ಮಾನವ ಸಂಪನ್ಮೂಲ ಸದ್ಬಳಕೆಯಿಂದ ಭಾರತ ‘ಗ್ಲೋಬಲ್‌ ಸೂಪರ್ ಪವರ್‌’

| Published : Sep 28 2024, 01:25 AM IST

ಸಾರಾಂಶ

ಆದಿತ್ಯ ಬಿರ್ಲಾ ಸಮೂಹದ ಮಾನವಸಂಪನ್ಮೂಲ ವಿಭಾಗದ ಮಾಜಿ ನಿರ್ದೇಶಕ ಸಂತೃಪ್ತ ಗುಪ್ತ ದಿಕ್ಸೂಚಿ ಭಾಷಣ ಮಾಡಿದರು. ಎನ್‌ಐಪಿಎಂ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ಎಚ್.ರಾಜಾ ಶುಭಹಾರೈಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತ ಭವಿಷ್ಯದಲ್ಲಿ ‘ಗ್ಲೋಬಲ್‌ ಸೂಪರ್‌ ಪವರ್‌’ ಆಗಬೇಕಾದರೆ ಮಾನವ ಸಂಪನ್ಮೂಲದ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಅಬ್ದುಲ್‌ ನಝೀರ್‌ ಹೇಳಿದ್ದಾರೆ.

ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನೆಲ್ ಮ್ಯಾನೇಜ್‌ಮೆಂಟ್ ವತಿಯಿಂದ ಹಮ್ಮಿಕೊಂಡ ‘ಇಂಡಿಯಾ ಅಟ್ ೨೦೪೭, ಹ್ಯೂಮನ್ ಕ್ಯಾಪಿಟಲ್ ಫಾರ್ ಎ ಡೆವೆಲಪ್ಡ್ ಇಂಡಿಯಾ’ ಕುರಿತ ಎರಡು ದಿನದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕತೆಯ ಮೂಲ ಆದಾಯ ಅಲ್ಲ, ಬಂಡವಾಳ ಆಗಬೇಕು. ಕಳೆದ ೧೦ ವರ್ಷದಲ್ಲಿ ನಮ್ಮ ದೇಶ ೫ ಆರ್ಥಿಕ ಶಕ್ತಿಗಳನ್ನು ಹಿಂದಿಕ್ಕಿದೆ. ೨೦೩೦ರಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿದ್ದೇವೆ. ಅದಕ್ಕೆ ಪೂರಕವಾಗಿ ಯುವಜನತೆಯ ಕೌಶಲಾಭಿವೃದ್ಧಿಯಾಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಜಾರಿಗೊಳಿಸಲಾಗಿದೆ.ನಾವಿಂದು ಅಮೃತಕಾಲದಲ್ಲಿ ಇದ್ದೇವೆ. ೨೦೪೭ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೧೦೦ ವರ್ಷ ಪೂರ್ಣಗೊಳ್ಳುತ್ತದೆ. ಆ ಹೊತ್ತಿಗೆ ವಿಕಸಿತ ಭಾರತವಾಗುವ ಮಹತ್ವಾಕಾಂಕ್ಷೆಯ ಗುರಿ ಇರಿಸಿಕೊಂಡಿದ್ದೇವೆ. ಒಟ್ಟು ಜಿಡಿಪಿ ಏರಿಕೆಯೊಂದಿಗೆ ಜನರ ವೈಯುಕ್ತಿಕ ಆದಾಯ ಕೂಡಾ ಏರಿಕೆಯಾಗಬೇಕಾದ ಅವಶ್ಯಕತೆ ಇದೆ ಎಂದರು.

ಭಾರತದಲ್ಲಿ ೨೫ರ ಕೆಳಹರೆಯದ ಶೇ.೫೦ರಷ್ಟು ಜನಸಂಖ್ಯೆ ಇದೆ. ನಮ್ಮಲ್ಲಿರುವ ‘ಜನಸಂಖ್ಯಾ ಲಾಭಾಂಶ’ದ ಪೂರ್ಣ ಸಾಮರ್ಥ್ಯದ ಸದ್ಬಳಕೆ ಆಗಬೇಕು. ಯುವಜನತೆಗೆ ಪೂರಕವಾದ ಸಾಮಾಜಿಕ, ಆರ್ಥಿಕ ಉತ್ತೇಜನ ಸಿಕ್ಕಿದರೆ ಅವರು ದೇಶದ ಭವಿಷ್ಯವನ್ನೇ ಪುನರ್‌ ರಚಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.ಮಾನವ ಸಂಪನ್ಮೂಲ ಬಂಡವಾಳ: ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಕಳೆದ ೨೫ ವರ್ಷಗಳಲ್ಲಿ ಮಂಗಳೂರಿನ ಸಾಮರ್ಥ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕೈಗೊಳ್ಳುವಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಫಲ ಸಿಕ್ಕಿಲ್ಲ, ಮಂಗಳೂರಿನ ನಿಜಸಾಮರ್ಥ್ಯದ ಪೂರ್ಣ ಬಳಕೆಯಾಗಲಿ, ಮಾನವ ಸಂಪನ್ಮೂಲವನ್ನು ಬಂಡವಾಳವಾಗಿ ಬಳಸುವಲ್ಲಿ ಮಂಗಳೂರು ನೈಜ ಕೇಂದ್ರವಾಗಲಿ ಎಂದು ಆಶಿಸಿದರು.

