ವಿಶ್ವದ ಸೆಮಿ ಕಂಡಕ್ಟರ್ ಹಬ್ ಆಗುವ ಸಾಮರ್ಥ್ಯ ಭಾರತಕ್ಕಿದೆ: ಪ್ರೊ.ವಿದ್ಯಾಶಂಕರ

| Published : Sep 03 2024, 01:44 AM IST

ವಿಶ್ವದ ಸೆಮಿ ಕಂಡಕ್ಟರ್ ಹಬ್ ಆಗುವ ಸಾಮರ್ಥ್ಯ ಭಾರತಕ್ಕಿದೆ: ಪ್ರೊ.ವಿದ್ಯಾಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ)ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಂತ್ರಜ್ಞಾನಕ್ಕೆ ಬಳಸಿಕೊಳ್ಳುವ ಮೂಲಕ ಔದ್ಯೋಗಿಕ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಕಾಣುತ್ತಿದ್ದೇವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಎಸ್‌. ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ)ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಂತ್ರಜ್ಞಾನಕ್ಕೆ ಬಳಸಿಕೊಳ್ಳುವ ಮೂಲಕ ಔದ್ಯೋಗಿಕ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಕಾಣುತ್ತಿದ್ದೇವೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಎಸ್‌. ಹೇಳಿದರು.

ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ವಿಟಿಯು ವಿದ್ಯಾರ್ಥಿ ವಿಭಾಗ ಇತ್ತೀಚೆಗೆ ಹಮ್ಮಿಕೊಂಡಿದ್ದ ಸರ್ಕ್ಯೂಟ್ ಕ್ರಾಫ್ಟಿಂಗ್ ಇಂಡಸ್ಟ್ರಿ ಲೀಡರ್ಸ್ ಜೊತೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೇಗವಾದ ಮತ್ತು ಹೆಚ್ಚು ಶಕ್ತಿಶಾಲಿ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳ ರಚನೆಯು ಸಾಮಾನ್ಯವಾಗಿ ಹೊಸ ಕಂಪ್ಯೂಟರ್‌ಗಳ ವಿನ್ಯಾಸಕ್ಕೆ ಕಾರಣವಾಯಿತು. ಇದೆ ಮುಂದುವರಿದು ಹೊಸ ಸ್ಮಾರ್ಟ್‌ಫೋನ್‌ ಮತ್ತು ಇತರೆ ಸಾಧನಗಳ ರಚನೆಗೆ ಕಾರಣವಾಯಿತು. ಈ ಕ್ಷೇತ್ರದಲ್ಲಿನ ತ್ವರಿತ ಬೆಳವಣಿಗೆ ಸೆಮಿಕಂಡಕ್ಟರ್ ಚಿಪ್ ರಚನೆಯಲ್ಲಿ ಕ್ಷಿಪ್ರ ರೂಪಾಂತರಕ್ಕೆ ಕಾರಣವಾಗುತ್ತಿದೆ. ಸೆಮಿಕಂಡಕ್ಟರ್ ಚಿಪ್ ಕ್ಷೇತ್ರವು ಒಂದು ಚಿಪ್ ಬಳಕೆಯ ವಿಧಾನದಿಂದ ನಿಧಾನವಾಗಿ ದೂರ ಸರಿಯುತಿದ್ದು ವೈವಿಧ್ಯತೆ ಮತ್ತು ನಾವೀನ್ಯತೆಯ ಹೊಸ ರಚನಾ ವಿಧಾನ ಅಳವಡಿಸಿಕೊಳ್ಳುತ್ತಿದೆ ಎಂದರು.

ಈ ರೂಪಾಂತರದ ಚಿಪ್ ಬದಲಾಗಿ ಚಿಪ್‌ಗಳ ಗುಂಪು ಚಿಪ್‌ಲೆಟ್ ಗಳ ರೂಪದಲ್ಲಿ ವಿನ್ಯಾಸಗೊಳ್ಳುತ್ತಿವೆ. ಈ ಹೊಸ ವಿಧಾನ ಶಕ್ತಿಯುತ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಈ ವಿಶೇಷ ಚಿಪ್ಲೆಟ್‌ಗಳು ಅರೆವಾಹಕ ಉತ್ಪನ್ನಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ಈ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಜ್ಞಾನವುಳ್ಳ ಪದವಿಧರರ ಅವಶ್ಯಕತೆ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಸೆಮಿಕಂಡಕ್ಟರ್ ಹಬ್ ಆಗುವ ಸಾಮರ್ಥ್ಯ ಹೊಂದಿದೆ. ಈ ಬೆಳವಣಿಗೆ ರಾಷ್ಟ್ರದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನವೀನ್ಯತೆ ಮನೋಭಾವ ಉತ್ತೇಜಿಸಲು ವಿಟಿಯುನಲ್ಲಿ ಸೆಮಿಕಂಡಕ್ಟರ್ ಚಿಪ್ ಡಿಸೈನ್ ವಿಷಯದ ಮೇಲೆ ಬಿ.ಟೆಕ್ ಕೋರ್ಸ್ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಎಸ್‌.ಅನಾಮಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ನುರಿತ ಮಾನವ ಸಂಪನ್ಮೂಲ ಕೊರತೆ ಇರುವುದರಿಂದ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಅಂತಹ ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ಹೇಳಿದರು.

ವಿಟಿಯು ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ಕೈಗಾರಿಕಾ ಕ್ರಾಂತಿ ಕುರಿತು ಪ್ರಸ್ತಾಪಿಸಿ, ರಾಷ್ಟ್ರದಲ್ಲಿರುವ ಯುವ ಸಮೂಹವನ್ನು ಸರಿಯಾಗಿ ಬಳಸಿಕೊಂಡು ಸೆಮಿಕಂಡಕ್ಟರ್ ಹಬ್ ಆಗುವ ಅವಕಾಶ ಕಳೆದುಕೊಳ್ಳಬಾರದು ಎಂದು ಹೇಳಿದರು.

ವಿಟಿಯು ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್. ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆಯ ಕನಸು ಕಾಣಬೇಕು. ಉನ್ನತ ಗುರಿ ಹೊಂದಬೇಕು ಮತ್ತು ಉದ್ಯೋಗಕ್ಕಾಗಿ ಮಾತ್ರವಲ್ಲದೆ, ಉದ್ಯಮಶೀಲತೆಯತ್ತ ಶ್ರಮಿಸಬೇಕು ಎಂದು ಕರೆ ನೀಡಿದರು. ಐಇಇಇ ಬೆಂಗಳೂರು ವಿಭಾಗದ ಕೆಎಎಸ್‌ ವಿಭಾಗದ ಅಧ್ಯಕ್ಷ ಅಯಾನ್ ದತ್ತಾ ಮಾತನಾಡಿದರು.

ವಿಟಿಯು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಅಧ್ಯಕ್ಷೆ ಡಾ.ಮೇಘನಾ ಕುಲಕರ್ಣಿ ಸ್ವಾಗತಿಸಿದರು. ಪ್ರೊ.ರವಿ ಹೊಸಮನಿ ವಂದಿಸಿದರು. ಪ್ರೊ.ಅಭಿಷೇಕ ದೇಶಮುಖ, ಉದ್ಯಮ ಪ್ರತಿನಿಧಿಗಳು ಮತ್ತು ಉತ್ತರ ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು.