ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ/ಸಾಗರ
ಅಯೋಧ್ಯೆಯಲ್ಲಿ ಶ್ರೀರಾಮ ನೆಲೆ ಆಗುವುದರೊಂದಿಗೆ ದೇಶದಲ್ಲಿ ಶಾಂತಿ ಸುಭಿಕ್ಷೆ ನೆಲೆಸುವುದಲ್ಲದೇ, ಮುಂದಿನ ದಿನಗಳಲ್ಲಿ ದೇಶದಲ್ಲಿ ರಾಮರಾಜ್ಯ ನೆಲೆಯಾಗಿ ಶ್ರೀ ರಾಮನ ಕಾಲದ ಆಡಳಿತ ಜಾರಿಗೆ ಬರಲಿದೆ. ಭಾರತ ಜಗತ್ತಿನ ತಾಯಿ ಸ್ಥಾನದಲ್ಲಿ ನಿಲ್ಲುವ ಅರ್ಹತೆಯನ್ನೂ ಹೊಂದಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ಮೃಗವಧೆಯಲ್ಲಿ ಸೋಮವಾರ ಸಂಪನ್ನಗೊಂಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆ ನಡೆದ ಮುಹೂರ್ತದಲ್ಲಿಯೇ ತ್ರೇತಾಯುಗದ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಈ ಪುಣ್ಯ ಕ್ಷೇತ್ರದಲ್ಲಿ ಹನುಮನ ದೇವಸ್ಥಾನ ಪುನರ್ ಸ್ಥಾಪನೆ ಯೋಗಾಯೋಗ. ದೇಶದ ಜನತೆ ಈ ದಿನ ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೆದ್ದಿದ್ದಾರೆ. ತಾಲೂಕಿನಾದ್ಯಂತ ಈದಿನ ಹಬ್ಬದ ವಾತಾವರಣದ ಸಂಭ್ರಮ ಎದ್ದು ಕಾಣುತ್ತಿದೆ ಎಂದೂ ಹೇಳಿದರು.
ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರಮನೆಕೇರಿ ಉದಯಶಂಕರ್, ಸದಸ್ಯರಾದ ಜಿ.ಎಸ್. ಚಿದಂಬರ್, ಜಿ.ಎಂ.ರವೀಂದ್ರ, ಮಾನಿಕಟ್ಟೆ ನಾಗೇಶ್, ಕಾನುಕೊಪ್ಪ ಶಿವಕುಮಾರ್, ಕೆ.ಶ್ರೀಧರ ಉಡುಪ, ಕೇರಿಕೆರೆ ಅನುಪಮ ಅರುಣಕುಮಾರ್, ಗೀತಾ ಜಯಂತ್, ಹೊನ್ನಂಗಿ ಜಯದೇವ್ ಇದ್ದರು.ಸಾಗರ ಬಿಜೆಪಿ ಕಚೇರಿಯಲ್ಲೂ ದೀಪೋತ್ಸವ: ರಾಮ ಭಜನೆ
ಸಾಗರ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಕಾರ್ಯಕರ್ತರು ದೀಪ ಹಚ್ಚಿ ಧನ್ಯತೆ ಪಡೆದು, ರಾಮಭಜನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ರಾಮ ಜನ್ಮಭೂಮಿಯಲ್ಲಿ ರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಗೆ ಭಾರತ ದೇಶವಲ್ಲದೆ ಇಡೀ ಜಗತ್ತು ಸಂಭ್ರಮಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ಸರ್ಕಾರಿ ರಜೆ ಘೋಷಣೆ ಮಾಡದೆ ರಾಮಭಕ್ತರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ ಎಂದು ಆರೋಪಿಸಿದರಲ್ಲದೆ ಕಾಂಗ್ರೆಸ್ ಪಕ್ಷದಲ್ಲಿಯೂ ರಾಮಭಕ್ತರಿದ್ದು, ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ ಎಂದರು.ಡಾ.ರಾಜನಂದಿನಿ ಕಾಗೋಡು ಮಾತನಾಡಿ, ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಜೀವನದ ಅತ್ಯಂತ ಶ್ರೇಷ್ಠ ದಿನಗಳಲ್ಲಿ ಒಂದು. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಮೂರ್ತಿ ಪ್ರತಿಷ್ಠಾಪನೆ ದೇಶದ ಜನರಲ್ಲಿ ಹೊಸ ಉತ್ಸಾಹ ತಂದಿದೆ ಎಂದು ಹೇಳಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿದರು. ಪಕ್ಷದ ಪ್ರಮುಖರಾದ ವಿ.ಮಹೇಶ್, ಮಧುರಾ ಶಿವಾನಂದ್, ಪ್ರೇಮ ಕಿರಣ್ ಸಿಂಗ್, ಮೈತ್ರಿ ಪಾಟೀಲ್, ರಾಧಾಕೃಷ್ಣ ಬೇಂಗ್ರೆ, ರಾಜೇಂದ್ರ ಪೈ ಇನ್ನಿತರರು ಹಾಜರಿದ್ದರು.
.