ಕೆ.ಆರ್.ಪೇಟೆ ತಾಲೂಕಿನಲ್ಲಿ ಹೆಚ್ಚಿದ ಚಿರತೆ ಹಾವಳಿ; ಸಾಕು ನಾಯಿಗಳು, ಜಾನುವಾರುಗಳು ಬಲಿ

| Published : Dec 04 2024, 12:32 AM IST

ಕೆ.ಆರ್.ಪೇಟೆ ತಾಲೂಕಿನಲ್ಲಿ ಹೆಚ್ಚಿದ ಚಿರತೆ ಹಾವಳಿ; ಸಾಕು ನಾಯಿಗಳು, ಜಾನುವಾರುಗಳು ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಚಿರತೆ ಹಾವಳಿಯಿಂದ ನಿತ್ಯ ರೈತರ ಸಾಕು ನಾಯಿಗಳು ಮತ್ತು ಜಾನುವಾರು ಬಲಿಯಾಗುತ್ತಿವೆ. ಚಿರತೆ ಹಾವಳಿಯಿಂದ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಾದ್ಯಂತ ಹೆಚ್ಚುತ್ತಿರುವ ಚಿರತೆ ಹಾವಳಿಯಿಂದ ನಿತ್ಯ ರೈತರ ಸಾಕು ನಾಯಿಗಳು ಮತ್ತು ಜಾನುವಾರು ಬಲಿಯಾಗುತ್ತಿವೆ. ಚಿರತೆ ಹಾವಳಿಯಿಂದ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ.

ಡಿ.1ರಂದು ತಾಲೂಕಿನ ಬಿ.ಕೋಡಿಹಳ್ಳಿಯಲ್ಲಿ ರೈತ ಮಹಿಳೆ ಗೌರಮ್ಮರ ಸುಮಾರು 50 ಸಾವಿರ ರು. ಬೆಲೆ ಬಾಳುವ ಹಾಲುಕೊಡುವ ಎಮ್ಮೆ ಚಿರತೆಗೆ ಬಲಿಯಾಗಿದೆ. ಹಾಲುಕೊಡುವ ಎಮ್ಮೆಯನ್ನು ಕಳೆದುಕೊಂಡ ರೈತ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗ್ರಹಾರಚಾಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ನಾಲ್ಕುತಿಂಗಳ ಅವಧಿಯಲ್ಲಿ ಜಾನುವಾರುಗಳ ಮೇಲೆ ಚಿರತೆ 5ನೇ ಬಾರಿ ದಾಳಿ ಮಾಡಿದೆ. ಕಳೆದ ನವಂಬರ್ 18ರಂದು ತಾಲೂಕಿನ ಹುಬ್ಬನಹಳ್ಳಿ ರೈತ ಸ್ವಾಮಿ ಅವರಿಗೆ ಸೇರಿದ ಸುಮಾರು 40 ಸಾವಿರ ರು. ಬೆಲೆ ಬಾಳುವ ಹಳ್ಳೀಕಾರ್ ತಳಿ ಹಸುವಿನ ಮೇಲೆ ದಾಳಿ ನಡೆಸಿ ಚಿರತೆ ಬಲಿಪಡೆದಿದೆ. ನವೆಂಬರ್ ಆರಂಭದಲ್ಲಿ ತಾಲೂಕಿನ ಹರಿಹರಪುರ ಗ್ರಾಮದ ರಾಮಕೃಷ್ಣೇಗೌಡರ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಕಂಡು ಬಂದಿವೆ. ಇದರಲ್ಲಿ ಒಂದು ಮರಿಯನ್ನು ಹಿಡಿದು ರೈತರು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಈ ಭಾಗದಲ್ಲಿ ಮರಿಗಳೊಂದಿಗೆ ಜೋಡಿ ಚಿರತೆಗಳು ಸಂಚರಿಸುತ್ತಿದ್ದು ಜನ ಕಬ್ಬಿನ ಗದ್ದೆಗಳನ್ನು ಕಂಡರೆ ಸಾಕು ಭಯಪಡುತ್ತಿದ್ದಾರೆ.

ಕಳೆದ 6 ತಿಂಗಳ ಹಿಂದೆ ಕಬ್ಬಿನ ಗದ್ದೆ ಮಗ್ಗುಲಲ್ಲಿ ಮೇಯುತ್ತಿದ್ದ ಎಮ್ಮೆಯನ್ನು ಹಾಡುಹಗಲೇ ಜನರ ಕಣ್ಣೆದುರೇ ಚಿರತೆ ಬಲಿಪಡೆದಿತ್ತು.

