ಸಾರಾಂಶ
ಮೂಲಭೂತ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ತಾಲೂಕು ಗಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಕೆಲಸ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಧರಿಸಿ ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೂಲಭೂತ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ತಾಲೂಕು ಗಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಕೆಲಸ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಧರಿಸಿ ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.ನೇತೃತ್ವ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಕೆ.ಶ್ರೀಧರ್ ಮಾತನಾಡಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳು, ಸೇವಾ ಸೌಲಭ್ಯಗಳು, ಮೊಬೈಲ್ ಆ್ಯಪ್‌ಗಳಲ್ಲಿ, ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡ ನಿಲ್ಲಿಸುವಂತೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿ ಕಪ್ಪು ಪಟ್ಟಿ ಧರಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿರುವುದನ್ನು ಬೆಂಬಲಿಸಿ ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.
ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಶಾಂತಿಯುತವಾಗಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಕೇಂದ್ರ ಸಂಘದ ಆದೇಶದಂತೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಮುಖ್ಯವಾಗಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಅಂತರ ಜಿಲ್ಲೆ ವರ್ಗಾವಣೆಗಳನ್ನು ಸರ್ಕಾರ ರದ್ದುಪಡಿಸಿರುವುದು ತುಂಬಾ ತೊಂದರೆ ಉಂಟಾಗಿದೆ. 17ಕ್ಕೂ ಹೆಚ್ಚು ಮೊಬೈಲ್ ಆ್ಯಪ್‌ಗಳನ್ನು ಏಕಕಾಲದಲ್ಲಿ ಬಳಸಬೇಕು. ಇದರಿಂದ ನಿರಂತರ ಕೆಲಸದ ಒತ್ತಡ ಬೀಳುತ್ತದೆ. ಹಾಗಾಗಿ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರೇವಣ್ಣ, ಉಪಾಧ್ಯಕ್ಷ ರಾಜೇಶ್‌ನಾಯಕ, ಜಿಲ್ಲಾ ಗೌರವ ಅಧ್ಯಕ್ಷ ಸಿ.ಮಹೇಶ್, ತಾಲೂಕು ಗೌರವ ಅಧ್ಯಕ್ಷ ನಾಗೇಶ್ ಮೂರ್ತಿ, ಸರ್ಕಾರಿ ನೌಕರರ ಸಂಘದ ಸದಸ್ಯ ಸುಮಂತ್ ಕುಮಾರ್, ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.