ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
೭೯ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಚೀವರ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ರೋಟರಿ ಸಂಸ್ಥೆ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಮೇರಾ ಭಾರತ್, ಮಿಮ್ಸ್ ಕೆಪಿಎಸ್ ಕಾಲೇಜು, ಪುರಸಭೆ ಕಾಲೇಜು ಹಾಗೂ ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ೭೯೦ ಅಡಿ ಉದ್ದದ ಬೃಹತ್ ತಿರಂಗ ಯಾತ್ರೆ ನಡೆಸಲಾಯಿತು.ನಗರದ ಶ್ರೀಕಾಳಿಕಾಂಬ ದೇವಾಲಯದ ಬಳಿ ತಿರಂಗ ಯಾತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಸಿರು ನಿಶಾನೆ ತೋರಿಸಿ ಮಾತನಾಡಿ, ದೇಶ ಸ್ವತಂತ್ರವಾಗಿ ೭೯ನೇ ವರ್ಷಕ್ಕೆ ಅಡಿಯಿಡುತ್ತಿರುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಸುತ್ತಿರುವುದು ಎಲ್ಲರೂ ಹೆಮ್ಮೆಪಡುವಂತಹ ವಿಷಯ. ಮಂಡ್ಯ ಇಂತಹ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಮೆಚ್ಚುಗೆ ಸೂಚಿಸಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹರ್‌ಘರ್ ತಿರಂಗಾ, ಹರ್‌ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯೋತ್ಸವ ಅಭಿಯಾನವನ್ನು ಆಚರಣೆ ಮಾಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ಅಂಗವಾಗಿ ತ್ರಿವರ್ಣ ಧ್ವಜದ ತಿರಂಗ ಯಾತ್ರೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಅನುಪಮಾ ತಿಳಿಸಿದರು.ತಿರಂಗ ಯಾತ್ರೆಯು ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿಯಿಂದ ಆರಂಭವಾಗಿ ಪೇಟೆ ಬೀದಿ, ಹೊಳಲು ವೃತ್ತ, ಜಯಜಾಮರಾಜೇಂದ್ರ ಒಡೆಯರ್ ವೃತ್ತ, ಆರ್.ಪಿ.ರಸ್ತೆ ಮಾರ್ಗವಾಗಿ ನೂರಡಿ ರಸ್ತೆ, ಹೊಸಹಳ್ಳಿ ವೃತ್ತದಿಂದ ವಿ.ವಿ. ರಸ್ತೆ ಮಾರ್ಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ಕ್ರೆಡಾಂಗಣ ತಲುಪಿತು.
೭೯೦ ಅಡಿ ಉದ್ದದ ತಿರಂಗ ಧ್ವಜವನ್ನು ಹಿಡಿದು ಮುನ್ನಡೆದ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತೀಯ ಸೇನೆಯ ಸಾಮರ್ಥ್ಯವನ್ನು ಶ್ಲಾಘಿಸಿದರು. ದಾರಿಯುದ್ದಕ್ಕೂ ದೇಶ ಪ್ರೇಮದ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಜನತೆಯು ತಿರಂಗ ಧ್ವಜದ ಮೇಲೆ ಪುಷ್ಪವೃಷ್ಟಿ ಸುರಿಸಿ ದೇಶ ಪ್ರೇಮ ಮೆರೆದರು.ತಿರಂಗ ಯಾತ್ರೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್, ಲಕ್ಷ್ಮೀನಾರಾಯಣ, ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ರಮೇಶ್, ಸೋಮೇಗೌಡ, ಸೋಮಣ್ಣ, ರಾಜೇಶ್, ವಿನೋದ್, ರವಿ, ವಿನೋದ್ ಕುಮಾರ್, ಅರವಿಂದ್, ಮಂಜುನಾಥ್, ಬಸವರಾಜು, ಅಚೀವರ್ಸ್ ಶಾಲೆಯ ಪ್ರಾಂಶುಪಾಲರಾದ ವಿದ್ಯಾ, ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಮನು ಗೊರವಾಲೆ, ಕೆ.ಪಿ.ಮೃತ್ಯುಂಜಯ, ಕಷ್ಣೇಗೌಡ, ಡಿಡಿಪಿಯು ಸಿ.ಚಲುವಯ್ಯ, ಅನನ್ಯ ಸಂಸ್ಥೆಯ ಅನುಪಮಾ, ಭಾನು, ಸರಸ್ವತಮ್ಮ, ಡಾ.ಶ್ರೀನಿವಾಸ್, ಜಿಲ್ಲಾ ತಂಬಾಕು ನಿಯಂತ್ರಣದ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು ಇತರರು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತಿರಂಗ ಯಾತ್ರೆ ಸಂಚರಿಸಿದ ರಸ್ತೆಯುದ್ದಕ್ಕೂ ಪೊಲೀಸ್ ಬಂದೋಬಸ್ತ್ ಮಾಡಿತ್ತು.