ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಭವನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುದೇಶದ ಮಹಿಳೆಯರು ವಿದ್ಯಾವಂತರಾಗಿ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದಾಗ ಮಾತ್ರ ತಾಯಿ ಭಾರತಾಂಬೆ ಅಭಿವೃದ್ಧಿ ಸಾಧ್ಯ ಎಂಬ ಸ್ವಾಮಿ ವಿವೇಕಾನಂದರ ಮಾತಿಂದು ನಿಜವಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಗುರುವಾರ ನಗರ ಬೈಪಾಸ್ ರಸ್ತೆಯ ತುಳಸಿ ಲೇಔಟ್‌ನಲ್ಲಿ ನಿರ್ಮಿಸಿದ ‘ಜಿಲ್ಲಾ ಒಕ್ಕಲಿಗರ ಮಹಿಳಾ ಭವನ’ ಉದ್ಘಾಟಿಸಿ ಮಾತನಾಡಿದರು.ಸ್ವಾಮಿ ವಿವೇಕಾನಂದರು ಅಮೆರಿಕಾ ಪ್ರವಾಸ ಮುಗಿಸಿ ವಾಪಾಸ್ ಆಗಮಿಸಿದ ವೇಳೆ ಸಾರ್ವಜನಿಕರು, ಅಮೆರಿಕಾದಿಂದ ಭಾರತೀಯರಾದ ನಾವು ಅಳವಡಿಸಿಕೊಳ್ಳುವುದು, ಕಲಿಯುವುದು ಏನಿದೆ ಎಂದು ಕೇಳಿ ದಾಗ ಸ್ವಾಮಿ ವಿವೇಕಾನಂದರು ಕಲಿಯುವುದಕ್ಕೆ ತುಂಬಾ ವಿಚಾರಗಳಿವೆ. ಅದರಲ್ಲಿ ಅತಿ ಮುಖ್ಯವಾಗಿ ರುವುದು ಸಂಘಟನೆ ಮತ್ತೊಂದು ಮಹಿಳಾ ಸಬಲೀಕರಣ ಎಂದು ಹೇಳಿದ್ದರು.
ಭಾರತದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಿ ಅಡುಗೆ ಮನೆಗಳಲ್ಲಿ ಬಂಧಿಸಿದ್ದೇವೆ. ಮಹಿಳೆ ಯರನ್ನು ಹೆರಿಗೆ ಯಂತ್ರಗಳನ್ನಾಗಿ ಮಾಡಿಕೊಂಡಿದ್ದೇವೆ. ಅಮೆರಿಕಾದಲ್ಲಿ ಮಹಿಳೆಯರು ವಿದ್ಯಾವಂತರಾಗಿ ದೇಶದ ಪ್ರಗತಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಭಾರತೀಯ ಮಹಿಳೆಯರು ವಿದ್ಯಾವಂತರಾಗಿ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ವಿವೇಕಾನಂದರು ಹೇಳಿದ್ದರು. ಇದೀಗ, ಭಾರತೀಯ ಮಹಿಳೆಯರು ಸಂಘಟನೆ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ಒಕ್ಕಲಿಗರ ಸಂಘ, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘಕ್ಕೆ ಬೆನ್ನೆಲುಬಾಗಿ ನಿಂತು ಮಹಿಳಾ ಸಂಘದ ಏಳಿಗೆಯೇ, ಸಮಾಜದ ಏಳಿಗೆಗೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಚಿಕ್ಕಮಗಳೂರಿನ ಜಿಲ್ಲಾ ಒಕ್ಕಲಿಗರ ಸಂಘ ಶ್ಲಾಘಿಸಬೇಕಿದೆ. ಮಹಿಳೆಯರು ಇಲ್ಲವಾದರೆ ಈ ಮನುಕುಲ ಬದುಕುವುದು ತುಂಬಾ ಕಷ್ಟ. ಮಹಿಳೆ ಯರು ಇಲ್ಲದ ಜಗತ್ತನ್ನು ಮತ್ತು ಮನೆಯಲ್ಲಿ ಕಲ್ಪನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಒಕ್ಕಲಿಗರ ಸಮುದಾಯ ದೇಶಕ್ಕೆ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತಿದೆ. ಒಕ್ಕಲಿಗರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಪರಿಪೂರ್ಣವಾಗಿ ನಿಭಾಯಿಸುತ್ತಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋರಾಟ ಮತ್ತು ಪ್ರಯತ್ನದ ಫಲವಾಗಿ ಸಿಎಂ ಹುದ್ದೆ ಸಿಕ್ಕಿದೆ. ಮುಂದಿನ ಎರಡು ವರ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಕ್ಕಲಿಗರಿಗೆ ಒಕ್ಕಲಿಗರೇ ಮೊದಲ ವಿರೋಧಿಗಳಾಗಿದ್ದಾರೆ. ಪರಸ್ಪರ ಬೆಂಬಲಿಸುವ ಮೂಲಕ ಎಲ್ಲ ಜನಾಂಗ ವನ್ನು