ಚಿಕ್ಕಮಗಳೂರು, ಭಾರತೀಯ ಭಾಷೆ ವೈವಿಧ್ಯತೆಯಿಂದ ಕೂಡಿದೆ. ರಾಷ್ಟ್ರದ ಯಾವುದೇ ಒಂದು ಭಾಷೆಯನ್ನು ಅರ್ಥೈಸಿಕೊಂಡರೆ ಇನ್ನೊಂದು ಭಾಷೆಯನ್ನು ಸುಲಭವಾಗಿ ಅರಿತುಕೊಳ್ಳಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು.

- ಕನ್ನಡ ನಾಡು-ನುಡಿ ಗೀತೆಗಳ ಗಾಯನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತೀಯ ಭಾಷೆ ವೈವಿಧ್ಯತೆಯಿಂದ ಕೂಡಿದೆ. ರಾಷ್ಟ್ರದ ಯಾವುದೇ ಒಂದು ಭಾಷೆಯನ್ನು ಅರ್ಥೈಸಿಕೊಂಡರೆ ಇನ್ನೊಂದು ಭಾಷೆಯನ್ನು ಸುಲಭವಾಗಿ ಅರಿತುಕೊಳ್ಳಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು.

ಕಲ್ಯಾಣನಗರದ ಬಂಜಾರ ಭವನದಲ್ಲಿ ಜಿಲ್ಲಾ ಕಸಾಪ, ಶ್ರೀ ಸಂತ ಸೇವಾಲಾಲ್ ಬಂಜಾರ ಅಭಿವೃದ್ಧಿ ಸಂಘ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮತ್ತು ನಾಯ್ಕ್ ಕುಟುಂಬದ ಸಹಯೋಗದೊಂದಿಗೆ ಆಯೋಜಿಸಿದ್ಧ ಕನ್ನಡ ನಾಡು-ನುಡಿ ಗೀತೆ ಗಳ ಗಾಯನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳಿಗಾಗಿ ಪಾಲಕರು ಸಹಜವಾಗಿ ಆಸ್ತಿ-ಅಂತಸ್ತಿಗೆ ವಾರಸುದಾರನಾಗಿ ಮಾಡುತ್ತಾರೆ. ಈ ನಡುವೆ ಕನ್ನಡ ಸಂಸ್ಕೃತಿ, ಭಾಷಾ ಸೊಗಡಿನ ವಾರಸುದಾರನಾಗಿ ಮಾಡಬೇಕು. ಕನ್ನಡ ಪುಸ್ತಕಗಳ ಓದುವ ಹವ್ಯಾ ಸ ಬೆಳೆಸಲು ಮನೆಯಲ್ಲಿ ಪಾಲಕರು ಹೆಜ್ಜೆಯಿಡದಿದ್ದರೆ ಮಾತೃಭಾಷೆ ಭವಿಷ್ಯದಲ್ಲಿ ಕಳೆದುಹೋಗುವ ಆತಂಕ ವಿದೆ ಎಂದು ಹೇಳಿದರು.ಪ್ರಸ್ತುತ ದಿನಮಾನದ ಯುವಸಮೂಹಕ್ಕೆ ಕನ್ನಡದ ಒತ್ತಕ್ಷರ ಕೂಡಿಸಿ ಓದುವುದು ಕಷ್ಟವಿದೆ. ಹಳೇ ಹಾಗೂ ನವ್ಯಗನ್ನಡದ ಗಂಧ ವಿಲ್ಲದಂತಾಗಿದೆ. ಕುಟುಂಬದಲ್ಲಿ ಅಪ್ಪ, ಅಮ್ಮ, ಭಾವ, ಚಿಕ್ಕವ್ವ, ದೊಡ್ಡವ್ವ ಎಂಬ ಪದಬಳಕೆ ನಶಿಸಿ, ಅಂಕಲ್, ಆಂಟಿ, ಬ್ರೋ ಎಂಬ ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ವಿಷಾದಕರ ಸಂಗತಿ ಎಂದರು.ಮನೆಗಳಲ್ಲಿ ಶುಭ ಕಾರ್ಯಗಳಲ್ಲೂ ಆಂಗ್ಲ ವ್ಯಾಮೋಹ ಹೆಚ್ಚಾದ ಪರಿಣಾಮ ಲಗ್ನಪತ್ರಿಕೆ ಶಾಸ್ತ್ರ, ಮಕ್ಕಳ ಜನ್ಮದಿನದಲ್ಲೂ ಆಂಗ್ಲ ಸಂಸ್ಕೃತಿ ಬಂದು, ಕನ್ನಡ ಸಂಸ್ಕೃತಿ ಮರೆಸಲಾಗುತ್ತಿದೆ. ಮಾತೃಭಾಷೆ ಕಡ್ಡಾಯವಾಗಿ ಉಳಿಯಬೇಕಾದರೆ ಪಾಲಕರು ಬದಲಾಗಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಮನೆಯಲ್ಲಿ ಸಾರ್ವತ್ರಿಕವಾಗಿ ಕನ್ನಡ ಕಡ್ಡಾಯಗೊಳಿಸಿದರೆ ಭಾಷಾ ಬೆಳವಣಿಗೆ ಸಾಧ್ಯ ಎಂದು ಹೇಳಿದರು.