ಗುಣಮಟ್ಟದ ಶಿಕ್ಷಣ ಮುಖ್ಯ: ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಟಿ.ವಿ.ಮೋಹನ್‌ದಾಸ್ ಪೈ ಮಾತನಾಡಿ, ಈಗ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಅದರಲ್ಲಿ ಅಮೆರಿಕ, ಚೀನಾ ಹಾಗೂ ಭಾರತ ಮುಂಚೂಣಿಯಲ್ಲಿದೆ. ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕು. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಐದತ್ತು ನಿಮಿಷಗಳಲ್ಲಿ ಸಂಶೋಧನೆ ನಡೆಸಿ ವರದಿ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದರು.

ಮಾನವ ಬಂಡವಾಳವೇ ಆಸ್ತಿ: ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ಯಾಮಪ್ರಸಾದ್ ಕಾಮತ್ ಮಾತನಾಡಿ, ೨೦೪೭ರ ಅಮೃತಕಾಲದಲ್ಲಿರುವ ನಾವು ನಮ್ಮ ಯುವಜನತೆಗೆ ಕೌಶಲ, ಸೃಜನಶೀಲತೆಯ ಜೊತೆಗೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಮಹತ್ವ ನೀಡಬೇಕು ಎಂದರು.

ಆದಿತ್ಯ ಬಿರ್ಲಾ ಸಮೂಹದ ಮಾನವಸಂಪನ್ಮೂಲ ವಿಭಾಗದ ಮಾಜಿ ನಿರ್ದೇಶಕ ಸಂತೃಪ್ತ ಗುಪ್ತ ದಿಕ್ಸೂಚಿ ಭಾಷಣ ಮಾಡಿದರು. ಎನ್‌ಐಪಿಎಂ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ಎಚ್.ರಾಜಾ ಶುಭಹಾರೈಸಿದರು.

ಕಾರ್ಯದರ್ಶಿ ಬಸವರಾಜು, ಸಮ್ಮೇಳನ ಸಹ ಅಧ್ಯಕ್ಷ ಕೃಷ್ಣ ಹೆಗ್ಡೆ, ಧೀರಜ್ ಶೆಟ್ಟಿ, ಆಶಾ ಎ.ಪೈ, ಪಿ.ಪಿ.ಶೆಟ್ಟಿ, ಲಕ್ಷ್ಮೀಶ್‌ ರಾಯ್‌ ಮತ್ತಿತರರಿದ್ದರು. ಸಮ್ಮೇಳನ ಸಂಯೋಜಕ ಸ್ಟೀವನ್ ಪಿಂಟೊ ಸ್ವಾಗತಿಸಿದರು.

ದೇಶದಲ್ಲಿ ೫ ಕೋಟಿ ಕೇಸ್ ಬಾಕಿ: ಜಸ್ಟೀಸ್‌ ಅಬ್ದುಲ್‌ ನಝೀರ್‌ ಕಳವಳದೇಶದಲ್ಲಿ ನ್ಯಾಯಾಂಗದ ಮೇಲೆ ಅಪಾರ ಒತ್ತಡವಿದೆ. ಎಲ್ಲ ಕೋರ್ಟ್ ಸೇರಿದಂತೆ ೫ ಕೋಟಿ ಪ್ರಕರಣಗಳು ಬಾಕಿ ಇವೆ. ಇವುಗಳ ಇತ್ಯರ್ಥಕ್ಕೆ ೧೦-೧೫ ವರ್ಷಗಳೇ ಬೇಕಾಗಬಹುದು. ಇದರಿಂದಾಗಿ ೨೫ ಕೋಟಿ ಜನರು ತೊಂದರೆ ಎದುರಿಸುವಂತಾಗಿದೆ. ಅವರಿಗೆ ಕೌಟುಂಬಿಕ ಶಾಂತಿ, ಸಮಾಧಾನಗಳೂ ಇಲ್ಲದಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರೂ ಆಗಿರುವ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಝೀರ್‌ ಕಳವಳ ವ್ಯಕ್ತಪಡಿಸಿದರು.

ಇವುಗಳಲ್ಲಿ ಶೇ.95ರಷ್ಟು ಪ್ರಕರಣಗಳು ಹಳ್ಳಿ ಪ್ರದೇಶದಿಂದ ಬಂದಿವೆ. ಒಮ್ಮೆ ಕೇಸು ದಾಖಲಾದರೆ ಸುಲಭದಲ್ಲಿ ಇತ್ಯರ್ಥಗೊಳ್ಳುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನ್ಯಾಯದಾನ ವಿಳಂಬವಾಗಬಾರದು. ಶೇ.95ರಷ್ಟು ಕ್ರಿಮಿನಲ್‌ ಕೇಸ್‌ಗಳಲ್ಲಿ ಶಿಕ್ಷೆಯಾಗದೆ ಖುಲಾಸೆಗೊಳ್ಳುತ್ತವೆ. ಇದಕ್ಕೆ ಡಿಜಿಟಲೀಕರಣ, ಕೃತಕಬುದ್ಧಮತ್ತೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಮಾನವನ ಬುದ್ಧಿಮತ್ತೆಯಿಂದಷ್ಟೇ ಇತ್ಯರ್ಥಪಡಿಸಬೇಕಷ್ಟೆ. ಹಿಂದಿನ ಕಾಲದಲ್ಲಿ ಹಿರಿಯರು ಏನಾದರೂ ವಿವಾದ ತಲೆದೋರಿದರೆ, ‘ನಿನ್ನ ಮನೆಗೆ ಸಿವಿಲ್‌ ವ್ಯಾಜ್ಯ ಬೀಳಲಿ’ ಎಂದು ಶಾಪ ಹಾಕುತ್ತಿದ್ದರು ಎಂದು ಜಸ್ಟೀಸ್‌ ಅಬ್ದುಲ್‌ ನಝೀರ್‌ ಮೆಲುಕು ಹಾಕಿದರು.