ಲಸಿಕೆ ಹಾಕಿಸಿ ಪೋಲಿಯೋದಿಂದ ಮಕ್ಕಳನ್ನು ರಕ್ಷಿಸಿ: ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್

| Published : Mar 04 2024, 01:20 AM IST / Updated: Mar 04 2024, 01:21 AM IST

ಲಸಿಕೆ ಹಾಕಿಸಿ ಪೋಲಿಯೋದಿಂದ ಮಕ್ಕಳನ್ನು ರಕ್ಷಿಸಿ: ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ನಗರದ ಸರ್ಕಾರಿ ಸಾರ್ವಜನಿಕ ಜೆ.ಸಿ.ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಕಾಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮೂಲಕ ತಹಸೀಲ್ದಾರ್ ಎಂ.ಜಿ ಸಂತೋಷ್ ಕುಮಾರ್ ಚಾಲನೆ ನೀಡಿದರು.

ಪಲ್ಸ್ ಪೊಲಿಯೋ ಲಸಿಕೆ ಹಾಕುವ ಕಾಯಕ್ರಮಕನ್ನಡಪ್ರಭ ವಾರ್ತೆ ಅರಸೀಕೆರೆ

ಪೊಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಸ್ವಯಂ ಸೇವಕರಿಗೆ ಸಹಕರಿಸಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವುದರ ಮೂಲಕ ಮಕ್ಕಳನ್ನು ಆರೋಗ್ಯಪೂರ್ಣ ಸದೃಢರನ್ನಾಗಿಸಿ ಎಂದು ತಹಸೀಲ್ದಾರ್ ಎಂ.ಜಿ ಸಂತೋಷ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಜೆ.ಸಿ.ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರೋಟರಿ ಸಂಸ್ಥೆ ಮತ್ತು ಇನ್ನರ್ ವ್ಹೀಲ್ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಕಾಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ಪ್ರತಿ ಮನುಷ್ಯನಿಗೆ ಆರೋಗ್ಯ ಭಾಗ್ಯವೇ ಒಂದು ವರದಾನವಾಗಿದೆ. ಈ ವರದಾನ ನಮ್ಮದಾಗಿಸಿಕೊಳ್ಳುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು. ವಿಶ್ವ ಸಂಸ್ಥೆ ಕರೆ ನೀಡಿದ್ದ ಪೊಲಿಯೋ ಮುಕ್ತ ವಿಶ್ವಕ್ಕಾಗಿ ನಡೆಸಿದ ಹೋರಾಟದ ಫಲ ಇಂದು ಪೊಲಿಯೋ ಎಂಬ ಮಹಾಮಾರಿ ಮರೆಯಾಗುತ್ತ ಬಂದಿದೆ. ಆದರೂ ಈ ರೋಗವನ್ನು ಹತ್ತಿಕ್ಕಲು ಐದು ವರ್ಷಗಳ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವುದು ಪ್ರತಿ ಕುಟುಂಬದ ಪೋಷಕರ ಕರ್ತವ್ಯವಾಗಿದೆ.ಎಂದರು

ಇಂದು ಚಾಲನೆ ನೀಡಲಾಗಿರುವ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಕಾರ್ಯಕ್ರಮದ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ವಯಂ ಸೇವಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಸ್ಥಳಿಯ ಆರೋಗ್ಯ ಕೇಂದ್ರಗಳಲ್ಲಿ, ಎಲ್ಲ ಧಾರ್ಮಿಕ ಸ್ಥಳಗಳು, ಬಸ್ ಮತ್ತು ರೈಲು ನಿಲ್ದಾಣ, ಅಂಗನವಾಡಿ ಕೇಂದ್ರಗಳು ಹಾಗೂ ಸಾರ್ವಜನಿಕ ಸ್ಥಳಗಳು ಸೇರಿದಂತೆ ಮನೆ ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ತಾಲೂಕಿನ ೨೧೦೭೯ ಮಕ್ಕಳು ಈ ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಲಿದ್ದಾರೆ. ತಾಲೂಕಿನಾದ್ಯಂತ ೧೬೦ ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ನಗರದಲ್ಲಿ ನಾಲ್ಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೊಷಕರು ಇದನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳನ್ನು ಪೊಲಿಯೋ ಮುಕ್ತರನ್ನಾಗಿ ಮಾಡಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಆರೋಗ್ಯ ಇಲಾಖೆಯ ಮೂಲಕ ಪೊಲಿಯೋ ನಿರ್ಮೂಲನೆಗಾಗಿ ಅವಿರತ ಹೋರಾಟವನ್ನು ಮಾಡಲಾಗುತ್ತಿದೆ. ಈ ಹೋರಾಟದ ಹಿಂದೆ ನೂರಾರು ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸುವುದರ ಮೂಲಕ ಈ ಪೊಲಿಯೋ ಪಿಡುಗನ್ನು ನಿರ್ಮೂಲನೆ ಮಾಡಲು ಸಹಕಾರವನ್ನು ನೀಡುತ್ತಿವೆ. ನಗರದಲ್ಲಿ ೩೭೫೦ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೧೭೩೨೯ ಮಕ್ಕಳನ್ನು ಗುರುತಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ೧೪೨ ಮತ್ತು ನಗರ ಪ್ರದೇಶಗಳಲ್ಲಿ ೧೨ ಗಂಡಾಂತರ ಪ್ರದೇಶ ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ೧೪೦ ಮತ್ತು ನಗರ ಪ್ರದೇಶಗಳಲ್ಲಿ ೨೦ ಪೊಲಿಯೋ ಬುತ್‌ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಬೂತ್‌ಗಳಲ್ಲೂ ಒಟ್ಟು ೮೩೩ ವ್ಯಾಕ್ಸಿನೇಟರ್‌ಗಳು ಇದ್ದು, ೩೨ ಮೇಲ್ವಿಚಾರಕರಿದ್ದಾರೆ. ತಾಲೂಕಿನಲ್ಲಿರುವ ೨೭೫ ಆಶಾ ಕಾರ್ಯಕರ್ತೆಯರು, ೪೦೪ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದರು.

ಜೆ.ಸಿ.ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸುರೇಶ್, ಡಾ ರಜನಿ, ಸಿಡಿಪಿಒ ಶಂಕರಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ದರ್ಶನ್, ವಿಶ್ವನಾಥ್, ಜಿಲ್ಲಾ ಗೌರ್ನರ್ ಯೋಗಿಲಾಚಾರ್, ಪದಾಧಿಕಾರಿ ಖುರೇಷಿ, ಕಸಬಾ ರಾಜಸ್ವ ಓಬಳೇಶ್, ಇನ್ನರ್ ವ್ಹೀಲ್ ಸಂಸ್ಥೆ ಕಾರ್ಯದರ್ಶಿ ಹೇಮಾ ನಾಗರಾಜು, ಪದಾಧಿಕಾರಿಗಳಾದ ಸಂದ್ಯಾ ವಿಶ್ವನಾಥ್, ಹೇಮ ನಾಗರಾಜು, ವಿಜಯಲಕ್ಷ್ಮೀ, ರಂಜಿತ ವಿನಯ್, ರೇಖಾ ಜಿತೇಂದ್ರ ಇದ್ದರು.

ಫೋಟೋ: ಅರಸೀಕೆರೆ ನಗರದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.