ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮುದ್ರಣ ಮಾಧ್ಯಮಗಳು ಇಂದಿಗೂ ವಸ್ತುನಿಷ್ಠ ವರದಿ ಪ್ರಕಟಿಸುತ್ತಿವೆ ಆದರೆ ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳ ವರದಿಗಳು ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಮಾಜಿ ಶಾಸಕ ನರೇಂದ್ರ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಕಮ್ಮವಾರಿ ಸಮುದಾಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಸಮಾಜಕ್ಕೆ ಅವಶ್ಯಕವಾದ ಸುದ್ದಿಗಳನ್ನು ಪ್ರಕಟ ಮಾಡುತ್ತಿಲ್ಲ, ದೇಶದಲ್ಲಿ ಬೆಲೆ ಏರಿಕೆ, ರೈತರ ಸಂಕಷ್ಟ, ಪ್ರವಾಹ, ಬರಗಾಲ ಸೇರಿದಂತೆ ಜನರಿಗೆ ಉಪಯೋಗವಾಗುವ ಸುದ್ದಿಗಳನ್ನು ಹೆಚ್ಚು ಬಿತ್ತರ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ದೃಶ್ಯ ಮಾಧ್ಯಮದವರ ಕಣ್ಣು ತೆರೆಸಬೇಕು. ನಾವು ತಪ್ಪು ಮಾಡಿದಾಗ ಅವರು ನಮ್ಮ ಕಣ್ಣು ತೆರೆಸಲಿ ಅದಕ್ಕೆ ನಾವು ಸಹಕಾರ ನೀಡೋಣ ಎಂದರು.
ನಟ ದರ್ಶನ್ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ದೃಶ್ಯ ಮಾಧ್ಯಮಗಳು ಅವನು ಊಟ ಮಾಡಿದ, ನಿದ್ದೆ ಮಾಡಿದ, ಪುಸ್ತಕ ಓದಿದ ಎಂದು ಕಳೆದ ಒಂದು ತಿಂಗಳಿನಿಂದ ಸುದ್ದಿ ಬಿತ್ತರ ಮಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಏನನ್ನು ತಿಳಿಸಲು ಹೊರಟಿದ್ದಾರೆ. ಇದರ ಬದಲು ರೈತರು, ಗ್ರಾಮಗಳ ಸಮಸ್ಯೆಗಳನ್ನು ಎತ್ತಿ ತೋರಿಸಿದರೆ ಗ್ರಾಮಗಳು ರೈತರ ಸಮಸ್ಯೆ ಬಗೆಹರಿಯಲಿದೆ. ಇಂದು ದೇಶಕ್ಕೆ ಅನ್ನ ನೀಡುವ ರೈತ ಪ್ರತಿನಿತ್ಯ ಪ್ರತಿಭಟನೆ ಮಾಡುತ್ತಿದ್ದಾನೆ. ಇವರಿಗೆ ಸರಿಯಾದ ಮಾರುಕಟ್ಟೆ ಒದಗಿಸಿಕೊಟ್ಟು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟರೆ ಆರ್ಥಿಕವಾಗಿ ಅವರು ಮುಂದೆ ಬರಬಹುದು ಎಂದು ಹೇಳಿದರು.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಲೆ ಮಾದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಆದ ಘಟನೆಗೆ ಸಂಬಂಧಿಸಿದಂತೆ ನಿರಂತರವಾಗಿ ಸಮಸ್ಯೆಗಳನ್ನು ಎತ್ತಿ ತೋರಿಸಿ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ, ಒಂದು ಕ್ಷೇತ್ರ ಅಭಿವೃದ್ಧಿ ಮಾಡಲು ಪತ್ರಕರ್ತರ ಸಹಕಾರ ಅಗತ್ಯ, ಹನೂರು ತಾಲೂಕಿನ ಪತ್ರಕರ್ತರು ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಸುದ್ದಿಯನ್ನು ಬಿತ್ತರಿಸಿ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮವಹಿಸುತ್ತಿದ್ದಾರೆ. ನನಗೆ ಅಧಿಕಾರ ಇರಲಿ ಇಲ್ಲದೆ ಇರಲಿ ನಿಮಗೆ ನನ್ನ ಸಹಕಾರ ಇದ್ದೇ ಇದೆ. ನಾನು ಕೈಲಾದ ಮಟ್ಟಿಗೆ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಹಾಯ ಮಾಡುತ್ತೇನೆ, ನನ್ನ ಪತಿ ದಿ.