ಇಂದಿನಿಂದಲೇ ಕನ್ನಡ ಭಾಷಾ ಸಂಸ್ಕೃತಿ ಭಿತ್ತುವ ಕಾರ್ಯವಾಗದಿದ್ದರೆ, ಭವಿಷ್ಯದಲ್ಲಿ ಭಾಷೆ ಕಳೆದುಕೊಂಡು ಹುಡುಕಾಟ ವಾದೀತು. ಹೀಗಾಗಿ ಕಳೆದುಕೊಳ್ಳುವ ಮುನ್ನವೇ ಎಚ್ಚರಿಕೆ ವಹಿಸಿ ಪೂರ್ವಿಕರು ಕಷ್ಟಪಟ್ಟು ಕಟ್ಟಿಬೆಳೆಸಿದ ಭಾಷೆಯನ್ನು ನಶಿಸದಂತೆ ಶ್ರೀಮಂತಗೊಳಿಸಲು ಮುಂಜಾಗ್ರತೆ ವಹಿಸಬೇಕು ಎಂದರು.ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಗೆ ಬ್ರಿಟೀಷರ ಆಳ್ವಿಕೆಯಲ್ಲೂ ಅಳಿಸಲಾಗಿಲ್ಲ. ಆಧುನಿಕ ಪ್ರಪಂಚದ ಕಾಲ ಘಟ್ಟದಲ್ಲಿ ಭಾಷೆ ಉಳಿಸಿ ಬೆಳೆಸಿ ಎನ್ನುವ ಹೋರಾಟ ನಡೆಸಲಾಗುತ್ತಿದೆ. ಇಂದಿಗೂ ದೇಶದಲ್ಲಿ ಸಾವಿರಾರು ಭಾಷೆಗಳಿವೆ, ನುಂಗುವ ಪ್ರಯತ್ನವಾಗಿದ್ದರೆ ಅಷ್ಟು ಭಾಷೆಗಳನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಕಿವಿಮಾತು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಜಗತ್ತಿನ ಎಲ್ಲಾ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಅಮ್ಮನ ಭಾಷೆ ಕನ್ನಡ ಮರೆಯಬಾರದು. ಕನ್ನಡವನ್ನು ರಾಜ್ಯದಲ್ಲೇ ಮುಗಿಲೆತ್ತರಕ್ಕೆ ಕೊಂಡೊಯ್ಯುವ ಸಲುವಾಗಿ ಕಸಾಪ ಐದು ರಾಜ್ಯ ಗಳನ್ನು ಒಟ್ಟುಗೂಡಿಸಿ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಸಮ್ಮೇ ಳನ ನಡೆಸಿ ಭಾಷಾ ಸಂಸ್ಕೃತಿ ಎತ್ತಿಹಿಡಿದಿದೆ ಎಂದರು.ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ನವೆಂಬರ್ ಮಾಸಕ್ಕೆ ಸೀಮಿತಗೊಳಿಸದೇ ದೈನಂದಿನ ಚಟುವಟಿಕೆಗಳಲ್ಲಿ ಆದಷ್ಟು ಕನ್ನಡದಲ್ಲೇ ವ್ಯವ ಹರಿಸಿದರೆ, ಕನ್ನಡ ಎಂದಿಗೂ ನಶಿಸಲು ಸಾಧ್ಯವಿಲ್ಲ. ಸಾಹಿತ್ಯ, ಸಂಗೀತ, ವಚನ, ಕೀರ್ತನೆಗಳ ಬೆಳೆದಿರುವ ಕನ್ನಡ ಭಾಷೆ ಎಂದಿಗೂ ಅಜಾರಾಮರ ಎಂದು ತಿಳಿಸಿದರು.ಇದೇ ವೇಳೆ ಪೂರ್ವಿ ಸುಗಮ ಸಂಗೀತ ತಂಡದಿಂದ ಕವಿಗೀತೆ ಗಾಯನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತ ಸೇವಾಲಾಲ್ ಬಂಜಾರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಅಣ್ಣಾನಾಯ್ಕ್ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ನಿವೃತ್ತಿ ಬ್ಯಾಂಕ್ ಅಧಿಕಾರಿ ನಿಂಗಾನಾಯ್ಕ್, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಉ ಪಸ್ಥಿತರಿದ್ದರು. ಕಸಾಪ ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪನಾಯ್ಕ್ ಸ್ವಾಗತಿಸಿದರು. ದೀಪನಾ ಯ್ಕ್ ವಂದಿಸಿದರು. ನವಿತಾ ನಿರೂಪಿಸಿದರು.