ಆಯಾ ಭಾಷೆಯಲ್ಲಿ ಕೃತಿಕಾರರು ಅತ್ಯುನ್ನತವಾಗಿ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಪರಿಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಭಾಷೆಗಳ ಮೌಲ್ವಿಕ ಕೃತಿಗಳನ್ನು ಬೇರೆ- ಬೇರೆ ಭಾಷೆಗಳಿಗೆ ತರ್ಜುಮೆ ಮಾಡುವ ಕೆಲಸವಾಗಬೇಕು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಹಾಗೂ ಸಾಹಿತಿ ಪ್ರೊ.ಆರ್.ವಿ.ಎಸ್. ಸುಂದರಂ ತಿಳಿಸಿದರು.ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) ಗುರುವಾರ ನಡೆದ ಭಾರತೀಯ ಭಾಷಾ ಉತ್ಸವ- 2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯಾ ಭಾಷೆಯಲ್ಲಿ ಕೃತಿಕಾರರು ಅತ್ಯುನ್ನತವಾಗಿ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಪರಿಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಅವರ ಕೃತಿಗಳನ್ನು ಬೇರೆ- ಬೇರೆ ಭಾಷೆಗಳಿಗೆ ಅನುವಾದ ಮಾಡಿದರೆ ಎಲ್ಲರಿಗೂ ಕೃತಿ ತಲುಪುತ್ತದೆ. ಹೊಸ ತಲೆಮಾರಿಗೆ ವಿಷಯವು ದಾಟುತ್ತದೆ ಎಂದು ಹೇಳಿದರು.
ಪ್ರಪಂಚದ ಬೇರೆ ಬೇರೆ ದೇಶಗಳನ್ನು ನೋಡಿದರೆ ಅಲ್ಲಿ ಒಂದೇ ರೀತಿಯ ಭಾಷೆ, ಆಚಾರ- ವಿಚಾರಗಳು ಇರುತ್ತವೆ. ಅಲ್ಪ-ಸ್ವಲ್ಪ ಬದಲಾವಣೆಗಳು ಇರುತ್ತವೆ. ಫ್ಲೋರಿಡಾದಲ್ಲಿ ನೂರಾರು ಕಿಲೋಮೀಟರ್ ಸುತ್ತಿದರೂ ಒಂದೇ ನಮೂನೆಯ ಭಾಷೆ ಮಾತನಾಡುವವರು ಸಿಗುತ್ತಾರೆ. ಜರ್ಮನಿಯಲ್ಲಿ ಅವರ ಭಾಷೆಯವರೇ ಹೆಚ್ಚು ಇರುತ್ತಾರೆ ಎಂದರು.ಆದರೆ, ಭಾರತದಲ್ಲಿ ಅಂತಹ ವಾತಾವರಣ ಕಾಣುವುದಿಲ್ಲ. ಇಲ್ಲಿ ಕನ್ಯಾಕುಮಾರಿಯಲ್ಲಿ ರೈಲನ್ನು ಹತ್ತಿ ಕಾಶ್ಮೀರದ ಕಡೆಗೆ ಪ್ರಯಾಣ ಶುರು ಮಾಡಿದರೇ, ನಿಲ್ದಾಣಕ್ಕೊಂದು ಭಾಷೆ, ಆಹಾರ ಪದ್ಧತಿ ಬದಲಾವಣೆಯಾಗುತ್ತದೆ. ಒಂದು ನಿಲ್ದಾಣದಲ್ಲಿ ಇಡ್ಲಿ ಕೊಟ್ಟರೆ, ಮತ್ತೊಂದು ನಿಲ್ದಾಣದಲ್ಲಿ ಉಪ್ಪಿಟ್ಟು, ಚಪಾತಿ, ಪೊಂಗಲ್ ಹೀಗೆ ವಿವಿಧ ಖಾದ್ಯಗಳು ಸಿಗುತ್ತವೆ. ಅಲ್ಲದೇ ಸಿಹಿ ಪದಾರ್ಥಗಳಲ್ಲೂ ವೈವಿಧ್ಯತೆ, ಧರಿಸುವ ಬಟ್ಟೆಗಳಲ್ಲೂ ಭಿನ್ನತೆ, ಜೊತೆಗೆ ಮಾತನಾಡುವ ಭಾಷೆಗಳು ಬೇರೆ-ಬೇರೆಯಾಗಿರುತ್ತವೆ. ಇಷ್ಟೆಲ್ಲ ವೈವಿಧ್ಯತೆ ಇದ್ದರೂ ದೇಶ, ಸಂಸ್ಕೃತಿ, ಧರ್ಮದಲ್ಲಿ ಐಕ್ಯತೆಯನ್ನು ಕಾಣುತ್ತವೆ ಎಂದು ಅವರು ತಿಳಿಸಿದರು.
