳ ಕಾಟಕ್ಕೆ ಜನರು ನಿದ್ರೆ ಮಾಡುವುದೇ ಕಷ್ಟವಾಗಿದೆ. ಒಂದು ವೇಳೆ ವಿದ್ಯುತ್ ಕಡಿತವಾದರೆ ದೇವರೇ ಗತಿ. ಜಾಗರಣೆ ಕಟ್ಟಿಟ್ಟ ಬುತ್ತಿ. ಹೊರಗೂ ಬರಲಾಗದೆ ಒಳಗೂ ಇರಲಾರದೆ ಸಂಕಟ ಅನುಭವಿಸುವಂತಾಗುತ್ತಿದೆ.ನಡು ಮಧ್ಯಾಹ್ನದ ಹೊತ್ತಿಗೆ ಬಿಸಿಲ ಧಗೆ ನೆತ್ತಿ ಮೇಲೆ ಕಾದ ಕಬ್ಬಿಣದಂತೆ ಬರೆ ಹಾಕುತ್ತಿದೆ. ಬಿಸಿಲ ಧಗೆಗೆ ಹೆದರಿ ಜನ ಮಧ್ಯಾಹ್ನ ವೇಳೆಯಲ್ಲಿ ಹೊರಗೆ ಬರುತ್ತಿಲ್ಲ. ಉಷ್ಣಾಂಶ ಮತ್ತು ಧಗೆ ಹೆಚ್ಚಳದಿಂದ ದೇಹಕ್ಕೆ ಬೆಂಕಿ ಬಿದ್ದಂತಾಗಿದೆ. ಧಗೆ ಕಡಿಮೆ ಮಾಡಿಕೊಳ್ಳಲು ಫ್ಯಾನ್ ಗಾಳಿಗೆ ಮೈಯೊಡ್ಡಿದರೆ ಬಿಸಿ ಗಾಳಿಯೇ ಬರುತ್ತಿದೆ. ಬಿಸಿಲ ಶಾಖಕ್ಕೆ ಜನ ಅನಾರೋಗ್ಯಕ್ಕೆ ಒಳಾಗಾಗುವುದು ಹೆಚ್ಚಾಗುತ್ತಿದೆ.
ಜಿಲ್ಲೆಯ ವಾತಾವರಣದಲ್ಲಿ ತೇವಾಂಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರು ಕಾರಣ ಬಿಸಿ ಧಗೆ ಹೆಚ್ಚಾಗುತ್ತಿದೆ. ವಾತಾವರಣದಲ್ಲಿನ ತೇವಾಂಶ ಮತ್ತು ಉಷ್ಣಾಂಶ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ತೇವಾಂಶ ಕಡಿಮೆಯಾದಲ್ಲಿ ಸಹಜವಾಗಿ ಬಿಸಿಲ ಧಗೆ ಹೆಚ್ಚಾಗಿ ಜನರನ್ನು ಸುಸ್ತಾಗಿಸುತ್ತದೆ. ಇತ್ತೀಚಿನ ವರ್ಷದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಬದಿ ಇದ್ದ ಲಕ್ಷಾಂತರ ಮರುಗಳು ಧರೆಗುರುಳಿವೆ. ಮರಗಿಡಗಳು, ಅರಣ್ಯದಂತಹ ಹಸಿರು ಹೊದಿಕೆ ವಾತಾವರಣದಲ್ಲಿನ ತೇವಾಂಶವನ್ನು ಹಿಡಿದಿಡುತ್ತದೆ. ಹಸಿರು ಹೊದಿಕೆಯೇ ಇಲ್ಲವೆಂದ ಮೇಲೆ ತೇವಾಂಶ ಎಲ್ಲಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ.ಕಳೆದ ಬಾರಿ ಜಿಲ್ಲೆಯಲ್ಲಿ ಉತ್ತಮ ರೀತಿ ಮಳೆಯಾಗಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿದ್ದವು. ಹೀಗಾಗಿ ಬೇಸಿಗೆಯಲ್ಲೂ ಕೆರೆ-ಕಟ್ಟೆಗಳಲ್ಲಿ ನೀರಿದೆ. ಇದರಿಂದಾಗಿ ಪ್ರಾಣಿ, ಪಕ್ಷಿಗಳಿಗೆ ಅಷ್ಟಾಗಿ ಕುಡಿಯುವ ನೀರಿನ ಸಮಸ್ಯೆ ಕಾಡಿಲ್ಲ. ಇನ್ನು ಈ ಭಯಂಕರ ಬಿಸಿಲಿಗೆ ಸಾಂಕ್ರಾಮಿಕ ರೋಗಗಳ ಭಯ ಜನರನ್ನು ಕಾಡುತ್ತಿದೆ.