17ರಂದು ಲಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ-ರವೀಂದ್ರ

| Published : Jan 14 2024, 01:34 AM IST

ಸಾರಾಂಶ

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಶಾಸನ ಜನಸಾಮಾನ್ಯರ ಮೇಲೆ‌ ಭಾರಿ ಪ್ರಮಾಣದ ಹೊರೆಯಾಗಲಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಭಾರತೀಯ ನ್ಯಾಯ ಸಂಹಿತೆಯಡಿ (ಐಪಿಸಿ) ಹಿಟ್ ಆ್ಯಂಡ್ ರನ್ ಕೇಸ್ ಪ್ರಸ್ತಾವಿತ ಶಾಸನದ ಕೆಲ ನ್ಯೂನ್ಯತೆ ಸರಿಪಡಿಸಲು ಆಗ್ರಹಿಸಿ ಹು-ಧಾ ಗೂಡ್ಸ್ ಟ್ರಾನ್ಸಪೋಟರ್ಸ್ ಆ್ಯಂಡ್ ಲಾರಿ ಓನರ್ಸ್‌ ಅಸೋಸಿಯೇಷನ್ ವತಿಯಿಂದ ಜ.17 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ‌ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಶಾಸನ ಜನಸಾಮಾನ್ಯರ ಮೇಲೆ‌ ಭಾರಿ ಪ್ರಮಾಣದ ಹೊರೆಯಾಗಲಿದೆ. ಅಷ್ಟೇ ಅಲ್ಲದೆ ಇದು ಅವೈಜ್ಞಾನಿಕವಾಗಿದ್ದು, ಇದನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾಯ್ದೆ ಹಿಂಪಡೆಯಲು ಜಿಲ್ಲಾಧಿಕಾರಿ, ತಹಸೀಲ್ದಾರ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಅಂದು 20 ಸಾವಿರ ಮಿನಿ ಹಾಗೂ ಲಾರಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದೆಯಲ್ಲಿರುವ ನ್ಯೂನತೆಗಳ ಬಗ್ಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುವುದು ಎಂದರು.

ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘ, ತುಂಗಭದ್ರಾ ಮರಳು ಸಾಗಾಣಿಕದಾರ ಸಂಘ, ಧಾರವಾಡ ಲಾರಿ ಓನರ್ಸ್ ಆ್ಯಂಡ್ ಟ್ರಾನ್ಸಪೋರ್ಟಸ್೯ ಸಂಘ ಸೇರಿ 7 ಸಂಘ-ಸಂಸ್ಥೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದರು.

ಈ ವೇಳೆ ಅಧ್ಯಕ್ಷ ವಾಸು ಕೋನರಡ್ಡಿ, ಪ್ರಕಾಶ ರಾಯ್ಕರ್, ಮಹಾವೀರ ಯರೇಶೀಮೆ, ಸಮೀರ್ ಪೀರಜಾದೆ ಸೇರಿದಂತೆ ಹಲವರಿದ್ದರು.