ಗೋಮಾಳಕ್ಕಾಗಿ ಕೌಶಿಕ ಗ್ರಾಮಸ್ಥರ ಅನಿರ್ದಿಷ್ಟಾವಧಿ ಧರಣಿ ಆರಂಭ

| Published : Jun 22 2024, 12:51 AM IST

ಗೋಮಾಳಕ್ಕಾಗಿ ಕೌಶಿಕ ಗ್ರಾಮಸ್ಥರ ಅನಿರ್ದಿಷ್ಟಾವಧಿ ಧರಣಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ತಾಲೂಕಿನ ಕೌಶಿಕ ಗ್ರಾಮದ ಸರ್ವೆ ನಂ.೩೨೮ ಮತ್ತು ೩೨೯ರಲ್ಲಿ ಕೆಎಂಎಫ್‌ಗೆ ಭೂಸ್ವಾಧೀನವಾಗಿರುವ ಗೋಮಾಳದ ಜಮೀನನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ ಗ್ರಾಮಸ್ಥರು ಶುಕ್ರವಾರ ಮಧ್ಯಾಹ್ನ ನೂತನ ಮೆಘಾ ಡೈರಿ ಮುಂದೆ ರಸ್ತೆ ಮೇಲೆ ಕುಳಿತು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.

ಕೆಎಂಎಫ್‌ಗೆ ಪಾಲಾಗಿರುವ ಜಮೀನು । ನೂತನ ಮೆಘಾ ಡೈರಿ ಮುಂದೆ ರಸ್ತೆ ಮೇಲೆ ಕುಳಿತು ಪ್ರತಿಭಟನೆ । ೭೧.೨೩ ಎಕರೆ ಸ್ವಾಧೀನ

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಕೌಶಿಕ ಗ್ರಾಮದ ಸರ್ವೆ ನಂ.೩೨೮ ಮತ್ತು ೩೨೯ರಲ್ಲಿ ಕೆಎಂಎಫ್‌ಗೆ ಭೂಸ್ವಾಧೀನವಾಗಿರುವ ಗೋಮಾಳದ ಜಮೀನನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ ಗ್ರಾಮಸ್ಥರು ಶುಕ್ರವಾರ ಮಧ್ಯಾಹ್ನ ನೂತನ ಮೆಘಾ ಡೈರಿ ಮುಂದೆ ರಸ್ತೆ ಮೇಲೆ ಕುಳಿತು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.

ಕೌಶಿಕ ಗ್ರಾಮದ ಅಶೋಕ್ ಮತ್ತು ವಕೀಲ ಎಸ್.ದ್ಯಾವೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ‘ಸರ್ವೆ ನಂ.೩೨೮ ಹಾಗೂ ೩೨೯ ರಲ್ಲಿ ಒಟ್ಟು ೭೧.೨೩ ಎಕರೆ ಗೋಮಾಳದ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ ಮಾಡಲು ಭೂ ಸ್ವಾಧೀನವಾಗಿರುತ್ತದೆ. ಇದನ್ನು ಬಿಟ್ಟರೆ ಇನ್ನಾವುದೇ ಗೋಮಾಳ ಜಮೀನು ಇಲ್ಲದೆ ಇರುವುದರಿಂದ ನೂರಾರು ವರ್ಷಗಳಿಂದ ಊರಿನ ಅನುಕೂಲಕ್ಕಾಗಿ ಇರುವಂತಹ ೭೧.೨೩ ಎಕರೆ ಜಮೀನನ್ನು ಮೊದಲು ಇದ್ದ ಹಾಗೇ ಊರಿಗೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಕಚೇರಿಯ ಮುಂದೆ ನ್ಯಾಯ ಸಿಗುವವರೆಗೂ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲಾಗುವುದು’ ಎಂದು ಎಚ್ಚರಿಸಿದರು.

