ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ಬಿರುಸುಗೊಂಡಿರುವ ಬೆನ್ನಲ್ಲೇ ಜಿಲ್ಲೆಯ ಹಿರಿಯ ಶಾಸಕರಲ್ಲೂ ಮಂತ್ರಿಗಿರಿ ಕನಸು ಚಿಗುರೊಡೆದಿದೆ. ಅದಕ್ಕಾಗಿ ಪಕ್ಷನಿಷ್ಠೆ, ಹಿರಿತನ, ಜಾತಿ ಇತ್ಯಾದಿ ಗುರಾಣಿ ಹಿಡಿದು ಲಾಬಿ ಆರಂಭಿಸಿದ್ದಾರೆ. ಆರು ಜನ ಶಾಸಕರಿದ್ದರೂ ಜಿಲ್ಲೆಗೆ ಮಂತ್ರಿ ಸ್ಥಾನ ದಕ್ಕಿಲ್ಲ ಎಂಬ ಅಸ್ತ್ರವನ್ನೂ ಇಟ್ಟುಕೊಂಡು ಸಂಪುಟ ಸೇರುವ ಕಸರತ್ತು ನಡೆಸಿದ್ದಾರೆ.

ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ಹಾವೇರಿಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ಬಿರುಸುಗೊಂಡಿರುವ ಬೆನ್ನಲ್ಲೇ ಜಿಲ್ಲೆಯ ಹಿರಿಯ ಶಾಸಕರಲ್ಲೂ ಮಂತ್ರಿಗಿರಿ ಕನಸು ಚಿಗುರೊಡೆದಿದೆ. ಅದಕ್ಕಾಗಿ ಪಕ್ಷನಿಷ್ಠೆ, ಹಿರಿತನ, ಜಾತಿ ಇತ್ಯಾದಿ ಗುರಾಣಿ ಹಿಡಿದು ಲಾಬಿ ಆರಂಭಿಸಿದ್ದಾರೆ. ಆರು ಜನ ಶಾಸಕರಿದ್ದರೂ ಜಿಲ್ಲೆಗೆ ಮಂತ್ರಿ ಸ್ಥಾನ ದಕ್ಕಿಲ್ಲ ಎಂಬ ಅಸ್ತ್ರವನ್ನೂ ಇಟ್ಟುಕೊಂಡು ಸಂಪುಟ ಸೇರುವ ಕಸರತ್ತು ನಡೆಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಮಟ್ಟಿಗೆ ಭರ್ಜರಿ ಶಕ್ತಿ ನೀಡಿದ್ದು ಹಾವೇರಿ ಜಿಲ್ಲೆ. ಕಳೆದ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಗೆದ್ದು, ಬಳಿಕ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅದನ್ನೂ ಸೇರಿ ಜಿಲ್ಲೆಯ ಎಲ್ಲಾ 6 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಹಾಗೆ ನೋಡಿದರೆ ಜಿಲ್ಲೆಗೆ ಎರಡೂವರೆ ವರ್ಷದ ಹಿಂದೆಯೇ ಮಂತ್ರಿಗಿರಿ ಸಿಗಬೇಕಿತ್ತು ಎಂಬುದು ಪಕ್ಷದ ಕಾರ್ಯಕರ್ತರ ವಾದ. ಆದರೆ, ವಿವಿಧ ರಾಜಕೀಯ ಕಾರಣದಿಂದ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿತ್ತು. ಈಗ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರ ಮತ್ತು ಸಂಪುಟ ಪುನಾರಚನೆ ಕುರಿತು ಚರ್ಚೆ ಜೋರಾಗಿದೆ. ಇದರಿಂದ ಜಿಲ್ಲೆಯ ಶಾಸಕರ ಮಂತ್ರಿಗಿರಿ ಕನಸು ಮತ್ತೊಮ್ಮೆ ಚಿಗುರೊಡೆದಿದ್ದು, ಈ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ.

ಅಧಿಕಾರ ಹಸ್ತಾಂತರದ ಬಗ್ಗೆ ರಾಜಕೀಯ ಚಟುವಟಿಕೆ ಶುರುವಾದ ಬೆನ್ನಲ್ಲೇ ಜಿಲ್ಲೆಯ ಕೆಲ ಶಾಸಕರು ತಮ್ಮ ನಿಷ್ಠೆಯ ನಾಯಕರನ್ನು ಭೇಟಿಯಾಗಿ ಒತ್ತಡ ಹೇರುವ ತಂತ್ರ ಆರಂಭಿಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ಹಿರಿಯ ಶಾಸಕರ ತಂಡ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿರುವ ಬೆನ್ನಲ್ಲೇ ಜಿಲ್ಲೆಯ ಹಿರಿಯ ಶಾಸಕರೂ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹೇರಲು ಆರಂಭಿಸಿದ್ದಾರೆ.

ಮಂತ್ರಿಗಿರಿಗೆ ಹಲವರ ಪ್ರಯತ್ನ: ಸಂಪುಟ ಪುನಾರಚನೆಯಾದರೆ ಮಂತ್ರಿ ಸ್ಥಾನಕ್ಕೆ ಅರ್ಹರು ಜಿಲ್ಲೆಯಲ್ಲಿ ಹಲವು ಶಾಸಕರಿದ್ದಾರೆ. ವಿಧಾನಸಭೆ ಉಪಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಅವರು ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಅಲ್ಲದೇ ತಾನು ಬಂಜಾರ ಸಮುದಾಯದ ಪಕ್ಷದ ಏಕೈಕ ಶಾಸಕನಾಗಿದ್ದು, ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು, ಮುಂದೆ ಅವಕಾಶ ನೀಡುತ್ತೇವೆ ಎಂದು ಹೈಕಮಾಂಡ್ ಭರವಸೆ ನೀಡಿದ್ದರು. ಆದ್ದರಿಂದ ಈ ಸಲ ಸಂಪುಟ ಪುನಾರಚನೆಯಾದರೆ ಅವಕಾಶ ಸಿಗುತ್ತದೆ ಎಂಬ ಭರವಸೆಯನ್ನು ರುದ್ರಪ್ಪ ಲಮಾಣಿ ವ್ಯಕ್ತಪಡಿಸಿದ್ದಾರೆ.

ಇನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಕೂಡ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಜನತಾದಳ ಸರ್ಕಾರವಿದ್ದಾಗಲೇ ಮಂತ್ರಿಯಾಗಿದ್ದ ಅವರಿಗೆ ನಂತರ ಅವಕಾಶ ಸಿಕ್ಕಿರಲಿಲ್ಲ. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲೇ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಕುರುಬ ಸಮುದಾಯಕ್ಕೆ ಸೇರಿದ ಬಸವರಾಜ ಶಿವಣ್ಣನವರಗೆ ಅವಕಾಶ ಸಿಕ್ಕಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು, ಹಿರಿತನದ ದಾಳ ಇಟ್ಟುಕೊಂಡು ಮಂತ್ರಿಗಿರಿಗೆ ಪ್ರಯತ್ನ ನಡೆಸಿದ್ದಾರೆ. ನಾಲ್ಕು ಬಾರಿ ಶಾಸಕನಾಗಿರುವ ತಮಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಮಾಡಿದ್ದಾರೆ. ಸಂಪುಟ ಪುನಾರಚನೆಯಾದರೆ ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಕೂಡ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವವರಲ್ಲಿ ಪ್ರಮುಖರಾಗಿದ್ದಾರೆ. ಕಳೆದ ಅವಧಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರೆಲ್ಲ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಗಳಾಗಿದ್ದರೆ, ಪರಿಷತ್ ಸದಸ್ಯ ಎಂಬ ಕಾರಣಕ್ಕೆ ಇವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಪಕ್ಷ ನಿಷ್ಠೆ, ದೆಹಲಿ ಮಟ್ಟದಲ್ಲಿ ನಾಯಕರೊಂದಿಗೆ ಉತ್ತಮ ಸಂಪರ್ಕ, ಪಕ್ಷದ ತತ್ವ ಸಿದ್ಧಾಂತಕ್ಕೆ ಸದಾ ಬದ್ಧರಾಗಿರುವ ಹಿನ್ನೆಲೆಯಲ್ಲಿ ಈ ಸಲ ಸಂಪುಟ ಸೇರಲು ಎಲ್ಲ ಅರ್ಹತೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಅವರು, ಮಂತ್ರಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಚುರುಕಾಗಿ ತೊಡಗಿಕೊಂಡಿದ್ದ ಸಲೀಂ ಅಹ್ಮದ್‌, ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಮೂವರೊಂದಿಗೆ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸುತ್ತಿದ್ದಾರೆ. ಎರಡು ಅವಧಿ ಪರಿಷತ್ ಸದಸ್ಯರಾಗಿ, ಎರಡು ಸಲ ಶಾಸಕರಾಗಿ ಹೀಗೆ ನಾಲ್ಕು ಬಾರಿ ಶಾಸಕರಾಗಿರುವ ಅವರು ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ರಾಜಕೀಯ ಅನುಭವ, ಯುವ ನಾಯಕತ್ವ ಹೀಗೆ ತಮ್ಮ ಹಲವು ಸಾಧನೆ ಹಿಡಿದು ಸಂಪುಟ ಸೇರಲು ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ನಡೆದ ಭೂ ಗ್ಯಾರಂಟಿ ಸಮಾವೇಶದ ಯಶಸ್ಸು ಕೂಡ ರಾಜ್ಯ ಮಟ್ಟದಲ್ಲಿ ಇವರ ಸಾಮರ್ಥ್ಯ ಹೆಚ್ಚಿಸಿದೆ. ಇನ್ನುಳಿದ ಮೂರು ಕ್ಷೇತ್ರದ ಶಾಸಕರಲ್ಲಿ ಪ್ರಕಾಶ ಕೋಳಿವಾಡ, ಯಾಸೀರ್ ಖಾನ್ ಪಠಾಣ ಮೊದಲ ಬಾರಿ ಗೆದ್ದವರು. ಹಿರೇಕೆರೂರಿನ ಯು.ಬಿ.ಬಣಕಾರ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದವರು. ಆದ್ದರಿಂದ ಈ ಮೂವರು ಸದ್ಯಕ್ಕೆ ಸಂಪುಟ ಸೇರುವ ಬಗ್ಗೆ ಮಹತ್ವಾಕಾಂಕ್ಷೆ ಇಟ್ಟುಕೊಂಡಿಲ್ಲ. ಆದರೆ, ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.

ಜಿಲ್ಲೆಯವರು ಮಂತ್ರಿಯಾಗಲಿ: ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಒಬ್ಬರನ್ನೂ ಮಂತ್ರಿ ಮಾಡಿಲ್ಲ. ಜಿಲ್ಲೆಯ ಶಾಸಕರು ಮಂತ್ರಿಯಾಗಬೇಕು, ಅವರಿಗೇ ಉಸ್ತುವಾರಿ ನೀಡಬೇಕು ಎಂಬ ಒತ್ತಾಯ ಹೆಚ್ಚಿದೆ. ಅದಕ್ಕಾಗಿ ಜಿಲ್ಲೆಯ ಯಾರಿಗಾದರೂ ಮಂತ್ರಿ ಸ್ಥಾನ ನೀಡಬೇಕು. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.