ಸಾರಾಂಶ
ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ಸಮಸ್ತ ಭಾರತೀಯರ ಪರವಾಗಿ ಬಿಗ್ ಹ್ಯಾಟ್ಸಫ್ ಸಹಿತ ಅಭಿನಂದನೆಗಳು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರಗಾಮಿಗಳ ನೆಲೆಯನ್ನು ಧ್ವಂಸಗೈದು ಪಹಲ್ಗಾಮ್ ಭಯೋತ್ಪಾದಕ ಕೃತ್ಯಕ್ಕೆ ಸೇಡು ತೀರಿಸಿಕೊಂಡು ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಸೈನಿಕರಿಗೆ ಹಾಗೂ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ಸಮಸ್ತ ಭಾರತೀಯರ ಪರವಾಗಿ ಬಿಗ್ ಹ್ಯಾಟ್ಸಫ್ ಸಹಿತ ಅಭಿನಂದನೆಗಳು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.ಧರ್ಮಾಧಾರಿತ ಭಯೋತ್ಪಾದಕ ದಾಳಿ ನಡೆಸಿದ ಹೇಡಿ ಉಗ್ರಗಾಮಿಗಳಿಗೆ ಹಾಗೂ ಅವರಿಗೆ ಆಶ್ರಯ-ನೆರವು ನೀಡುವ ಪಾಕಿಸ್ತಾನಕ್ಕೆ ಇದು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಪಾಠವಾಗಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರಗಾಮಿಗಳ ನೆಲೆಯ ಮೇಲೆಯೇ ಕರಾರುವಕ್ಕಾಗಿ ದಾಳಿ ನಡೆಸಿ ಉಗ್ರಸಂಹಾರ ನಡೆಸಲಾಗಿದ್ದು ಒಬ್ಬೇ ಒಬ್ಬ ಜನಸಾಮಾನ್ಯನಿಗೂ ಯಾವುದೇ ಹಾನಿಯಾಗಿಲ್ಲದ್ದು ಭಾರತದ ಸೇನೆಯ ಶಕ್ತಿ ಹಾಗೂ ಕಾರ್ಯಕ್ಷಮತೆಯಾಗಿದೆ ಎಂದರು.
ಉಗ್ರರಿಗೆ ಮರಣ ದಂಡನೆ:ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನರಮೇಧ ನಡೆಸಿ ಹಲವಾರು ಹೆಣ್ಣು ಮಕ್ಕಳ ಸಿಂಧೂರ ಕಸಿದುಕೊಂಡ ಉಗ್ರರಿಗೆ ತಕ್ಕ ಪಾಠ ಕಲಿಸಲು ಪ್ರತಿಯಾಗಿ ಭಾರತ ಸರ್ಕಾರ ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಮೂಲಕ ಯಶಸ್ವಿಯಾಗಿ ದಾಳಿ ನಡೆಸಿ, ಉಗ್ರರ ಮೃತ ದೇಹವೂ ಗುರುತಿಸಲಾಗದಷ್ಟು ಭೀಕರ ಮರಣದಂಡನೆ ನೀಡಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಇದು ಉಗ್ರಗಾಮಿಗಳನ್ನು ಪೋಷಿಸುವ ರಾಷ್ಟ್ರಗಳಿಗೆ, ಭಾರತದ ಒಳಗಡೆಯೂ ಉಗ್ರಗಾಮಿಗಳಿಗೆ ಕುಮ್ಮಕ್ಕು, ಹಣ ಸಹಾಯ ನೀಡುವ ದೇಶದ್ರೋಹಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಲು ತಿಳಿದಿದೆ. ಜಾಗತಿಕವಾಗಿ ಶಾಂತಿಯನ್ನು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೂಡ ಬದ್ಧವಾಗಿದೆ ಎಂದು ತೋರಿಸಿಕೊಟ್ಟಿದೆ. ಭಾರತ ಇದೀಗ ಪಾಕಿಸ್ತಾನದ ಮೇಲೆ ನಡೆಸಿರುವ ದಾಳಿ ಸೀಮಿತವಾಗಿರುವುದಾದರೂ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಮತ್ತೆ ಮತ್ತೆ ತೋರಿಸಿದಲ್ಲಿ ಮುಂದಿನ ಬಾರಿಯ ಆಕ್ರಮಣ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವುದರೊಂದಿಗೆ ಪೂರ್ಣಗೊಳಿಸಬೇಕು ಎಂದು ಡಾ.ಭರತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.