ಸಾರಾಂಶ
ಗುಂಡ್ಲುಪೇಟೆ : ಇತ್ತೀಚಿಗೆ ಬಿದ್ದ ಮಳೆಗೆ ಗುಂಡ್ಲುಪೇಟೆ-ಚಾಮರಾಜನಗರ ಜಿಲ್ಲಾ ಕೇಂದ್ರದ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಕಿರಿ ಕಿರಿಯಾಗುತ್ತಿದ್ದು, ವಾಹನಗಳ ಸವಾರರು ಹಾಗೂ ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ವೃತ್ತದಿಂದ ಹಿಡಿದು ಚಾಮರಾಜನಗರಕ್ಕೆ ತೆರಳುವ ರಸ್ತೆಯಲ್ಲಿ ಈ ಹಿಂದೆ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದವು. ಆದರೆ ಇತ್ತೀಚೆಗೆ ಬಿದ್ದ ಮಳೆಗೆ ಮಂಡಿಯುದ್ದ ಗುಂಡಿಗಳು ಆಗಿವೆ. ಗುಂಡ್ಲುಪೇಟೆಯಿಂದ ಚಾಮರಾಜನಗರದ ವರೆಗೆ ಗುಂಡಿಗಳು ಬಿದ್ದು ಈ ರಸ್ತೆಯಲ್ಲಿ ತಿರುಗಾಡುವ ವಾಹನಗಳ ಸವಾರರು ಜಿಲ್ಲಾಡಳಿತ ಇದೆಯಾ, ಇಲ್ಲಿನ ಶಾಸಕರು ಏನು ಮಾಡ್ತಾವ್ರೆ ? ಎಂದು ಪ್ರಶ್ನಿಸಿದ್ದಾರೆ.
ಗುಂಡ್ಲುಪೇಟೆ-ತೆರಕಣಾಂಬಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನುಕನಿಷ್ಠ ಮುಚ್ಚುವ ಕೆಲಸ ಮಾಡದಷ್ಟು ಜಿಲ್ಲಾಡಳಿತ ಬರೆಗೆಟ್ಟು ಹೋಗಿದೆಯಾ ? ಜಿಲ್ಲಾ ಸಂಪರ್ಕ ರಸ್ತೆ ಎಂಬ ಹೆಸರು ತೆಗೆದು ಹಾಕಿ ಬಿಡಿ ಎಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ವೃತ್ತದಿಂದ ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯ ಆದರ್ಶ ವಿದ್ಯಾಲಯದ ತಿರುವು, ದೊಡ್ಡತುಪ್ಪೂರು ಗೇಟ್, ಶಿಂಡನಪುರ, ಕಗ್ಗಳ, ತೆರಕಣಾಂಬಿ ಬಳಿಯ ಜೆಎಸ್‌ಎಸ್ ಪ್ರೌಢಶಾಲೆ ತನಕ ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ಡಾಂಬಾರು ಕಿತ್ತು ಗುಂಡಿಗಳ ತಾಣವಾಗಿವೆ.
ತಾಲೂಕಿನ ತೆರಕಣಾಂಬಿ ಗ್ರಾಮದ ಪರಿಮಿತಿಯಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿಲ್ಲ. ಆದರೆ ತಾಲೂಕಿನ ಲಕ್ಕೂರು ಗೇಟ್, ಗುರುವಿನಪುರ ಗೇಟ್ ಬಳಿ ಅಲ್ಲಲ್ಲಿ ಗುಂಡಿಗಳಿವೆ. ಬೈಕ್ ಸವಾರರು ಏನಾದರೂ ಅತ್ತಿತ್ತ ನೋಡಿ ಸಂಚರಿಸಿದ್ದಲ್ಲಿ ಗುಂಡಿಗಳಿಗೆ ಬೈಕ್ ಬಿದ್ದು ಕಾಲು, ಕೈ ಮುರಿದು ಕೊಳ್ಳುವುದು ಗ್ಯಾರಂಟಿ. ಕೆಲ ಬೈಕ್‌ಗಳ ಆಕ್ಸಲ್‌ಗಳು ತುಂಡಾಗಿವೆ. ಜಿಲ್ಲಾ ಸಂಪರ್ಕ ರಸ್ತೆಯಾಗಿರುವ ಕಾರಣ ವಾಹನಗಳ ಓಡಾಟ ಹೆಚ್ಚಿದೆ. ದೊಡ್ಡ ವಾಹನಗಳೇನಾದರೂ ಬದಿಗೆ ಸರಿಯದಿದ್ದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ.
ಪಟ್ಟಣದ ಹೊರ ವಲಯದ ಆದರ್ಶ ವಿದ್ಯಾಲಯದ ತಿರುವಿನ ಬಳಿ ದೊಡ್ಡ ತುಪ್ಪೂರು ಗೇಟ್ ಎದುರು ಮಂಡಿಯುದ್ದ ಹಳ್ಳ, ತೆರಕಣಾಂಬಿ ಜೆಎಸ್‌ಎಸ್ ಪ್ರೌಢಶಾಲೆಯ ಬಳಿಯ ಸೇತುವೆ ಬಳಿ ಮಂಡಿಯುದ್ದ ಹಳ್ಳ ಬಿದ್ದಿರುವುದು ವಾಹನಗಳ ಹತ್ತಿರ ಬರುವ ತನಕ ಕಾಣುತ್ತಿಲ್ಲ. ಗುಂಡಿಗಳ ಅಪಘಾತಗಳ ತಾಣವಾಗಿವೆ.
ರಾತ್ರಿಯ ವೇಳೆ ಈ ರಸ್ತೆಯಲ್ಲಿ ಬೇರೆ ಜಿಲ್ಲೆ ಅಥವಾ ತಾಲೂಕಿನ ವಾಹನಗಳು ಬಂದರೆ ಅಪಘಾತ ಖಚಿತದ ಜೊತೆಗೆ ಗುಂಡಿಗಳಿಗೆ ಸಣ್ಣ ಪುಟ್ಟ ವಾಹನಗಳ ಚಕ್ರ ಮಂಡಿಯುದ್ದ ಹಳ್ಳಕ್ಕೆ ಬಿಟ್ಟರೆ ಆಕ್ಸಲ್ ತುಂಡಾಗುವುದು ಉಚಿತ ಎಂದು ಬೈಕ್ ಸವಾರ ಮೂಡ್ನಾಕೂಡಿನ ಮಹೇಶ್ ಹೇಳಿದ್ದಾರೆ.
ನಾಲ್ಕನೇ ಬಾರಿಗೆ ಶಾಸಕರಾದ್ರೂ…
ಗುಂಡ್ಲುಪೇಟೆ-ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳದ್ದೇ ಸದ್ದು. ಜಿಲ್ಲಾ ಕೇಂದ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ನಾಲ್ಕನೇ ಬಾರಿಗೆ ಸತತವಾಗಿ ಗೆದ್ದಿದ್ದಾರೆ. ಆದರೆ ಜಿಲ್ಲಾ ಕೇಂದ್ರದ ರಸ್ತೆ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೊದಲ ಬಾರಿಗೆ ಶಾಸಕರಾಗಿದ್ದರೂ ಸಿಎಂ ಜೊತೆ ಮತ್ತು ಸಿಎಂ ಪುತ್ರರೊಂದಿಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ ಬಳಿಯ ಆದರ್ಶ ವಿದ್ಯಾಲಯದ ಬಳಿಯ ತಿರುವಿನಲ್ಲಿ ಗುಂಡಿಗಳು ಬಿದ್ದಿರುವುದು.--
;Resize=(128,128))
;Resize=(128,128))