ಮೇ 30ರಿಂದ ಬೆಂಗಳೂರಿನಲ್ಲಿ ಇಂಡಿಯಾ ಎಂಎಸ್‌ಎಂಇ ಕಾನ್‌ಕ್ಲೇವ್

| Published : Apr 04 2025, 12:46 AM IST

ಸಾರಾಂಶ

ಶಿವಮೊಗ್ಗ: ಭಾರತ ಸರ್ಕಾರದ ಎಂಎಸ್‌ಎಂಇ ಇಲಾಖೆಯಿಂದ ಮೇ 30, 31 ಮತ್ತು ಜೂನ್ 1ರಂದು ಬೆಂಗಳೂರಿನ ತ್ರಿಪುರವಾಸಿನ ಅರಮನೆ ಮೈದಾನದಲ್ಲಿ ಎಂಎಸ್‌ಎಂಇ ಕೈಗಾರಿಕೋದ್ಯಮಿಗಳಿಗೆ ವ್ಯಾಪಾರೋದ್ಯಮ ಪ್ರೋತ್ಸಾಹಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ “ಇಂಡಿಯಾ ಎಂಎಸ್ಎಂಇ ಕಾನ್‌ಕ್ಲೇವ್ 2025” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಫ್‌ಕೆಸಿಸಿಐ ಕೈಗಾರಿಕಾ ಸಮಿತಿ ಚೇರ್ಮನ್ ಎನ್.ಸತೀಶ್ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಕಾಸಿಯಾ ಮತ್ತು ಪೀಣ್ಯಾ ಇಂಡಸ್ಟ್ರೀಸ್ ಅಸೋಷಿಯೇಶನ್ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಎಂಎಸ್‌ಎಂಇ ಕಾನ್‌ಕ್ಲೇವ್ ಹಮ್ಮಿಕೊಳ್ಳಲಾಗಿದೆ ಎಂದರು.

ಕೈಗಾರಿಕಾ ತಯಾರಿಕ ವಸ್ತುಗಳ ಪ್ರದರ್ಶನದ ನಿಮಿತ್ತ 400 ಸ್ಟಾಲ್‌ಗಳು ಇರಲಿವೆ. ಮೊದಲು ಬಂದ 60 ಸ್ಟಾಲ್‌ಗಳಿಗೆ ಶೇ.80 ರಿಯಾಯಿತಿ ಮತ್ತು ಮಹಿಳಾ ಉದ್ಯಮಿಗಳಿಗೆ, ಎಸ್.ಸಿ, ಎಸ್.ಟಿ. ಗಳಿಗೆ ಶೇ.100 ರಿಯಾಯಿತಿಯನ್ನು ಮೊದಲು ನೋಂದಣಿ ಮಾಡಿಸಿದವರಿಗೆ ಮೊದಲು ಎಂಬ ಆದ್ಯತೆಯ ಮೇರೆಗೆ ಘೋಷಿಸಿಲಾಗಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ಸ್ಟಾಲ್‌ನ ಬಾಡಿಗೆ ರಿಯಾಯಿತಿ ಸೌಲಭ್ಯವನ್ನು ಭಾರತ ಸರ್ಕಾರದ ಎಂ.ಎಸ್.ಎಂ.ಇ ಇಲಾಖೆಯಿಂದ ಮರುಪಾವತಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಅತಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಘಟಕಗಳು ಹೆಚ್ಚಿನ ಮಾಹಿತಿಯನ್ನು ಎಂ.ಎಸ್.ಎಂ.ಇ ಸಮಿತಿ ಚೇರ್ಮನ್ ಪ್ರದೀಪ್ ವಿ. ಎಲಿ - 9448137530 ಮತ್ತು ಕೈಗಾರಿಕಾಭಿವೃದ್ಧಿ ಸಮಿತಿ ಚೇರ್ಮನ್ ಜಿ.ವಿ.ಕಿರಣ್ ಕುಮಾರ್ - 9845416616 ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದು ಉದ್ದೇಶಿತ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ನಿರ್ದೇಶಕರಾದ ಗಣೇಶ ಎಂ.ಅಂಗಡಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಮಲಾಕ್ಷರಪ್ಪ, ಪ್ರದೀಪ್.ವಿ ಎಲಿ ಮತ್ತಿತರರಿದ್ದರು.