ಎಚ್.ನಾಗಪ್ಪ ಅವರ ಹೆಸರಿನಲ್ಲಿ ಹನೂರು ತಾಲೂಕಿನ ಪತ್ರಕರ್ತರನ್ನು ಪ್ರೋತ್ಸಾಹಿಸಲು ದತ್ತಿ ಪ್ರಶಸ್ತಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಮಾತನಾಡಿ, ಹನೂರು ತಾಲೂಕಿನ ಪತ್ರಕರ್ತರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಉತ್ತಮ ವರದಿಗಳನ್ನು ಪ್ರಕಟ ಮಾಡುತ್ತಿದ್ದಾರೆ. ಇದುವರೆಗೂ ತಾಲೂಕು ಕಾರ್ಯಕರ್ತರ ಸಂಘದವರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ಮುಂದೆಯೂ ಭವನ ನಿರ್ಮಾಣ ಮಾಡಲು ವೈಯಕ್ತಿಕವಾಗಿಯೂ ಸಹಾಯ ಮಾಡುತ್ತೇನೆ. ಜಿಲ್ಲಾ ಮಟ್ಟದಲ್ಲಿ ನೀಡುವಂತೆ ತಾಲೂಕು ಮಟ್ಟದಲ್ಲಿಯೂ ನಮ್ಮ ತಂದೆ ತಾಯಿಯವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತೇನೆ ಎಂದರು.ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಹನೂರು ತಾಲೂಕಿನಲ್ಲಿ ಸಂಘ ಸಕ್ರಿಯವಾಗಿ ನಡೆಯುತ್ತಿದೆ. ಹನೂರು ಪತ್ರಕರ್ತರು ಉನ್ನತ ವ್ಯಾಸಂಗ ಮಾಡಿ ಪತ್ರಕರ್ತ ವೃತ್ತಿ ಮಾಡುತ್ತಿದ್ದಾರೆ. ತಾಲೂಕು ವರದಿಗಾರರು ಶಿಸ್ತು ಬದ್ಧವಾಗಿ ಕೆಲಸ ಮಾಡುತ್ತಾ ಕ್ಷೇತ್ರದ ಸಮಗ್ರ ಸಮಸ್ಯೆಗಳ ಬಗ್ಗೆ ನಿರಂತರ ವರದಿ ಮಾಡಿ ಜಿಲ್ಲಾಡಳಿತದ ಗಮನ ಸೆಳೆಯುತ್ತಿದ್ದಾರೆ. ಪತ್ರಕರ್ತರಿಗೆ ನಿವೇಶನ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಗೂಳಿಪುರ ನಂದೀಶ್, ಜಿಲ್ಲಾ ನಿರ್ದೇಶಕ ನಿಂಪು ರಾಜೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್.ಎಂ, ಗೌರವಾಧ್ಯಕ್ಷ ದೇವರಾಜ ನಾಯ್ಡು, ಕಾರ್ಯದರ್ಶಿ ಬಸವರಾಜು, ಮಾಜಿ ಪ್ರಧಾನ ಕಾರ್ಯದರ್ಶಿ ಗೌಡಳ್ಳಿ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಕೊಳ್ಳೇಗಾಲದಲ್ಲಿ ಪತ್ರಕರ್ತರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದೇವೆ. ಅದರಂತೆ ಮುಂದಿನ ದಿನಗಳಲ್ಲಿ ಹನೂರು ತಾಲೂಕಿನ ಪತ್ರಕರ್ತರ ಮಕ್ಕಳಿಗೂ ಉಚಿತ ವಿದ್ಯಾಭ್ಯಾಸ ಕೊಡುವುದಕ್ಕೆ ಕ್ರಮ ವಹಿಸುತ್ತೇನೆ.ಪ್ರೇಮಲತಾ ಕೃಷ್ಣಸ್ವಾಮಿ, ಎಚ್.ಕೆ.ಟ್ರಸ್ಟ್ ಅಧ್ಯಕ್ಷೆಪತ್ರಕರ್ತರಿಗೆ ನಿವೇಶನ ನೀಡಲು ಸರ್ಕಾರಿ ಜಾಗಗಳನ್ನು ಗುರುತಿಸಿದರೆ ನಾನು ಸಹ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿ ನಿವೇಶನ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.ಆರ್.ನರೇಂದ್ರ, ಮಾಜಿ ಶಾಸಕ