ಸಿಐಐಎಲ್‌ಉಪ ನಿರ್ದೇಶಕ ಪ್ರೊ.ಪಿ.ಆರ್. ಧರ್ಮೇಶ್ ಫರ್ನಾಂಡಿಸ್, ಭಾರತದ ವಿಶಾಲ ಮತ್ತು ಸಮೃದ್ಧ ಭಾಷಾ ಪರಂಪರೆಯನ್ನು ಗೌರವಿಸುವ ಸಲುವಾಗಿ ಭಾರತೀಯ ಭಾಷಾ ಉತ್ಸವ ಆಯೋಜಿಸಲಾಗಿದೆ. ಬಹು ಭಾಷಾವಾದವನ್ನು ಜ್ಞಾನ ಸೃಷ್ಟಿ ಮತ್ತು ಸಾಮಾಜಿಕ ಏಕೀಕರಣದ ಆಧಾರ ಸ್ತಂಭವೆಂದು ಗುರುತಿಸಲಾಗುತ್ತಿರುವ ಈ ಸಂದರ್ಭದಲ್ಲಿ ಈ ಉತ್ಸವವು ಭಾರತೀಯ ಭಾಷೆಗಳೊಂದಿಗೆ ಚಿಂತನೆ, ಅಸ್ಮಿತೆ, ಅನನ್ಯತೆ ಮತ್ತು ರಾಷ್ಟ್ರೀಯ ಐಕ್ಯತೆಯ ಸಾಧನಗಳಾಗಿ ಸಾಮೂಹಿಕವಾಗಿ ತೊಡಗಿಸಿಕೊಳ್ಳುವಿಕೆಗೆ ಸಹಕಾರ ನೀಡುತ್ತದೆ ಎಂದರು.ಇದೇ ವೇಳೆ ಭಾಷೆ, ರಾಷ್ಟ್ರೀಯತೆ ಮತ್ತು ಸಂಸ್ಕೃತಿ ಕುರಿತು ಸಾಹಿತಿ ಡಾ.ಸಿ. ನಾಗಣ್ಣ ವಿಶೇಷ ಉಪನ್ಯಾಸ ನೀಡಿದರು. ಸಿಐಐಎಲ್ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಲ್.ಆರ್. ಪ್ರೇಮ್ ಕುಮಾರ್ ಇದ್ದರು.
----ಕೋಟ್...
ಕೊಡವ, ತುಳು, ಗೋಂಡಿ, ಸವಾರ ಸೇರಿದಂತೆ ಇನ್ನೂ ಅನೇಕ ಭಾಷೆಗಳು ಮೌಖಿಕವಾಗಿವೆ. ಇವುಗಳಲ್ಲೂ ಉತ್ತಮ ಸಾಹಿತ್ಯಗಳು ಇವೆ. ಆ ಸಾಹಿತ್ಯದಲ್ಲಿ ಅವರ ಅನುಭವಗಳು ಪ್ರಸ್ತುತಗೊಂಡಿವೆ. ಅಂತಹ ಸಾಹಿತ್ಯಗಳನ್ನು ಸಿಐಐಎಲ್ ಅಂತಹ ಸಂಸ್ಥೆಗಳು ಗುರುತಿಸಿ, ಅಧ್ಯಯನ ಕೈಗೊಳ್ಳಬೇಕು. ಸಮಾಜಕ್ಕೆ ಅವುಗಳ ಇರುವಿಕೆಯನ್ನು ತಿಳಿಸುವಂತಹ ಕೆಲಸ ಮಾಡಬೇಕು.- ಪ್ರೊ.ಆರ್.ವಿ.ಎಸ್. ಸುಂದರಂ, ಸಾಹಿತಿ