ಇಂಡಿಯಾ-ಪಾಕ್ ಯುದ್ಧ : ಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಲು ಸೂಚನೆ

| Published : May 13 2025, 01:22 AM IST

ಸಾರಾಂಶ

ಜಿಲ್ಲೆಯಲ್ಲಿರುವ ಸೂಕ್ಷ್ಮ ಪ್ರದೇಶಗಳನ್ನು ಪಟ್ಟಿ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಎಲ್ಲಾ ತಾಲೂಕು ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಇಂಡಿಯಾ-ಪಾಕಿಸ್ತಾನ ಯುದ್ಧ ನಡೆಯುತ್ತಿರುವುದರಿಂದ ಪಾಕಿಸ್ತಾನವು ಯಾವುದೇ ಸಮಯದಲ್ಲಿ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಜಿಲ್ಲೆಯಲ್ಲಿರುವ ಸೂಕ್ಷ್ಮ ಪ್ರದೇಶಗಳನ್ನು ಪಟ್ಟಿ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಎಲ್ಲಾ ತಾಲೂಕು ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು. ಭಾರತ-ಪಾಕಿಸ್ತಾನ ನಡುವ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಆಡಳಿತ ಕಟ್ಟಡ, ವಿದ್ಯುತ್ ಸ್ಥಾವರ, ಬಸ್ ನಿಲ್ದಾಣ, ಗ್ಯಾಸ್ ಪೈಪ್‌ಲೈನ್, ಹೆಚ್ಚಿನ ಜನಸಂದಣಿ ಸೇರುವ ದೇವಾಲಯ, ಮಸೀದಿ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಇಂಡಿಯಾ-ಪಾಕಿಸ್ತಾನ ಯುದ್ಧ ಸಂದರ್ಭವನ್ನು ಬಳಸಿಕೊಂಡು ಕೆಲವರು ಆಹಾರ ಕೊರತೆಯಿದೆ ಎಂಬ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನ್ಯಾಯಬೆಲೆ ಅಂಗಡಿ, ಎಪಿಎಂಸಿಗಳಲ್ಲಿ ದಾಸ್ತಾನು ಇರುವ ಆಹಾರ ಧಾನ್ಯಗಳ ಪಟ್ಟಿ ಮಾಡಬೇಕೆಂದರಲ್ಲದೆ, ಅಕ್ರಮವಾಗಿ ಆಹಾರ ಧಾನ್ಯಗಳ ದಾಸ್ತಾನು ಮಾಡಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರಿಗೆ ಸೂಚನೆ ನೀಡಿದರು. ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ರಜೆ ಮೇಲೆ ತೆರಳಿರುವ ಅಧಿಕಾರಿ/ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದರಲ್ಲದೆ, ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿರುವ ಐಸಿಯು ಘಟಕ, ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯಲ್ಲಿರುವ ಗುಬ್ಬಿ ಎಚ್‌ಎಎಲ್ ಹೆಲಿಕಾಪ್ಟರ್ ಘಟಕ, 24 ಕಿ.ಮೀ. ಅಂತರದ ತುರುವೇಕೆರೆ-ಕುಣಿಗಲ್ ತಾಲೂಕು ಮಾರ್ಗದಲ್ಲಿ ನಿರ್ಮಿಸಿರುವ ಎಲ್‌ಪಿಜಿ ಗ್ಯಾಸ್ ಸಂಪರ್ಕ ಲೈನ್, ಪಾವಗಡ ಸೋಲಾರ್ ಪ್ಲಾಂಟ್, ಮಾರ್ಕೋನಹಳ್ಳಿ ಜಲಾಶಯ, ಕೈಗಾರಿಕಾ ಪ್ರದೇಶದಂತಹ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ದಾಳಿ ಸಂದರ್ಭದಲ್ಲಿ ಸಾರ್ವಜನಿಕರು ಅಡಗಿ ಕುಳಿತುಕೊಳ್ಳುವ, ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಗ್ನಿಶಾಮಕ, ಆರೋಗ್ಯ, ಬೆಸ್ಕಾಂ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ದಾಳಿ ಕುರಿತು ಅಣಕು ಪ್ರದರ್ಶನದ ಮೂಲಕ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ನಿರ್ದೇಶಿಸಿದರು. ಯುದ್ಧ ಪರಿಸ್ಥಿತಿ ಬಂದಾಗ 24/7 ಕಾರ್ಯ ನಿರ್ವಹಿಸಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರಲ್ಲದೆ, ತಾಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ತೆರೆಯಬೇಕು. ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಇಂಡಿಯಾ-ಪಾಕ್ ಯುದ್ಧಕ್ಕೆ ಸಂಬಂಧಿಸಿದಂತೆ ಕೆಲವು ಸಮಾಜ ಘಾತುಕ ಶಕ್ತಿಗಳು ಹಳೆಯ ವಿಡಿಯೋ ತುಣುಕುಗಳನ್ನು ಜಾಲತಾಣಗಳಲ್ಲಿ ಬಿತ್ತರಿಸಿ ಜನರಲ್ಲಿ ಆತಂಕ ಮೂಡಿಸುವ ಪ್ರಯತ್ನ ಮಾಡುತ್ತಿವೆ. ಸುಳ್ಳು ವದಂತಿಗಳಿಂದ ಜನರು ಗಾಬರಿಗೊಳ್ಳುವುದರಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು. ಸುಳ್ಳು ವದಂತಿಗಳನ್ನು ಪ್ರಸಾರ ಮಾಡುವ ಮಾಧ್ಯಮಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನುಮಾನಾಸ್ಪದ ಹಾಗೂ ತಮ್ಮದಲ್ಲದ ವಸ್ತುಗಳನ್ನು ಯಾರೂ ಮುಟ್ಟಬಾರದು. ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಅಸ್ಗರ್ ಬೇಗ್, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.