ಜಗತ್ತು ಅವಲೋಕಿಸಿದಾಗ ಭಾರತದ ಸಂವಿಧಾನ ಶ್ರೇಷ್ಠ

| Published : Nov 27 2024, 01:00 AM IST

ಜಗತ್ತು ಅವಲೋಕಿಸಿದಾಗ ಭಾರತದ ಸಂವಿಧಾನ ಶ್ರೇಷ್ಠ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ನ್ಯಾಯಾಂಗದ ಕಾರ್ಯಗಳಲ್ಲಿ ಸ್ವಯಂ ಸೇವಕರಿಗೆ, ಆಸಕ್ತರಿಗೆ ಅವಕಾಶವಾಗಿದೆ. ನಿರ್ಗತಿಕರಿಗೆ, ಬಡವರಿಗೆ, ಅರ್ಹರಿಗೆ ನ್ಯಾಯಾಂಗದ ಸೇವೆ ತಲುಪಿಸಬೇಕು.

ಧಾರವಾಡ:

ಜಾಗತಿಕ ಬದಲಾವಣೆ, ಬೇರೆ ದೇಶಗಳ ಆಡಳಿತ, ಅಲ್ಲಿನ ನಾಗರಿಕ ಹಕ್ಕು, ಸ್ವಾತಂತ್ರ್ಯಗಳನ್ನು ಅವಲೋಕಿಸಿದಾಗ ಭಾರತದ ಸಂವಿಧಾನದ ಶ್ರೇಷ್ಠತೆ ಎದ್ದು ಕಾಣುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತದ ಆಶ್ರಯದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ನಿಮಿತ್ತ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಿಗೆ ಆಯೋಜಿಸಿದ್ದ ಪ್ರವೇಶ ತರಬೇತಿ ಉದ್ಘಾಟಿಸಿದ ಅವರು, ಪ್ರತಿನಿತ್ಯ ಜೀವನದಲ್ಲಿ ಸಂವಿಧಾನದ ಆಶಯಗಳನ್ನೇ ಅಳವಡಿಸಿಕೊಂಡು, ಆಚರಿಸುತ್ತೇವೆ. ಸಂವಿಧಾನ ಪೀಠಿಕೆಯ ಪ್ರತಿ ಪದವು ಮುಖ್ಯ. ಸಂವಿಧಾನ ಪ್ರಸ್ತಾವನೆಗೆ ಸೇರಿಸಿರುವ ಪದ ತೆಗೆಯದಿರುವ ಕುರಿತು ಸರ್ವೋಚ್ಚ ನ್ಯಾಯಾಲಯ ಈಚೆಗೆ ನೀಡಿರುವ ತೀರ್ಪು ಸಂವಿಧಾನದ ಮಹತ್ವ, ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದರು.

ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜನರಿಗೆ ನ್ಯಾಯಾಂಗದ ಸೇವೆ ಮುಟ್ಟಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ನ್ಯಾಯಾಂಗದ ಕಾರ್ಯಗಳಲ್ಲಿ ಸ್ವಯಂ ಸೇವಕರಿಗೆ, ಆಸಕ್ತರಿಗೆ ಅವಕಾಶವಾಗಿದೆ. ನಿರ್ಗತಿಕರಿಗೆ, ಬಡವರಿಗೆ, ಅರ್ಹರಿಗೆ ನ್ಯಾಯಾಂಗದ ಸೇವೆ ತಲುಪಿಸಬೇಕು. ಮತ್ತು ಸಾರ್ವಜನಿಕರಲ್ಲಿ ಕಾನೂನುಗಳ ಅರಿವು ಮೂಡಿಸಬೇಕೆಂದರು.

ಕರ್ನಾಟಕ ವಕೀಲರ ಪರಿಷತ್ ಸದಸ್ಯರಾದ ಎ.ಎ. ಮುಗದುಮ್, ಸದಸ್ಯರಾದ ವಿ.ಡಿ. ಕಾಮರೆಡ್ಡಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಜಿಲ್ಲಾ ಸರ್ಕಾರಿ ವಕೀಲರಾದ ಜಿ.ಜಿ. ಅಮೋಘಿಮಠ, ಸ್ಮಿತಾ ಆರ್. ಗಿರಗಾವಿ ಮಾತನಾಡಿದರು. ಜಿಪಂನ ಸ್ವರೂಪ ಟಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಟಿ., ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ, ಪ್ಯಾನಲ್‌ ವಕೀಲರಾದ ಸೋಮಶೇಖರ ಜಾಡರ ಇದ್ದರು.