ತಾಲೂಕಿನಲ್ಲಿ ತೋಟದ ಮನೆ ವಾಸಿಗಳು ಸಾಕುತ್ತಿರುವ ಬೆಲೆ ಬಾಳುವ ನಾಯಿಗಳು ಚಿರತೆ ದಾಳಿಗೆ ಬಲಿಯಾಗುತ್ತಿವೆ. ತಾಲೂಕಿನ ರೈತರು ಹೆಚ್ಚು ಕಬ್ಬು ಬೆಳೆಯುತ್ತಿದ್ದು, ಈ ಗದ್ದೆಗಳು ಚಿರತೆಗಳ ವಾಸ ಸ್ಥಾನವಾಗುತ್ತಿದೆ. ರಾತ್ರಿ ವೇಳೆ ರೈತರು ನೀರು ಹಾಯಿಸಲು ಜೀವ ಕೈಯಲ್ಲಿ ಹಿಡಿದು ಹೋಗುವಂತಾಗಿದೆ.

ಅಲ್ಲದೇ, ಕಾಪನಹಳ್ಳಿ ಗವಿಮಠ, ಗವಿರಂಗಪ್ಪನ ಬೆಟ್ಟ, ಹೇಮಗಿರಿಯ ಬೆಟ್ಟ, ಎಡಕಲ್ಲುಗುಡ್ಡ, ಬೆಳ್ಳಿ ಬೆಟ್ಟದ ಕಾವಲು ಅರಣ್ಯ ಪ್ರದೇಶದ ಜೊತೆಗೆ ತಾಲೂಕಿನ ಬಹುತೇಕ ಕಡೆ ಕಬ್ಬು ಬೆಳೆದಿರುವುದರಿಂದ ಚಿರತೆಗಳ ವಂಶಾಭಿವೃದ್ಧಿಗೆ ಸಹಕರಿಯಾಗಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಚಿರತೆ ಸಂಚರಿಸುತ್ತಿವೆ. ಒಂದೆರಡು ಕಡೆ ಕಬ್ಬು ಕಡಿಯುತ್ತಿದ್ದ ಕಾರ್ಮಿಕರ ಮೇಲೂ ಚಿರತೆ ದಾಳಿ ನಡೆಸಿದ ಪ್ರಕರಣಗಳಿವೆ. ಅರಣ್ಯ ಇಲಾಖೆ ಮಾತ್ರ ಚಿರತೆಗಳ ಸೆರೆಹಿಡಿಯುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಎಂಟು ಬೋನುಗಳಿವೆ. ಆದರೆ, ಚಿರತೆ ಸೆರೆಗೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

ಇಲಾಖೆಯಲ್ಲಿ ಎಂಟು ಬೋನುಗಳಿದ್ದರೂ ಚಿರತೆ ಸೆರೆಹಿಡಿಯಲು ಬೋನಿನ ಕೊರತೆಯಿದೆ ಎಂದು ಹೇಳುವ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಶಾಸಕರ ಜೊತೆಯಲ್ಲಿ ಚರ್ಚಿಸಿ ಇದ್ಕಕೊಂದು ಶಾಶ್ವತವಾದ ಪರಿಹಾರವನ್ನು ಒದಗಿಸಲು ಮುಂದಾಗುತ್ತಿಲ್ಲ.

ಚಿರತೆ ಹಾವಳಿಯಿಂದ ರೈತರು ಸಾಕು ಪ್ರಾಣಿಗಳನ್ನು ಕಳೆದುಕೊಂಡು ಆರ್ಥಿಕ ನಷ್ಠವನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಕಾಡು ಪ್ರಾಣಿಗಳಿಗೆ ಬಿಲಿಯಾದ ರಾಸುಗಳ ಮಾಲೀಕರಿಗೆ ಕನಿಷ್ಠ 1 ಲಕ್ಷ ರು ಪರಿಹಾರ ನೀಡಬೇಕು. ತಾಲೂಕು ಆಡಳಿತ ಗಂಭೀರವಾಗಿ ಚಿಂತಿಸಿ ಶಾಸಕರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದು ಪರಿಹಾರವನ್ನು ಒದಗಿಸಿಕೊಡಬೇಕು. ಚಿರತೆಗಳ ಹಾವಳಿ ನಿಯಂತ್ರಿಸಲು ಕ್ರಮ ವಹಿಸುವಂತೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಆಗ್ರಹಿಸಿದ್ದಾರೆ.