ಸಾರಾಂಶ
ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿ, ವರ್ತನೆ, ಹವ್ಯಾಸಗಳನ್ನು ನಿರ್ಧರಿಸಲು ಮತ್ತು ಸಂಸ್ಥೆಯ ಉತ್ಪನ್ನಗಳನ್ನು ತಯಾರು ಮಾಡಲು ಕೃತಕ ಬುದ್ಧಿವಂತಿಕೆ ಹೆಚ್ಚು ಪರಿಣಾಮಕಾರಿ ಎಂದು ಡಾ.ಸತ್ಯನಾರಾಯಣ ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆರ್ಥಿಕವಾಗಿ ಮುಂದುವರಿಯುತ್ತಿರುವ ಭಾರತದಂತಹ ದೇಶಕ್ಕೆ ಕೃತಕ ಬುದ್ಧಿವಂತಿಕೆ ಕೊಡುಗೆ ಅಪಾರ. ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿ, ವರ್ತನೆ, ಹವ್ಯಾಸಗಳನ್ನು ನಿರ್ಧರಿಸಲು ಮತ್ತು ಸಂಸ್ಥೆಯ ಉತ್ಪನ್ನಗಳನ್ನು ತಯಾರು ಮಾಡಲು ಕೃತಕ ಬುದ್ಧಿವಂತಿಕೆ ಹೆಚ್ಚು ಪರಿಣಾಮಕಾರಿ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಸತ್ಯನಾರಾಯಣ ಅಭಿಪ್ರಾಯಪಟ್ಟರು.ಇಲ್ಲಿನ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೃತಕ ಬುದ್ದಿ ಮತ್ತೆ ಬಳಕೆ ವಿಚಾರದಲ್ಲಿ ಚರ್ಚೆಗಳು ನಡೆಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಟಿ ತಿಪ್ಪೇರುದ್ರಸ್ವಾಮಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಕೃತಕ ಬುದ್ಧಿವಂತಿಕೆಯನ್ನು ಹಲವಾರು ಕ್ಷೇತ್ರಗಳಲ್ಲಿ ಉಪಯೋಗಿಸುತ್ತಾರೆ. ಲಭ್ಯವಿರುವ ಸಂಪನ್ಮೂಲಗಳ ಪರಿಪೂರ್ಣ ಬಳಕೆಗೆ ಇದು ಹೆಚ್ಚು ಸಹಕಾರಿ ಆಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರೊ.ರಾಜಶೇಖರಪ್ಪ ಜಿ.ಎಲ್. ಮಾತನಾಡಿ, ಮಾನವನ ಸಂಬಂಧವನ್ನು ಮತ್ತಷ್ಟು ಹತ್ತಿರಕ್ಕೆ ತರಬಲ್ಲ ಸಾಧನವಾಗಿ ಕೃತಕ ಬುದ್ಧಿವಂತಿಕೆ ಯನ್ನು ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಲೀಲಾವತಿ.ಕೆ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ ಆರ್ ಮಾತಾಡಿದರು. ಆಂತರಿಕ ಗುಣಮಟ್ಟ ಕೋಶದ ಸಂಚಾಲಕರಾದ ಪ್ರೊ.ಸುರೇಶ್ ಜಿ. ಡಿ, ಪ್ರಾಧ್ಯಾಪಕ ಡಾ ಭಾನುಪ್ರಕಾಶ ಕೆ.ಎ ಉಪಸ್ಥಿತರಿದ್ಧರು. ಡಾ.ಶಿವಕುಮಾರ್ ಬಿ. ಸ್ವಾಗತಿಸಿದರು, ಫಾತಿಮ ಸುಫಿಯ ನಿರೂಪಿಸಿದರು.