ಇದರ ಮಧ್ಯೆ ತಮ್ಮ ಕಚೇರಿಯಿಂದ ಗೋಮಾಳದ ಜಾಗವನ್ನು ಇತರರಿಗೆ ಮಂಜೂರು ಮಾಡಿರುವುದು ತಿಳಿದು ಬಂದಿದ್ದು, 2022ನೇ ಇಸವಿಯಲ್ಲಿ ಗೋಮಾಳದ ಜಾಗಕ್ಕೆ ಬಂದು ಕಾಮಗಾರಿಯನ್ನು ಪ್ರಾರಂಭಿಸಿದ್ದು, ಇದಕ್ಕೆ ಊರಿನ ಗ್ರಾಮಸ್ಥರು ಅವಕಾಶ ನೀಡದೆ ಗೋಮಾಳದ ಜಾಗದಲ್ಲಿಯೇ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಿ ಸುಮಾರು ೧೫ ದಿನ ಧರಣಿ ನಡೆಸಿದ್ದೇವೆ. ಗ್ರಾಮದಿಂದ ಜಾನುವಾರು ಜತೆಗೆ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮನವಿ ಕೊಟ್ಟಿದ್ದೇವೆ. ಗೋಮಾಳದ ಜಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಕಾಮಗಾರಿಯನ್ನು ಪ್ರಾರಂಭಿಸಿದರ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಮೆ ನೀಡಿಲ್ಲ ಎಂದು ದೂರಿದರು.

ಯಾವುದೇ ಪ್ರತಿಕ್ರಿಯೆ ನೀಡಿದ್ದರಿಂದ ಗೋಮಾಳದ ಜಾಗದಲ್ಲಿ ಶ್ರೀಮುಕುರ್ತಮ್ಮ (ದುರ್ಗಾಂಬ) ದೇವಿಯ ನೂತನ ವಿಗ್ರಹ ಹಾಗೂ ದೇವಸ್ಥಾನದ ಆಲಯ ಪ್ರತಿಷ್ಠಾಪನೆಯನ್ನು 2022ರ ಸೆ.4 ರಂದು ಹಾಗೂ ೫ ರಂದು ನೆರವೇರಿಸಲಾಗಿದೆ. ಪ್ರಸ್ತುತ ಪ್ರತಿ ನಿತ್ಯ ದೇವಸ್ಥಾನದ ಪೂಜೆ, ಪುರಸ್ಕಾರಗಳು ಹಾಗೂ ಊರಿನ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.

‘ಹಾಲಿ ಗೋಮಾಳದ ಜಾಗವನ್ನು ಕೈಗಾರಿಕೆಗಳಿಗೆ ಹಂಚಿಕೆ ಮಾಡಿದ್ದಲ್ಲಿ, ಊರಿನ ಅನುಕೂಲಕ್ಕಾಗಿ ಯಾವುದೇ ಜಮೀನು ಇಲ್ಲದಂತಾಗುತ್ತದೆ. ಕೌಶಿಕ ಗ್ರಾಮಕ್ಕೆ ಎಲ್ಲರಿಗೂ ಅನುಕೂಲವಾಗುವ ನಮ್ಮ ಊರಿನ ಗೋಮಾಳವನ್ನು ಬಿಟ್ಟುಕೊಟ್ಟು ನಮ್ಮ ಊರಿನ ಎಲ್ಲಾ ಜನಾಂಗ ಹಾಗೂ ಜಮೀನು ಇಲ್ಲದ ಮತ್ತು ಜಮೀನು ಕಳೆದುಕೊಂಡ ನಿರಾಶ್ರಿತರಿಗೂ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ೭೧.೨೩ ಎಕರೆ ಪೈಕಿ ಕನಿಷ್ಠ ೧೨ ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ವಸತಿ ಬಡಾವಣೆಯನ್ನು ನಿರ್ಮಿಸಿಕೊಳ್ಳಲು ಕೌಶಿಕ ಗ್ರಾಮದ ರೈತರ ಅನುಕೂಲಕ್ಕಾಗಿ. ಬಿಟ್ಟುಕೊಡಬೇಕು’ ಎಂದು ವಿನಂತಿಸಿದರು.

ರೈತರ ಸಂಕಷ್ಟಕ್ಕೆ ಬಾರದ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ವಿರುದ್ಧ ಕೌಶಿಕ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಗೋಮಾಳ ಬಿಟ್ಟುಕೊಡುವ ಮೂಲಕ ನ್ಯಾಯ ಕೊಡಿಸುವಂತೆ ತಮ್ಮ ಅಳಲು ತೋಡಿಕೊಂಡರು

ಪ್ರತಿಭಟನೆಯಲ್ಲಿ ಕೌಶಿಕ ಗ್ರಾಮದ ರಂಗಸ್ವಾಮಿ, ಚಂದ್ರಣ್ಣ, ಪ್ರಭು, ಹನುಮಂತೇಗೌಡ, ನರಸಿಂಹ, ಪದ್ಮಮ್ಮ, ಸುಸೀಲಮ್ಮ, ರಾಧಾ, ಗೋಪಿನಾಥ್ ಸೇರಿ ಇತರರು ಇದ್ದರು.