ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ-ಹಿರೇಗೌಡ್ರ

| Published : Jul 09 2025, 12:18 AM IST

ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ-ಹಿರೇಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದಲ್ಲಿಯೇ ಭಾರತವು ಹೈನುಗಾರಿಕೆ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ್ದು, ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಂಡಳದ ನಿರ್ದೇಶಕ ಎಚ್. ಜಿ. ಹಿರೇಗೌಡ್ರ ಹೇಳಿದರು.

ಗದಗ: ವಿಶ್ವದಲ್ಲಿಯೇ ಭಾರತವು ಹೈನುಗಾರಿಕೆ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ್ದು, ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಂಡಳದ ನಿರ್ದೇಶಕ ಎಚ್. ಜಿ. ಹಿರೇಗೌಡ್ರ ಹೇಳಿದರು.

ನಗರದ ಪಶುವೈದ್ಯಕೀಯ ಪಾಲಿಕ್ಲಿನಿಕ್ ಸಭಾಭವನದಲ್ಲಿ ಮಂಗಳವಾರ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ, ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಹಾಗೂ ಕೆ.ಎಂ.ಎಫ್ ಧಾರವಾಡ ಸಂಯುಕ್ತಾಶ್ರಯದಲ್ಲಿ ಗದಗ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ನಡೆದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದನೆಯಲ್ಲಿ ರಾಜ್ಯದ ಹೈನುಗಾರಿಕೆ ಉತ್ತಮವಾಗಿ ಸಾಗುತ್ತಿದೆ. ಹೈನುಗಾರಿಕಾ ವಲಯ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಆದ್ದರಿಂದ ದೇಶದ ಆರ್ಥಿಕತೆಗೆ ಪೂರಕವಾಗಿ ಒತ್ತು ನೀಡಲು ಗ್ರಾಮೀಣ ಪ್ರದೇಶದ ಹೈನುಗಾರಿಕೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಲು ಉತ್ಪಾದಕರು ಹೆಚ್ಚಿನ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ, ಉತ್ಪಾದನೆ ಹೆಚ್ಚಾಗಬೇಕು ಅದರಿಂದ ಸಂಘವು ಹೆಚ್ಚಿನ ಲಾಭ ಹೊಂದಲು ಸಾಧ್ಯವಾಗುತ್ತದೆ. ಈ ಆಯಾಮಗಳಲ್ಲಿ ಹೊಸ ಯೊಜನೆಗಳನ್ನು ಕೈಗೊಳ್ಳಬೇಕಾಗಿದೆ. ಹಾಲಿನ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡಿ, ಗೋ ವಿನಿಂದ ಗ್ರಾಹಕರವರೆಗೆ ಡೇರಿ ತಂತ್ರಜ್ಞಾನ ವಿಶ್ವ ಹೈನೋದ್ಯಮವು ತನ್ನ ಸುದೀರ್ಘ ಅಭಿವೃದ್ಧಿಯ ಹಾದಿಯಲ್ಲಿ ಕಾಲಕಾಲಕ್ಕೆ ಅಗತ್ಯವಿದ್ದ ಡೇರಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹಾಲು ಉತ್ಪಾದಕರ ಸಮುದಾಯಕ್ಕೆ ಅಗತ್ಯ ಸೇವಾ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಾಲು ಮತ್ತು ಅದರ ಉತ್ಪನ್ನಗಳನ್ನು ಒದಗಿಸುತ್ತಾ ಬಂದಿದೆ. ಜಾಗತಿಕ ಡೈರಿ ಕ್ಷೇತ್ರವು ಪಶುಪಾಲನೆಯಿಂದ ಗ್ರಾಹಕರವರೆಗಿನ ತನ್ನ ಕಾರ್ಯಚಟುವಟಿಕೆಯಲ್ಲಿನ ಶಕ್ತಿ, ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿನ ಪಶುಪಾಲನೆಯಿಂದ ಆರಂಭವಾಗುವ ಹೈನೋದ್ಯಮದ ಕಾರ್ಯವ್ಯಾಪ್ತಿಯು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಗತ್ಯವಿರುವ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವವರೆಗೆ ವಿಸ್ತಾರಗೊಂಡಿದೆ. ವಿಶ್ವ ಇಂದು ಹೆಚ್ಚುತ್ತಿರುವ ಜನಸಂಖ್ಯೆಗಣುಗುಣವಾಗಿ ಅಗತ್ಯವಿರುವ ಆಹಾರ ಸರಬರಾಜಿನ ಸಮಸ್ಯೆಯನ್ನು ಎದುರಿಸುತ್ತಿರುವುದಲ್ಲದೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅವಶ್ಯವಿರುವ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯು ಸವಾಲನ್ನು ಸಮರ್ಥವಾಗಿ ನಿಭಾಯಿಸಬೇಕಾದ ಅನಿವಾರ್ಯತೆಯಲ್ಲಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ಕೆ.ಎಂ.ಎಫ್ ನಿಂದ ಸಾಧ್ಯವಾಗಿದೆ ಎಂದರು.ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಎಚ್.ಬಿ. ಹುಲಗಣ್ಣವರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂದು ಆಧುನಿಕ ತಂತ್ರಜ್ಞಾನವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದು, ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿನ ಪಶು ಆಹಾರ ಉತ್ಪಾದನೆ, ಪಶು ವೈದ್ಯಕೀಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲಾ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ವಿಸ್ತರಿಸಿಕೊಳ್ಳಲಾಗಿದೆ. ಇನ್ನು ಹಾಲನ್ನು ಶೇಖರಿಸಿದ ನಂತರ ಅದರ ಸಂಸ್ಕರಣೆ, ಹಾಲಿನ ಉತ್ಪನ್ನಗಳೊಂದಿಗೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿಯೂ ತಂತ್ರಜ್ಞಾನವನ್ನು ಡೇರಿ ಕ್ಷೇತ್ರವು ಅಳವಡಿಸಿಕೊಂಡಿದೆ. ಇತ್ತೀಚಿನ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದತ್ತಲೂ ಗಮನ ಹರಿಸಿರುವ ಹೈನೋದ್ಯಮ ಕ್ಷೇತ್ರವು ತನ್ನ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ಉತ್ಪಾದನಾ ಮತ್ತು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ ಯಶಸ್ಸು ಕಂಡಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಅರವಿಂದ ಎನ್. ನಾಗಜ್ಜನವರ, ಯೂನಿಯನ್‌ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿದರು.

