ಹಿರಿಯರನ್ನು ಗೌರವಿಸುವುದೇ ಭಾರತೀಯ ಸಂಸ್ಕೃತಿ

| Published : Jan 07 2025, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹಿರಿಯರನ್ನು ಗೌರವಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಬಹಳ ವಿಶಿಷ್ಟ. ಅದರಂತೆ ದಿ.ನಾಗಪ್ಪ ಮಲಕಾಜಪ್ಪ ಕೆಲೂರ ಮಾರ್ಗದರ್ಶನ ಹಾಗೂ ಸ್ವಾಭಿಮಾನದ ಬದುಕು ನಮ್ಮನ್ನು ಎತ್ತರದ ಸ್ಥಾನಮಾನದಲ್ಲಿ ಇರುವಂತೆ ಮಾಡಿದೆ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಿರಿಯರನ್ನು ಗೌರವಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಬಹಳ ವಿಶಿಷ್ಟ. ಅದರಂತೆ ದಿ.ನಾಗಪ್ಪ ಮಲಕಾಜಪ್ಪ ಕೆಲೂರ ಮಾರ್ಗದರ್ಶನ ಹಾಗೂ ಸ್ವಾಭಿಮಾನದ ಬದುಕು ನಮ್ಮನ್ನು ಎತ್ತರದ ಸ್ಥಾನಮಾನದಲ್ಲಿ ಇರುವಂತೆ ಮಾಡಿದೆ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ ಅಭಿಪ್ರಾಯಪಟ್ಟರು.

ನಗರದ ವೇದ ಅಕಾಡೆಮಿಯಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೇದ ಅಕಾಡೆಮಿಯ ಸಹಯೋಗದಲ್ಲಿ ಜರುಗಿದ ಜಾನಪದ ಸಾಹಿತ್ಯ ಹಾಗೂ ಶಿಕ್ಷಣ ಎಂಬ ವಿಷಯದ ಕುರಿತು ದಿ.ನಾಗಪ್ಪ ಮಲಕಾಜಪ್ಪ ಕೆಲೂರ ದತ್ತಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಹಿರಿಯರನ್ನು ಸ್ಮರಿಸಲು ನಮಗಿರುವ ಈ ಅವಕಾಶಗಳಲ್ಲಿ ವಿಷಯಗಳನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ದಿ.ನಾಗಪ್ಪ ಅವರ ಆದರ್ಶ ಬದುಕು ಇಂದು ನಮಗೆಲ್ಲ ಮಾದರಿ. ಅವರ ಪರೋಪಕಾರದ ಗುಣ, ಎಲ್ಲರನ್ನೂ ಅಪ್ಪಿ, ಒಪ್ಪಿ ಸಮಾಜವನ್ನು ಪ್ರೀತಿಸುವ ಅವರ ಮಾನವೀಯ ಮೌಲ್ಯಗಳ ನೆಲೆಗಟ್ಟಿನ ಬದುಕು ಶಿವಾನಂದ ಕೆಲೂರ ಹಾಗೂ ದಯಾನಂದ ಕೆಲೂರ ಸಹೋದರರ ವ್ಯಕ್ತಿತ್ವದಲ್ಲಿ ನಾವೆಲ್ಲರೂ ಕಾಣಲು ಸಾಧ್ಯ ಎಂದರು.ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಮಾತನಾಡಿ, ಜಾನಪದ ಸಾಹಿತ್ಯದ ಬದುಕಿನಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿಯ ಜನ ಪ್ರೀತಿ ವಿಶ್ವಾಸದಿಂದ ಬದುಕುವ ಪರಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ, ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿ ಜನಪದರ ಬದುಕಿನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಮಾತನಾಡಿ, ಶಿಕ್ಷಣದ ಬೇರುಗಳು ಎಷ್ಟೇ ಕಹಿಯಾಗಿದ್ದರೂ ಅದರ ಫಲ ಮಾತ್ರ ಸಿಹಿಯಾಗಿರುತ್ತದೆ. ಡಿ.ವಿ.ಜಿಯವರ ಬದುಕಿನ ಜೀವಂತ ಉದಾಹರಣೆಗಳೊಂದಿಗೆ ಶಿಕ್ಷಣದ ಮಹತ್ವವನ್ನು ಹಲವಾರು ಆಯಾಮಗಳಲ್ಲಿ ಬಿಚ್ಚಿಟ್ಟರು.ದಿ.ನಾಗಪ್ಪ ಕೆಲೂರ ಅವರ ಒಡನಾಡಿ ಕೆ.ಸಿ.ದೇಸಾಯಿ ಹಾಗೂ ಶರಣಗೌಡ ಪಾಟೀಲ ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದರು. ಸ್ವಾವಲಂಬನೆ ಹಾಗೂ ಮಾನವೀಯ ಮೌಲ್ಯಗಳ ಸಾಕಾರಮೂರ್ತಿಯಾಗಿ ಬಾಳಿ ಬದುಕಿ ಹೋದವರು ನಾಗಪ್ಪ ಎಂದರು.ಅತಿಥಿಗಳಾಗಿ ವೇದ ಅಕಾಡೆಮಿ ಉಪಾಧ್ಯಕ್ಷ ದಯಾನಂದ ಕೆಲೂರ, ಕಸಾಪ ಪದಾಧಿಕಾರಿಗಳಾದ ಜಯಶ್ರೀ ಹಿರೇಮಠ, ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದರು. ಶಿಕ್ಷಕ ಮೆಹತಾಬ ಕಾಗವಾಡ ನಿರೂಪಿಸಿ ತತ್ವ ಪದಗಳನ್ನು ಹಾಡುವ ಮೂಲಕ ರಂಜಿಸಿದರು. ವೇದ ಅಕಾಡೆಮಿಯ ಮುಖ್ಯ ಗುರುಗಳಾದ ಸುನೀಲ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.