ಪ್ರೀತಿ, ವಿಶ್ವಾಸದಿಂದ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ. ಆಗ ಸಮುದಾಯ ಹಾಗೂ ಸಮಾಜ ಎರಡಕ್ಕೂ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯಪಟ್ಟರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಯಾವುದೇ ಸಮಾಜದ ಅಭಿವೃದ್ಧಿಯನ್ನು ಆ ಸಮಾಜದ ಮಹಿಳೆ ಯರ ಶಿಕ್ಷಣದಿಂದ ನಿರ್ಧರಿಸಬಹುದು. ಆ ನಿಟ್ಟಿನಲ್ಲಿ ಒಕ್ಕಲಿಗರ ಸಮುದಾಯ ಮಹಿಳೆಯರು ಶಿಕ್ಷಣ ಮಾತ್ರ ವಲ್ಲ ಸಂಘಟನೆಯಲ್ಲೂ ಮುಂದಿದ್ದಾರೆ ಎಂಬುದನ್ನು ಒಕ್ಕಲಿಗರ ಮಹಿಳಾ ಸಂಘ ಭವನ ನಿರ್ಮಾಣದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅನೇಕ ಸಂಘ ಸಂಸ್ಥೆಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದರೊಂದಿಗೆ ಅದನ್ನು ಜನರ ಶಕ್ತಿಯಾಗಿ ರೂಪಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಮಹಿಳಾ ಸಂಘ ಸಂಸ್ಥೆಗಳು ವೈಯಕ್ತಿಕ ಮತ್ತು ಕುಟುಂಬದ ಜವಾಬ್ದಾರಿಯೊಂದಿಗೆ ನಿಭಾಯಿಸುವುದು ತುಂಬಾ ಕಷ್ಟ. ಅಂತಹದರಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಪದಾಧಿಕಾರಿಗಳು ಸಂಘದ ಕಟ್ಟಡ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದರು.ಸಮಾರಂಭದಲ್ಲಿ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ, ಸಿಡಿಎ ಅಧ್ಯಕ್ಷ ಮಂಜೇಗೌಡ, ನಗರ ಸಭೆ ಅಧ್ಯಕ್ಷ ಭವ್ಯಾ ಮಂಜುನಾಥ್ ಮೊದಲಾದವರಿದ್ದರು.
- ಕೋಟ್ಸರ್ಕಾರಕ್ಕೆ ಸರಿಸಮವಾಗಿ ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿದಂತೆ ನಾಡಿನ ವಿವಿಧ ಸಮು ದಾಯದ ಮಠಮಾನ್ಯಗಳು ಬಡವರ ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹವನ್ನು ಮಾಡುತ್ತಿವೆ. ಆದಿಚುಂಚನಗಿರಿ ಮಹಾಸಂಸ್ಥಾನ ಕೇವಲ 53 ವರ್ಷದಲ್ಲಿ 100ಕ್ಕೂ ಅಧಿಕ ದೇಶದಲ್ಲಿ 500ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿರುವುದು ಹೆಮ್ಮೆಯ ಸಂಗತಿ.
- ಎಚ್.ಡಿ.ತಮ್ಮಯ್ಯ ಶಾಸಕ, ಚಿಕ್ಕಮಗಳೂರು-- ಬಾಕ್ಸ್ --ಚಿಕ್ಕಮಗಳೂರಿನಲ್ಲಿ ಮೂರು ದಿನ ಸತ್ಸಂಗಶೃಂಗೇರಿ ಶಾಖಾ ಮಠದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಏಳು ದಿನ ಸತ್ಸಂಗ ನಡೆಯಲಿದೆ. ಆ ಬಳಿಕ ಎರಡ್ಮೂರು ತಿಂಗಳ ನಂತರ ಚಿಕ್ಕಮಗಳೂರು ನಗರಲ್ಲಿ 3 ದಿನ ಸತ್ಸಂಗ ಆಯೋಜಿಸಲಾಗುವುದು ಎಂದು ಇದೇ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.-- ಫೋಟೋ
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಗುರುವಾರ ನಗರ ಬೈಪಾಸ್ ರಸ್ತೆಯ ತುಳಸಿ ಲೇಔಟ್‌ನಲ್ಲಿ ನಿರ್ಮಿಸಿದ ‘ಜಿಲ್ಲಾ ಒಕ್ಕಲಿಗರ ಮಹಿಳಾ ಭವನ’ವನ್ನುಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಈ ಶಾಸಕರಾದ ಎಚ್,ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ. ಎಸ್‌ಎಲ್ ಭೋಜೇಗೌಡ ಮೊದಲಾದವರಿದ್ದರು.