ಸಾರಾಂಶ
ಉಡುಪಿ : ಭಾರತಕ್ಕೆ ಇಂದು ಬೇಕಾಗಿರುವುದು ಕೃಷ್ಣನ ಆದರ್ಶಗಳು, ಕೃಷ್ಣನನ್ನು ಮತ್ತೆ ಮತ್ತೆ ಅಧ್ಯಯನ ಮಾಡುವುದು ಮತ್ತು ಆತನ ಆದರ್ಶಗಳಂತೆ ನಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಕರೆ ನೀಡಿದ್ದಾರೆ.
ಅವರು ಬುಧವಾರ ಉಡುಪಿ ಕೃಷ್ಣಮಠದ ರಾಜಂಗಣದಲ್ಲಿ ಕೃಷ್ಣ ಜನ್ಮಾಷ್ಟಮಿ ಸಪ್ತೋತ್ಸವದ ಕೊನೆಯ ದಿನದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೃಷ್ಣನನ್ನು ನಾವು ಮನೋರಂಜನೆಯ ಪಾತ್ರವಾಗಿ ನೋಡುತ್ತಿದ್ದೇವೆ. ಪುರಾಣಗಳು ಆತನನ್ನು ಪವಾಡ ಪುರುಷನನ್ನಾಗಿ ತೋರಿಸುತ್ತವೆ, ಆತ ತತ್ವಜ್ಞಾನಿಯಾಗಿದ್ದ ನಿಜ, ರಾಜತಾಂತ್ರಿಕನಾಗಿದ್ದುದೂ ನಿಜ. ಆದರೆ ಅದೆಲ್ಲಕ್ಕಿಂತ ಆತನೊಬ್ಬ ಮಹಾದಾರ್ಶನಿಕನಾಗಿದ್ದ, ತನ್ನ ಕಾಲಕ್ಕಿಂತ ಸಾವಿರ ವರ್ಷದ ನಂತರ ಸಂಭವಿಸುವುದನ್ನು ಆತ ಗೀತೆಯಲ್ಲಿ ಹೇಳಿದ್ದಾನೆ. ಭಾರತದಲ್ಲಿ ಅದೇ ನಡೆಯುತ್ತಿದೆ. ಆದ್ದರಿಂದ ಭಾರತಕ್ಕೆ ಈಗ ಬೇಕಾಗಿರುವುದು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವವರು ಹೊರತು ಸೋಮಾರಿಗಳಲ್ಲ ಎಂದವರು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡುತ್ತಾ, ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸರಿಯಾಗಿ ಹಿಂದಕ್ಕೆ ನೀಡಿದರೆ ಮಾತ್ರ ಬ್ಯಾಂಕ್ ಚೆನ್ನಾಗಿರುತ್ತದೆ, ಅದೇ ರೀತಿ ನಾನು ಈ ಪ್ರಪಂಚದಿಂದ ಪಡೆದುದನ್ನು ಹಿಂದಕ್ಕೆ ನೀಡಿದರೆ ಮಾತ್ರ ಪ್ರಪಂಚ ಉಳಿಯುತ್ತದೆ. ಈ ಕರ್ತವ್ಯ ಐಚ್ಛಿಕವಲ್ಲ, ಕಡ್ಡಾಯವಾದುದು ಎಂದರು.
ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಸಾನಿಧ್ಯ ವಹಿಸಿದ್ದರು. ಸರಸ್ವತಿ ಸಮ್ಮಾನ್ ಪುರಸ್ಕೃತ ಕವಿ ಪ್ರಧಾನ್ ಗುರುದತ್, ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ದಂಪತಿ, ವಿದ್ವಾಂಸ ಶ್ರೀನಿವಾಸ ಉಪಾಧ್ಯ ದಂಪತಿ, ಗುಜರಾತಿನ ಹಿರಿಯ ಪೊಲೀಸ್ ಅಧಿಕಾರಿ ನರಸಿಂಹ ಕೋಮಲ್ ಮುಂತಾದವರು ವೇದಿಕೆಯಲ್ಲಿದ್ದರು. ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.
ಸ್ವಾತಂತ್ರ್ಯ ಕಾಲದಲ್ಲಿ ಮಹಾತ್ಮಾ ಗಾಂಧೀಜಿ ಅವರು ಅಹಿಂಸೆಯನ್ನು ಬೋಧಿಸಿದರು, ದೇಶದ ಪ್ರಥಮ ಪ್ರಧಾನಿ ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡರು, ನಾವು ಅಹಿಂಸಾವಾದಿಗಳಾದರೆ ಯಾರೂ ನಮ್ಮ ತಂಟೆಗೆ ಬರುವುದಿಲ್ಲ ಎಂದು ಭಾವಿಸಿ ಸೈನ್ಯಕ್ಕೆ ಬೇಕಾದ ಅನುದಾನ ನೀಡಲಿಲ್ಲ, ಸೈನಿಕರ ಬಳಿ ಬೂಟು, ಮದ್ದುಗುಂಡುಗಳಿರಲಿಲ್ಲ, ಪರಿಣಾಮ ಚೀನಾದವರು ಬಂದು ನಮ್ಮ ತುಳಿದು ಹೋದರು ಎಂದು ಬೈರಪ್ಪ, ಈಗ ಪರಿಸ್ಥಿತಿ ಬದಲಾಗಿದೆ, ಸೈನ್ಯಕ್ಕೆ ಬೇಕಾದ ಸಲಕರಣೆಗಳನ್ನು ನಾವೆ ತಯಾರಿಸುವಂತಾಗಿದೆ ಎಂದು ಎಸ್.ಎಲ್.ಭೈರಪ್ಪ ಶ್ಲಾಘಿಸಿದರು.