ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದಾಗಿ ದೇವಲಾಪುರ ಹೋಬಳಿ ಕೇಂದ್ರಕ್ಕೆ ಬಹಳ ಅತ್ಯವಶ್ಯವಕವಾಗಿದ್ದ ಪೊಲೀಸ್ ಹೊರ ಠಾಣೆ ಮಂಜೂರಾಗಿದೆ. ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ 215 ಹಳ್ಳಿಗಳ ಪೈಕಿ 65 ಹಳ್ಳಿಗಳು ದೇವಲಾಪುರ ಪೊಲೀಸ್ ಹೊರ ಠಾಣೆಗೆ ಸೇರುತ್ತವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪ್ರಪಂಚದಲ್ಲಿ ಅತಿ ಹೆಚ್ಚು ಕಾನೂನು ಉಲ್ಲಂಘನೆ ಮಾಡುವ ರಾಷ್ಟ್ರವಿದ್ದರೆ ಅದು ಭಾರತ. ರಾಜ್ಯವೆಂದರೆ ಕರ್ನಾಟಕ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ದೇವಲಾಪುರದಲ್ಲಿ ನೂತನವಾಗಿ ತೆರೆದಿರುವ ಪೊಲೀಸ್ ಹೊರ ಠಾಣೆ ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ದೇಶದ ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಟ್ಟು ಕಾನೂನು ವ್ಯಾಪ್ತಿಯಲ್ಲಿ ನಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ಸೇವೆ ಬಹಳ ಮುಖ್ಯ. ಪೊಲೀಸ್ ಠಾಣೆಗಳಿಂದ ಜನಸಾಮಾನ್ಯರ ರಕ್ಷಣೆಯಾಗುತ್ತದೆ ಹೊರತು ಯಾವುದೇ ಕೆಡಕುಂಟಾಗುವುದಿಲ್ಲ. ಸ್ವಲ್ಪ ದಿನಗಳ ಕಾಲ ಕಠಿಣ ಎನಿಸಬಹುದು. ನಂತರದಲ್ಲಿ ರಕ್ಷಣಾ ಇಲಾಖೆಯಿಂದ ಸಿಗುವ ಅನುಕೂಲ ಬೇರ್‍ಯಾವುದೇ ಇಲಾಖೆಯಲ್ಲಿ ಸಿಗುವುದಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಬಳಸುತ್ತಿಲ್ಲ. ಪೊಲೀಸರು ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಎಂದು ಸಲಹೆ ನೀಡುವುದೇ ದೊಡ್ಡ ಅಪರಾಧವೆಂಬಂತಾಗಿದೆ. ಒಳ್ಳೆಯದನ್ನು ಹೇಳುವ ಪೊಲೀಸರ ವಿರುದ್ಧವೇ ಕೇಸ್ ಹಾಕಿ ಎಂದು ಒತ್ತಡ ಹಾಕುವ ಪರಿಸ್ಥಿತಿ ಬಂದೊದಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ಜನರು ಸ್ಪಂದಿಸಿದಾಗ ಮಾತ್ರ ಇದನ್ನೆಲ್ಲಾ ಸರಿಪಡಿಸಬಹುದು ಎಂದು ಹೇಳಿದರು.

ಬೇರೊಬ್ಬರ ಜಮೀನು ಒತ್ತುವರಿ ಮಾಡಿಕೊಳ್ಳುವುದು. ಯಾರದ್ದೋ ಹೆಸರಿನ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡರೆ ಮುಂದೊಂದು ದಿನ ತೊಂದರೆ ಅನುಭವಿಸಬೇಕಾಗುತ್ತದೆ. ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿ ತಪ್ಪು ಮಾಡಿದವರನ್ನು ಪೊಲೀಸ್ ಅಧಿಕಾರಿಗಳು ಕಂಡು ಹಿಡಿದು ಕಾನೂನು ವ್ಯಾಪ್ತಿಗೆ ಒಳಪಡಿಸಿರುವ ಬಹಳಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದಾಗಿ ದೇವಲಾಪುರ ಹೋಬಳಿ ಕೇಂದ್ರಕ್ಕೆ ಬಹಳ ಅತ್ಯವಶ್ಯವಕವಾಗಿದ್ದ ಪೊಲೀಸ್ ಹೊರ ಠಾಣೆ ಮಂಜೂರಾಗಿದೆ. ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ 215 ಹಳ್ಳಿಗಳ ಪೈಕಿ 65 ಹಳ್ಳಿಗಳು ದೇವಲಾಪುರ ಪೊಲೀಸ್ ಹೊರ ಠಾಣೆಗೆ ಸೇರುತ್ತವೆ. ಮುಂದಿನ ದಿನಗಳಲ್ಲಿ ಈ ಹೊರ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದರು.

ಈ ವೇಳೆ ಎಎಸ್‌ಪಿಗಳಾದ ಈ.ಸಿ.ತಿಮ್ಮಯ್ಯ, ಗಂಗಾಧರಸ್ವಾಮಿ, ತಹಸೀಲ್ದಾರ್ ಜಿ.ಆದರ್ಶ, ಡಿವೈಎಸ್‌ಪಿ ಬಿ.ಚಲುವರಾಜು, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ, ಸಿಡಿಪಿಓ ಕೃಷ್ಣಮೂರ್ತಿ, ದೇವಲಾಪುರ ಗ್ರಾಪಂ ಅಧ್ಯಕ್ಷೆ ಚಿಕ್ಕಬೋರಮ್ಮ, ಉಪಾಧ್ಯಕ್ಷೆ ಎಚ್.ಸಿ.ಮಹಾಲಕ್ಷ್ಮೀ, ಮಾಜಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಟಿಎಪಿಸಿಎಂಎಸ್ ನಿರ್ದೇಶಕ ಎನ್.ಟಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮುಖಂಡರಾದ ಮಾವಿನಕೆರೆ ಸುರೇಶ್, ಎಂ.ಹುಚ್ಚೇಗೌಡ, ಉದಯಕಿರಣ್, ನರಸಿಂಹಮೂರ್ತಿ, ಡಿ.ಕೆ.ಸುರೇಶ್, ಪದ್ಮನಾಭ ಸೇರಿದಂತೆ ಹಲವರು ಇದ್ದರು.