India's Steel Woman Indira Gandhi: Syed

ಕನ್ನಡಪ್ರಭ ವಾರ್ತೆ ಚಳ್ಳಕೆರೆದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ, ಭಾರತದ ಉಕ್ಕಿನ ಮಹಿಳೆ ಎಂದೇ ಜಗತ್ಪ್ರಸಿದ್ಧರಾಗಿರುವ ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿ ಅವರ 42ನೇ ಪುಣ್ಯದಿನದ ಅಂಗವಾಗಿ ನಗರದ ಶಾಸಕರ ಭವನದಲ್ಲಿ ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಗೌರವ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಹಿರಿಯ ಹೋರಾಟಗಾರರೂ ಆದ ಎಸ್.ಎಚ್. ಸೈಯ್ಯದ್ ಮಾತನಾಡಿ, ಈ ದೇಶದಲ್ಲಿ ಅತ್ಯಂತ ಕಡುಬಡವರ ಪರವಾಗಿ ತನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ ಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಎಂದರು.

20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಬಡಜನರ ಪರವಾದ ಆಡಳಿತ ಕೊಟ್ಟವರು. ಎಂತಹ ಸಮಸ್ಯೆ ಎದುರಾದರೂ ದಿಟ್ಟತನದಿಂದ ಹೋರಾಡುವ ಶಕ್ತಿ ಅವರಲ್ಲಿತ್ತು. ಆದ್ದರಿಂದಲೇ ಅವರನ್ನೂ ಉಕ್ಕಿನ ಮಹಿಳೆ ಎಂಬುದಾಗಿ ಕರೆಯಲಾಗಿತ್ತು ಎಂದು ವಿವರಿಸಿದರು. ಇಂದಿರಾಗಾಂಧಿ ಅವರು ಕೇವಲ ಒಬ್ಬ ಪ್ರಧಾನ ಮಂತ್ರಿಯಾಗಿರದೆ, ಈ ದೇಶದ ಕೋಟ್ಯಂತರ ಬಡವರು, ದೀನದಲಿತರು ಹಾಗೂ ಮಹಿಳೆಯರ ಧ್ವನಿಯಾಗಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದುಪಡಿಸುವಿಕೆ ಹಾಗೂ ಬಡತನ ನಿರ್ಮೂಲನೆ ಯಂತಹ ಕ್ರಾಂತಿಕಾರಿ ಯೋಜನೆಗಳ ಮೂಲಕ ದೇಶದ ಆರ್ಥಿಕತೆಯನ್ನು ತಳಮಟ್ಟದ ಜನರಿಗೂ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಕೃಷಿ ವಲಯದಲ್ಲಿ ಹಸಿರು ಕ್ರಾಂತಿ ತಂದು ದೇಶವನ್ನು ಆಹಾರ ಸ್ವಾವಲಂಬನೆಯನ್ನಾಗಿ ಮಾಡಿದ ಮಹಾನ್ ನಾಯಕಿ ಎಂದು ಅವರ ಆಡಳಿತ ವೈಖರಿಯನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಮುಖಂಡರು ದಿವಂಗತ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕಾರ್ಯಕ್ರಮದ ನೇತೃತ್ವವನ್ನು ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ವೀರಭದ್ರಯ್ಯ ಹಾಗೂ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ ವಹಿಸಿದ್ದರು. ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೀತಾಬಾಯಿ ಮತ್ತು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಹಿರಿಯ ಮುಖಂಡರಾದ ಟಿ.ಎ.ಟಿ. ಪ್ರಭುದೇವ, ರಂಗಕರ್ಮಿ ಪಿ. ತಿಪ್ಪೇಸ್ವಾಮಿ, ಅನ್ವರ್ ಮಾಸ್ಟರ್ ಮತ್ತು ವೀರಭದ್ರ ಭಾಗ್ಯಮ್ಮ, ಓಬಜ್ಜಿ, ಸುಜಾತ, ಇಂದಿರಾ, ಕವಿತಾ ದಳವಾಯಿ ಮೂರ್ತಿ, ನಿಂಗಮ್ಮ ಹಾಗೂ ರೇಣುಕಮ್ಮ ಉಪಸ್ಥಿತರಿದ್ದರು.

ಪೋಟೋ:

ಚಳ್ಳಕೆರೆ ಶಾಸಕರ ಭವನದಲ್ಲಿ ಶನಿವಾರ ಚಳ್ಳಕೆರೆ ಹಾಗೂ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 42ಪುಣ್ಯಸ್ಮರಣೆ ಅಂಗವಾಗಿ ಪುಷ್ಪಾರ್ಚನೆ ಮಾಡಿದರು.