ಆಶ್ರಯ ನಿವೇಶನ ಹಂಚಿಕೆಗೆ ಆಗ್ರಹಿಸಿ ಕಳೆದ 15 ವರ್ಷಗಳಿಂದ ಮನವಿ ಮಾಡಿಕೊಂಡರು ಇಂದಿಗೂ ಬಡ ಕುಟುಂಬಗಳ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ, ಹೀಗಾಗಿ ಜೂ. 22ರಿಂದ ಆಶ್ರಯ ಸಮಿತಿ ಕಚೇರಿ ಹಾಗೂ ಪುರಸಭೆಗೆ ಬೀಗ ಜಡಿದು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಫರೀದಾಬಾನು ನದಿಮುಲ್ಲಾ ತಿಳಿಸಿದರು.

ಬ್ಯಾಡಗಿ: ಆಶ್ರಯ ನಿವೇಶನ ಹಂಚಿಕೆಗೆ ಆಗ್ರಹಿಸಿ ಕಳೆದ 15 ವರ್ಷಗಳಿಂದ ಮನವಿ ಮಾಡಿಕೊಂಡರು ಇಂದಿಗೂ ಬಡ ಕುಟುಂಬಗಳ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ, ಹೀಗಾಗಿ ಜೂ. 22ರಿಂದ ಆಶ್ರಯ ಸಮಿತಿ ಕಚೇರಿ ಹಾಗೂ ಪುರಸಭೆಗೆ ಬೀಗ ಜಡಿದು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಫರೀದಾಬಾನು ನದಿಮುಲ್ಲಾ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಯ ಸಮಿತಿ ಅಧ್ಯಕ್ಷರಿಗೆ ಬಡವರ ಗೋಳು ಕಾಣುತ್ತಿಲ್ಲ, ಸುಮಾರು 20 ವರ್ಷದಿಂದ ನಿವೇಶನಕ್ಕಾಗಿ ಅಲೆದಾಡುತ್ತಿರುವ ಅರ್ಹ ಫಲಾನುಭವಿಗಳ ಸಮಸ್ಯೆಗೆ ಯಾರೂ ತಿಲಾಂಜಲಿ ಇಡುವ ಮನಸ್ಸು ಮಾಡುತ್ತಿಲ್ಲ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಹಗ್ಗ ಜಗ್ಗಾಟದಲ್ಲಿ ಬಡವರು ಸೂರಿಲ್ಲದೇ ಪರದಾಡುವಂತಾಗಿದೆ. ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿ, ಕಚೇರಿಗಳಿಗೆ ಅಲೆದಾಡಿ, ಮನವಿ ನೀಡಿದರೂ ಸಮಸ್ಯೆ ಬಗೆಹರಿಯದೇ ಉಳಿದಿದೆ. ಪ್ರತಿ ಬಾರಿ ಹೊಸ ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಟ್ಟಿ ಅಂತಿಮವಾಗಿಲ್ಲ: ಸುರೇಶ ಛಲವಾದಿ ಮಾತನಾಡಿ, ತಾಲೂಕಿನ ನೂರಾರು ಬಡ ಕುಟುಂಬಗಳು ಸ್ವಂತ ಸೂರಿಗಾಗಿ ಕಾಯುತ್ತಿದ್ದು, ಕೆಲವರು ಬಾಡಿಗೆ ಮನೆಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ, ಮತ್ತೆ ಕೆಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಆದರೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ, ಇಷ್ಟೆ ಅಲ್ಲದೇ ಇನ್ನೂ ಪಟ್ಟಿ ಸಹ ಅಂತಿಮವಾಗಿಲ್ಲ, ಇನ್ಯಾವಾಗ ನೀವು ಹಂಚಿಕೆ ಮಾಡುವುದು ಎಂದು ದೂರಿದರು.

ಸುಳ್ಳು ಭರವಸೆ ಬೇಡ: ಪಾಂಡುರಂಗ ಸುತಾರ ಮಾತನಾಡಿ, ಆಶ್ರಯ ಸಮಿತಿ ಅಧ್ಯಕ್ಷರೇ "ಎಷ್ಟು ಬಾರಿ ಹಂಚಿಕೆಗೆ ಸಮಯ ಕೇಳುತ್ತೀರಿ..? ಎಷ್ಟು ಬಾರಿ ಸುಳ್ಳು ಭರವಸೆ ನೀಡುತ್ತೀರಿ..? ಜನರು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ನೀವು ಮಣ್ಣುಪಾಲು ಮಾಡಿದ್ದೀರಿ. ಇನ್ನು ಮುಂದೆ ಮಾತಿನ ಭರವಸೆ ಬೇಡ, ಕಾರ್ಯರೂಪದ ನಿರ್ಧಾರಬೇಕು. ಇಲ್ಲವಾದರೆ ಬಡವರ ಆಕ್ರೋಶದ ಹೋರಾಟವನ್ನು ಎದುರಿಸಲು ಸಿದ್ಧರಾಗಿರಿ " ಎಂದು ಎಚ್ಚರಿಕೆ ನೀಡಿದರು.

ಅನಿರ್ದಿಷ್ಟಾವಧಿ ಹೋರಾಟ: ಹರೀಶಕುಮಾರ ರಿತ್ತಿ ಮಾತನಾಡಿ, ಜೂ.22ರೊಳಗೆ ನಿವೇಶನ ಹಂಚಿಕೆ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದಲ್ಲಿ ಆಶ್ರಯ ಸಮಿತಿ ಕಚೇರಿ ಹಾಗೂ ಪುರಸಭೆ ಎದುರು ಬೀಗ ಜಡಿದು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಇದು ಕೊನೆಯ ಎಚ್ಚರಿಕೆಯಾಗಿದೆ. ಇನ್ನು ಮುಂದೆ ಹಂಚಿಕೆ ಆಗುವವರೆಗೂ ನಾವು ಪ್ರತಿಭಟನೆ ಜಾಗದಿಂದ ಹಿಂದೆ ಸರಿಯಲ್ಲ ಎಂದರು. ಆಶ್ರಯ ಹೋರಾಟ ಸಮಿತಿ ಪದಾಧಿಕಾರಿಗಳಾದ ಗುತ್ತೆಮ್ಮ ಮಾಳಗಿ, ಅನ್ನಪೂರ್ಣ ಎಸ್.ಎಚ್. ಐಶ್ವರ್ಯ ಮಡಿವಾಳರ, ಸೈನಾಜ್ ಮೇಡ್ಲೇರಿ, ಸುನಿತಾ ಬದಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.