ಸಾರಾಂಶ
ಗದಗ: ವೈವಿಧ್ಯಮಯ ರಾಷ್ಟ್ರವಾದ ಭಾರತದಲ್ಲಿ ಸಾಂಸ್ಕೃತಿಕ ಪರಂಪರೆ ಗಟ್ಟಿಯಾಗಿ ಉಳಿದಿದೆ. ಹಾಗಾಗಿಯೇ ನಮ್ಮ ದೇಶ ಸಾಂಸ್ಕೃತಿಕ ಪರಂಪರೆಯಲ್ಲಿ ಉಳಿದೆಲ್ಲ ರಾಷ್ಟ್ರಗಳಿಗಿಂತಲೂ ಮುಂದಿದೆ ಎಂದು ಡಾ. ದತ್ತಪ್ರಸನ್ನ ಪಾಟೀಲ ಹೇಳಿದರು.
ನಗರದ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಜೀವನ ದರ್ಶನ ಮಾಸಿಕ ಕಾರ್ಯಕ್ರಮ ಹಾಗೂ ಕಾರ್ತೀಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಭಾರತೀಯ ಪರಂಪರೆಗೆ ಇಂದು ದೊಡ್ಡ ಸ್ಥಾನ ಇದೆ. ಭಾರತೀಯ ಪರಂಪರೆ ಹಾಗೂ ಧರ್ಮ ಎಲ್ಲ ಧರ್ಮಗಳ ರಕ್ಷಕನಾಗಿ ನಿಂತಿದೆ. ವಿಶ್ವದ ಎಲ್ಲ ಧರ್ಮಗಳನ್ನು ಎತ್ತಿ ಹಿಡಿದಿರುವ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ, ಸವಾಲಿನ ದಿನಗಳನ್ನು ಕಾಣುತ್ತಿದೆ ಮತ್ತು ಧರ್ಮವು ಭಾರತೀಯರಲ್ಲಿ ಅಂತರ್ಗತವಾದ ಸುಪ್ತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವುದು ಕಷ್ಟ. ನಮ್ಮ ದೇಶದ ಜನರ ನಿತ್ಯಜೀವನದ ಭಾಗವಾಗಿದೆ ಅದು. ಧರ್ಮವು ಅನುಭವದ ಆಧಾರ ಹೊಂದಿದೆಯೇ ಹೊರತು ಪಾಂಡಿತ್ಯದ ಆಧಾರ ಹೊಂದಿಲ್ಲ. ಬುದ್ಧಿಜೀವಿಗಳಿಗೆ ಪಾಂಡಿತ್ಯ ಮುಖ್ಯವೇ ಹೊರತು, ಅನುಭವವಲ್ಲ. ಆದರೆ, ಸಾಮಾನ್ಯರಿಗೆ ಅನುಭವವೇ ಪ್ರಧಾನ, ಪಾಂಡಿತ್ಯವಲ್ಲ ಎಂದರು.ಪ್ರೊ. ಎಂ.ಎನ್. ಕಾಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎನ್ನುವ ಮೂಲಕ ನಾವೆಲ್ಲರೂ ಶ್ರೇಷ್ಠರಾಗುವ ಸಾಮರ್ಥ್ಯವನ್ನು ಹೊಂದಿದ್ದೇವೆ ಮತ್ತು ನಮ್ಮ ಗುರಿಗಳನ್ನು ಸಾಧಿಸಲು ನಾವು ಸಮರ್ಥರಲ್ಲ ಎಂದು ಯೋಚಿಸುವ ಮೂಲಕ ನಮ್ಮನ್ನು ನಾವು ಮಿತಿಗೊಳಿಸಬಾರದು ಎಂದರು.
ಈ ವೇಳೆ ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ಚಂದ್ರಶೇಖರ ಗಾರವಾಡ, ವಿಶ್ವನಾಥ ತೊಂತನಾಳ ಅವರನ್ನು ಸನ್ಮಾನಿಸಲಾಯಿತು.ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಬಸವರಾಜ ಸುಂಕದ, ಸಹ ಕಾರ್ಯದರ್ಶಿ ಎಂ.ಕೆ. ಲಕ್ಕುಂಡಿ, ಕೋಶಾಧ್ಯಕ್ಷ ಎಂ.ಬಿ. ಚೆನ್ನಪ್ಪಗೌಡರ್, ಆರ್.ಬಿ. ಒಡೆಯರ, ನಿರ್ದೇಶಕರಾದ ವಿ.ಆರ್. ಕುಲಕರ್ಣಿ, ಅಮರೇಶ್ ಹಾದಿ, ಕಾರ್ತಿಕ್ ಮಡಿವಾಳರ್, ಮಹಾದೇವಿ ಗೋಗೇರಿ, ರಾಧಿಕಾ ಬಂದಂ, ಬಸವರಾಜ ಹಿರೇಮಠ, ಪ್ರಭಯಸ್ವಾಮಿ ಹಿರೇಮಠ ಹಾಗೂ ಅಪಾರ ಭಕ್ತಾದಿಗಳು ಇದ್ದರು. ಸಮಿತಿಯ ನಿರ್ದೇಶಕ ಬಿ.ಎನ್. ಯರನಾಳ ಕಾರ್ಯಕ್ರಮ ನಿರೂಪಿಸಿದರು.