ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ

ಬಳ್ಳಾರಿ: ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ನೇತೃತ್ವದ ಇಂಡಿಯಾ ಒಕ್ಕೂಟದಿಂದ ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಮತ ಉಳಿಸಿ, ದೇಶ ಉಳಿಸಿ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ.ಈ ಪ್ರಕ್ರಿಯೆಯ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಆತಂಕ ಎದುರಾಗಿದೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆ ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಅವಕಾಶ ದೊರೆಯಬೇಕು. ಆದರೆ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಮೂಲಕ ಜನರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳು ಯಾವುದೇ ಕಾರಣಕ್ಕೂ ಕೈಬಿಡಬಾರದು. ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕ, ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಎಡ ಪಕ್ಷಗಳ ಮುಖಂಡರಾದ ವಿ.ಎಸ್.ಶಿವಶಂಕರ್ ಹಾಗೂ ಆದಿಮೂರ್ತಿ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೇಂದ್ರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುತ್ತಿದ್ದಾರೆ. ಚುನಾವಣಾ ಆಯೋಗವು ಸಂವಿಧಾನಬದ್ಧ ಸ್ವತಂತ್ರ ಸಂಸ್ಥೆಯಾಗಿದ್ದು, ಯಾವುದೇ ರಾಜಕೀಯ ಪಕ್ಷದ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎ. ಮಾನಯ್ಯ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮತದಾರರ ಹಕ್ಕುಗಳು ಸುರಕ್ಷಿತವಾಗಿರಬೇಕು. ಜನರು ತಮ್ಮ ಇಚ್ಛೆಯಂತೆ ಮತ ಚಲಾಯಿಸುವ ಸ್ವಾತಂತ್ರ್ಯ ಹೊಂದಿರಬೇಕು. ಮತದಾರರ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸುವ ನೆಪದಲ್ಲಿ ಅರ್ಹ ಮತದಾರರಿಗೆ ಅನ್ಯಾಯವಾಗಬಾರದು. ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ನೀತಿ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಖಂಡಿಸಿ ಮುಖಂಡರು ಘೋಷಣೆ ಕೂಗಿದರು. ಮತದಾನದ ಹಕ್ಕು ರಕ್ಷಣೆ, ಸಂವಿಧಾನದ ಆಶಯಗಳ ಪಾಲನೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಗೆಣಿಕೆಹಾಳು, ಮೇಯರ್ ಪಿ. ಗಾದೆಪ್ಪ, ಮಾಜಿ ಮೇಯರ್ ನಂದೀಶ್, ಕಾಂಗ್ರೆಸ್ ಜಿಲ್ಲಾ ಪ್ರಮುಖರಾದ ಎರಕುಲಸ್ವಾಮಿ, ವಿಷ್ಣು ಬೋಯಪಾಟಿ, ಎಚ್‌. ಸಿದ್ದಣ್ಣ, ವಿ.ಕೆ.ಬಸಪ್ಪ, ವಿಜಯಕುಮಾರ್ ಸಂಗನಕಲ್ಲು, ಮೋಕಾ ಮುದಿ ಮಲ್ಲಯ್ಯ, ಮಹಿಳಾ ಅಧ್ಯಕ್ಷೆ ಮಂಜುಳಾ, ಆಶಾ ಸೋಮಪ್ಪ, ಕಪ್ಪಗಲ್ಲು ಓಂಕಾರಪ್ಪ, ನಾಗಭೂಷಣಗೌಡ, ದಿವಾಕರ, ಎ.ಕೆ. ಗಂಗಾಧರ, ಪರ್ವಿನ್ ಬಾನು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.