ಈ ವೇಳೆ ಹೈನುಗಾರಿಕೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಡಾ. ವೀರೇಶ ತರಲಿ, ಶುದ್ಧ ಹಾಗೂ ಅಧಿಕ ಹಾಲು ಉತ್ಪಾದನೆ ಕುರಿತು ಡಾ. ಜಗದೀಶ್ ಎಸ್.ಮಟ್ಟಿ, ಪಶು ಆಹಾರ ಮತ್ತು ಮೇವಿನ ಬೆಳೆಗಳ ಕುರಿತು. ಡಾ. ಎಂ.ಬಿ.ಮಡಿವಾಳರ ಅವರು ಉಪನ್ಯಾಸ ನೀಡಿದರು.

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಾಯಕ ನಿಬಂಧಕಿ ಪುಷ್ಪಾ ಕೆ. ಕಡಿವಾಳ, ಮುಖ್ಯ ಪಶುವೈದ್ಯಾಧಿಕಾರಿ ಎಚ್.ವಾಯ್. ಹೊನ್ನಿನಾಯ್ಕರ, ಡಾ. ಹೀರಾಲಾಲ ಜಿನಗಿ, ಡಾ. ಆರ್.ವಾಯ್. ಗುರಿಕಾರ, ಪ್ರಸನ್ನ ಪಟ್ಟೇದ ಹಾಗೂ ಇತರರು ಇದ್ದರು. ಕೇದಾರಸ್ವಾಮಿ ಶಿರಹಟ್ಟಿಮಠ ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ದಿಲೀಪ್ ಆಯ್.ನದಾಫ ವಂದಿಸಿದರು.