ಮಂಗಳೂರು: ಇರಾನ್ ಬಳಿಯ ಹೊರ್ಮುಜ್ ಜಲಸಂಧಿಯಲ್ಲಿ ಬಾಕಿಯಾಗಿದ್ದ ಕರಾವಳಿಯ ನಾವಿಕನಿದ್ದ ಎಲ್‌ಪಿಜಿ ತುಂಬಿದ ನೌಕೆ ಮುಂಬೈ ತಲುಪಿದ್ದು ಶೀಘ್ರವೇ ಮಂಗಳೂರಿಗೆ ಆಗಮಿಸಲಿದೆ.
ಫೆ.28ರಂದು ಕುವೈಟ್‌ನಲ್ಲಿ ನೌಕೆಗೆ ಎಲ್‌ಪಿಜಿ ತುಂಬಿಸುತ್ತಿದ್ದಾಗಲೇ ಯುದ್ದ ಆರಂಭವಾಗಿ ಸಂಕಷ್ಟ ಎದುರಾಗಿತ್ತು. ನಂತರ ಶಾರ್ಜಾಕ್ಕೆ ಹೋಗಿ ಬಳಿಕ ಹೊರ್ಮುಜ್ ಮೂಲಕ ಬಂದಾಗ ಅಲ್ಲಿ ಎಲ್ಲ ನೌಕೆಗಳ ಜೊತೆ ಈ ನೌಕೆಯನ್ನೂ ತಡೆ ಹಿಡಿಯಲಾಗಿತ್ತು. ಇದರಿಂದಾಗಿ ಕರಾವಳಿಯ ಮಂಗಳೂರಿನ ನಾವಿಕ ಸುಮಾರು 15 ದಿನಗಳ ಕಾಲ ಅಲ್ಲಿಯೇ ಬಾಕಿ ಉಳಿದಿದ್ದರು. ಈ ನೌಕೆಯಲ್ಲಿ 40 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಇದೆ. ನಾವಿಕನಿದ್ದ ನೌಕೆ ಸಮೀಪದಲ್ಲೇ ಡ್ರೋನ್, ಕ್ಷಿಪಣಿ ದಾಳಿ ನಡೆದಿತ್ತು. ಇದರಿಂದಾಗಿ ಹಲವು ನೌಕೆಗಳಿಗೆ ಹಾನಿಯಾಗಿತ್ತು. ಶಾರ್ಜಾದಿಂದ ಮಾ.4ರಂದು ಹೊರಟು ಹೊರ್ಮುಜ್‌ನಲ್ಲಿ ಬಾಕಿಯಾಗಿತ್ತು. ಕೊನೆಗೂ ಭಾರತೀಯ ನೌಕಾಪಡೆಯ ಬೆಂಗಾವಲಿನಲ್ಲಿ ಹೊರ್ಮುಜ್ ದಾಟಿತ್ತು. ಮಸ್ಕತ್‌ಗೆ ಪ್ರಯಾಣಿಸಿ ನಂತರ ಮಾ.27ರಂದು ಗುಜರಾತ್‌ನ ಕಾಂಡ್ಲಾ ಬಂದರಿಗೆ, ಅಲ್ಲಿಂದ ಮುಂಬೈ ಬಂದರು ತಲುಪಿದೆ. ಏ.9ರ ವೇಳೆಗೆ ಈ ನೌಕೆ ಮಂಗಳೂರು ಬಂದರು ತಲುಪುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.ಇನ್ನೊಂದು ಎಲ್‌ಪಿಜಿ ನೌಕೆ ಆಗಮನ: ನವ ಮಂಗಳೂರು ಬಂದರಿಗೆ ಗುರುವಾರ ಆಗಮಿಸಿದ್ದ ಅರೂರ್ ನೌಕೆ ಎಲ್‌ಪಿಜಿಯನ್ನು ಖಾಲಿ ಮಾಡುತ್ತಿದೆ. ಇದು ತೆರಳಿದ ಬಳಿಕವೇ ಎಲ್‌ಪಿಜಿ ಹೊತ್ತ ಜಗ್ ವಸಂತ್ ನೌಕೆ ಎನ್‌ಎಂಪಿಎ ಪ್ರವೇಶಿಸಲಿದೆ. ಗುಜರಾತ್ ಬಂದರಿನಿಂದ ಹೊರಟ ಈ ನೌಕೆ ಶನಿವಾರ ಮಂಗಳೂರು ಬಂದರು ಸರಹದ್ದು ತಲುಪಿದೆ. ಅರೂರ್ ನೌಕೆ ಎಲ್‌ಪಿಜಿ ಖಾಲಿ ಮಾಡಿ ವಾಪಸ್ ತೆರಳಿದ ಬಳಿಕವಷ್ಟೆ ಜಗ್ ವಸಂತ್ ನೌಕೆ ಬಂದರು ಪ್ರವೇಶಿಸಲಿದೆ. ಈ ನೌಕೆಯಲ್ಲಿ 9,500 ಮೆಟ್ರಿಕ್ ಟನ್ ಎಲ್‌ಪಿಜಿ ಇದೆ ಎಂದು ಎನ್‌ಎಂಪಿಎ ಮೂಲಗಳು ತಿಳಿಸಿವೆ.